ಲಕ್ನೋ: ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಸೇರಿದ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಎನ್‌ಟಿಪಿಸಿ)ದ ಬಾಯ್ಲರ್ ಸ್ಫೋಟಿಸಿ 20 ಮಂದಿ ಅಸುನೀಗಿದ್ದಾರೆ. ಈ ಘಟನೆಯಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಅವರಲ್ಲಿ ಹೆಚ್ಚಿನವರಿ ಗಂಭೀರ ಪ್ರಮಾಣದ ಸುಟ್ಟ ಗಾಯಗಳಾಗಿವೆ. ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿರುವ ಉನ್‌ಚಹಾರ್‌ನಲ್ಲಿರುವ ಸ್ಥಾವರಲ್ಲಿ ಈ ದುರಂತ ನಡೆದಿದೆ. ಮಾರಿಷಸ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಘಾತ ವ್ಯಕ್ತಪಡಿಸಿದ್ದಾರೆ. ಸಾವಿಗೀಡಾದ ಮತ್ತು ಗಾಯಗೊಂಡ ಕುಟುಂಬ ಸದಸ್ಯರಿಗೆ ಕ್ರಮವಾಗಿ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಸಣ್ಣ ಪ್ರಮಾಣದಲ್ಲಿ ಗಾಯಗೊಂಡವರಿಗೆ 25 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಜತೆಗೆ ತನಿಖೆಗೆ ಕೂಡ ಆದೇಶ ನೀಡಿದ್ದಾರೆ.
ಹೇಗಾಯಿತು?: ಮೂವತ್ತು ವರ್ಷಗಳಿಂದ ಚಾಲ್ತಿಯಲ್ಲಿರುವ ಈ ವಿದ್ಯುತ್ ಸ್ಥಾವರದಲ್ಲಿ ಮಾರ್ಚ್‌ನಿಂದ 500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಹೊಸ ಘಟಕಕ್ಕೆ ಚಾಲನೆ ನೀಡಲಾಗಿತ್ತು. ಬುಧವಾರ ಇಳಿ ಹಗಲು 3.30ಕ್ಕೆ ಭಾರಿ ಸದ್ದು ಕೇಳಿಸಿತು. ಯುನಿಟ್ ಸಂಖ್ಯೆ ಆರರ ಮೂಲೆಯಲ್ಲಿರುವ ಪೈಪ್ ಒಡೆದಿದ್ದು ಕಂಡು ಬಂದಿತ್ತು.
ಅದರಿಂದ ಗ್ಯಾಸ್ ಹೊರಸೂಸುತ್ತಿತ್ತು. ಅದು ಬಿಸಿಯಾಗಿದ್ದುದರಿಂದ ಸುತ್ತಮುತ್ತಲು ಸಿಡಿದು ಹೋಯಿತು. ಹೀಗಾಗಿ 20 ಮಂದಿ ಸಾವಿಗೀಡಾಗಿದ್ದಾರೆ. 90-100 ಮಂದಿ ಗಾಯಗೊಂಡಿದ್ದಾರೆ ಎಂದು ಎನ್‌ಟಿಪಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಸುದ್ದಿ ತಿಳಿದ ಕೂಡಲೇ ಆ್ಯಂಬ್ಯುಲೆನ್ಸ್‌ಗಳ ಜತೆಗೆ ವೈದ್ಯರು, ಜಿಲ್ಲಾಡಳಿತ ಮತ್ತು ಇತರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡವು. ಸ್ಥಳದಲ್ಲಿಯೇ ಇದ್ದ ಆಸ್ಪತ್ರೆಯಲ್ಲಿ ಸುಮಾರು 80 ಮಂದಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಯನ್ನೂ ರಕ್ಷಣಾ ಕಾರ್ಯಾಚರಣೆಗಾಗಿ ಕಳುಹಿಸಿಕೊಡಲಾಗಿದೆ.
ಕೇಂದ್ರ ವಿದ್ಯುತ್ ಖಾತೆ ಸಚಿವ ಆರ್.ಕೆ.ಸಿಂಗ್ ಪ್ರತಿಕ್ರಿಯೆ ನೀಡಿ, ಘಟನೆಗೆ ಸಂಬಂಧಿಸಿದಂತೆ ಸಂಸ್ಥೆ ಆಂತರಿಕವಾಗಿ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.