ಗುವಾಹಟಿ: ಆಸ್ಸಾಂನ ಕರ್ಬಿ ಹಾಗೂ ನಾಗಾಂವ್ ಜಿಲ್ಲೆಯ ಗಡಿ ಭಾಗದಲ್ಲಿ 18 ಕಾಡಾನೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಒಂದು ಸ್ಥಳದಲ್ಲಿ 4 ಹಾಗೂ ಮತ್ತೊಂದು ಸ್ಥಳದಲ್ಲಿ 14 ಆನೆಗಳ ಮೃತ ದೇಹಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಿಡಿಲು ಬಡಿದು ಸಾವು :
ಕಾಡಾನೆಗಳ ಸಾವಿಗೆ ಸಿಡಿಲು ಬಡಿತ ಕಾರಣವಾಗಿರಬಹುದೆಂದು ಅರಣ್ಯಾಧಿಕಾರಿ ಅಮಿತ್ ಹೇಳಿದ್ದಾರೆ. ಆನೆಗಳ ದೇಹಗಳ ಮೇಲೆ ಸುಟ್ಟಿರುವ ಗುರುತು ಇದೆ. ಬುಧವಾರ ರಾತ್ರಿ ಬೆಟ್ಟದ ಮೇಲೆ ಆನೆಗಳಿಗೆ ಸಿಡಿಲು ಹೊಡೆದಿರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.
“ಸಿಡಿಲು ಆನೆಗಳ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ಸಿಡಿಲು ಬಡಿದು ಪ್ರಾಣಿಗಳು ಸಾವನ್ನಪ್ಪಿದ ಘಟನೆಗಳು ನಡೆದಿವೆ. ಆದರೆ ಆನೆಗಳು ದೊಡ್ಡ ಸಂಖ್ಯೆಯಲ್ಲಿ ಮೃತಪಟ್ಟಿವೆ” ಎಂದು ಅಸ್ಸಾಂನ ಮುಖ್ಯ ವನ್ಯಜೀವಿ ವಾರ್ಡನ್ ಎಂ.ಕೆ. ಯಾದವ ಅವರು ಹೇಳಿದ್ದಾರೆ.
ಪಶುವೈದ್ಯಕೀಯ ವೈದ್ಯರು ಮತ್ತು ವನ್ಯಜೀವಿ ತಜ್ಞರ ತಂಡ ಕಂಡಲಿಗೆ ಅರಣ್ಯಕ್ಕೆ ತೆರಳಿದ್ದು, ಶುಕ್ರವಾರ ಬೆಳಗ್ಗೆ ಅವರು ಸ್ಥಳಕ್ಕೆ ತಲುಪುವ ನಿರೀಕ್ಷೆಯಿದೆ ಎಂದಿದ್ದಾರೆ.