ಬೀದರ: ಕೋವಿಡ್ ಲಾಕ್‌ಡೌನ್ ಸಂಕಷ್ಟದ ವೇಳೆ ಬಡ ಕುಟುಂಬಗಳಿಗೆ ಸಮರ್ಪಕವಾಗಿ ಪಡಿತರ ಆಹಾರಧಾನ್ಯ ಪೂರೈಸದ್ದಕ್ಕೆ ರಾಜ್ಯದ 20 ಜಿಲ್ಲೆಗಳ 180 ಪಡಿತರ ಅಂಗಡಿಗಳ ಪರವಾನಗಿಯನ್ನು ಅಮಾನತು ಮಾಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಡಿತರವನ್ನು ಬಡವರಿಗೆ ತಲುಪಿಸುವುದೇ ನಮ್ಮ ಜವಾಬ್ದಾರಿ. ಆದರೆ, ಈ ಕರ್ತವ್ಯದಲ್ಲಿ ಕೆಲವೆಡೆ ವಿತರಕರು ಲೋಪ ಎಸಗಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.
8763 ಕಾರ್ಡ್ ವಜಾ: ಬೀದರ ಜಿಲ್ಲೆಯ 191 ಜನ ಸೇರಿ ರಾಜ್ಯದಲ್ಲಿ ಅನರ್ಹರು ಪಡೆದಿದ್ದ 8763 ಬಿಪಿಎಲ್ ಪಡಿತರ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಅನರ್ಹರಿಂದ ಸುಮಾರು 68 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದರು. ತೆರಿಗೆ ಕಟ್ಟುವವರು, ಸರಕಾರಿ ನೌಕರರು, ಅನರ್ಹರು ಪಡಿತರ ಕಾರ್ಡ್ ಪಡೆಯುವುದು ಶಿಕ್ಷಾರ್ಹ ಅಪರಾಧ ಎಂದು ಎಚ್ಚರಿಸಿದರು.
ಸಚಿವನಾದ ಮೇಲೆ 20 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಲಾಕ್ ಡೌನ್ ಜಾರಿಯಾದ ಬಳಿಕ ಏಪ್ರಿಲ್‌ನಿಂದ ಪಡಿತರ ವಿತರಣೆ ಕುರಿತು ಪರಿಶೀಲಿಸಿದ್ದೇನೆ. ಯಾವುದೇ ಲೋಪವಾಗದಂತೆ ಬಡವರಿಗೆ ಪಡಿತರ ವಿತರಿಸುವಂತೆ ಸೂಚಿಸಿದ್ದೇನೆ ಎಂದ ಅವರು, ಬೀದರ ಜಿಲ್ಲೆಯಲ್ಲಿ ಏಪ್ರಿಲ್‌ನಲ್ಲಿ ಶೇ. 91ರಷ್ಟು ಹಾಗೂ ಮೇ ತಿಂಗಳಲ್ಲಿ ಶೇ. 95ರಷ್ಟು ಪಡಿತರ ವಿತರಣೆಯಾಗಿದೆ. ಅನ್ಯ ಜಿಲ್ಲೆ, ಅನ್ಯ ರಾಜ್ಯಗಳ ವಲಸಿಗರು ಜೂನ್ ತಿಂಗಳಾಂತ್ಯದವರೆಗೆ ಆಧಾರ್ ಕಾರ್ಡ್ ತೋರಿಸಿ ಪಡಿತರ ಪಡೆಯಬಹುದು ಎಂದು ತಿಳಿಸಿದರು.
ರಾತ್ರಿ 8ರವರೆಗೆ ರೇಷನ್: ಪಡಿತರ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ, ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ರೇಷನ್ ಅಂಗಡಿಯವರು ಬಡವರಿಂದ ಹಣ ಪಡೆಯಬಾರದು. ಮಳೆಗಾಲ ಆರಂಭದಿಂದ ಗ್ರಾಮೀಣ ಭಾಗದಲ್ಲಿ ಹಗಲಲ್ಲಿ ರೈತರಿಗೆ ಪಡಿತರ ಪಡೆಯಲು ಸಮಸ್ಯೆಯಾಗುತ್ತಿದೆ ಎಂಬುದು ಗಮನಕ್ಕೆ ಬಂದಿದ್ದು, ಹಾಗಾಗಿ ರಾತ್ರಿ 8 ಗಂಟೆಯವರೆಗೆ ರೇಷನ್ ವಿತರಣೆಗೆ ನ್ಯಾಯಬೆಲೆ ಅಂಗಡಿಕಾರರಿಗೆ ಜಿಲ್ಲಾಧಿಕಾರಿ ಮೂಲಕ ಸೂಚಿಸಲಾಗುವುದು ಎಂದರು.