ಉಡುಪಿ: ಇಲ್ಲಿನ ಕರಾವಳಿ ಬೈಪಾಸ್ ನಲ್ಲಿರುವ ಹೋಟೆಲೊಂದರ 18 ಮಂದಿ ನೌಕರರಿಗೆ ಕೋವಿಡ್-19 ಸೋಂಕು ಇರುವುದು ದೃಢ ಪಟ್ಟಿದೆ.
ಈ ಹೋಟೆಲಿನ ಮಾಲಕರಿಗೆ ಈ ಹಿಂದೆ ಕೋವಿಡ್-19 ಪಾಸಿಟಿವ್ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ 20 ಮಂದಿ ನೌಕರರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಅವರಲ್ಲಿ ಇಬ್ಬರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಭಟ್ಕಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಉಳಿದ 18 ಮಂದಿ ನೌಕರರನ್ನು ಕೋವಿಡ್ ಪರೀಕ್ಷೆ ಗೆ ಒಳಪಡಿಸಲಾಗಿತ್ತು. ಇದೀಗ ಇವರೆಲ್ಲರ ವರದಿ ಪಾಸಿಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಈ ಹೋಟೆಲನ್ನು ಸೀಲ್ ಡೌನ್ ಮಾಡಲಾಗಿದೆ.
ಇದನ್ನೂ ಓದಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ಕೋವಿಡ್ ಪಾಸಿಟಿವ್!
ಉಡುಪಿ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಾಣುತ್ತಿದೆ. ಸೋಮವಾರ ಜಿಲ್ಲೆಯಲ್ಲಿ 98 ಜನರಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 2321ಕ್ಕೆ ಏರಿಕೆಯಾಗಿದೆ. ಉಡುಪಿ ಪುತ್ತಿಗೆ ಮಠದ ಶ್ರೀಗಳಿಗೂ ಇಂದು ಕೋವಿಡ್ ಸೋಂಕು ದೃಢವಾಗಿದೆ. ಉಡುಪಿ ನ್ಯಾಯಾಲಯದ ನ್ಯಾಯಾಧೀಶರೊಬ್ಬರಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಎರಡು ದಿನಗಳ ಕಾಲ ಕೋರ್ಟ್ ಸಂಕೀರ್ಣ ಸೀಲ್ ಡೌನ್ ಆಗಿರಲಿದೆ.