ಥಾಣೆ: ಮಹಾರಾಷ್ಟ್ರದ ಥಾಣೆಯ ಕಲ್ವಾಲದಲ್ಲಿ ಇರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ 24 ಗಂಟೆಗಳ ಅವಧಿಯಲ್ಲಿ 18 ಮಂದಿ ರೋಗಿಗಳು ಅಸುನೀಗಿದ್ದಾರೆ. ಈ ಪೈಕಿ 10 ಮಂದಿ ಮಹಿಳೆಯರು, 8 ಮಂದಿ ಪುರುಷರು ಸೇರಿದ್ದಾರೆ ಎಂದು ಪಾಲಿಕೆ ಆಯುಕ್ತ ಅಭಿಜಿತ್ ಬಂಗಾರ್ ಹೇಳಿದ್ದಾರೆ. ಅಸುನೀಗಿದವರ ಪೈಕಿ 12 ಮಂದಿ ಐವತ್ತು ವರ್ಷಕ್ಕಿಂತ ಮೇಲ್ಪಟ್ಟವರು.
ಈ ಬಗ್ಗೆ ತನಿಖೆಗಾಗಿ ಸಮಿತಿಯನ್ನೂ ರಚಿಸಲಾಗಿದೆ. ಅಸುನೀಗಿದವರೆಲ್ಲರೂ ಮೂತ್ರಪಿಂಡದಲ್ಲಿ ಕಲ್ಲು, ಗಂಭೀರ ಪ್ರಮಾಣದ ಪಾರ್ಶ್ವವಾಯು, ನ್ಯುಮೋನಿಯಾ, ಕರುಳಿನಲ್ಲಿ ಹುಣ್ಣು, ನೆತ್ತರು ನಂಜು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆದರೆ, 24 ಗಂಟೆಗಳಲ್ಲಿ ಇಷ್ಟೊಂದು ಸಾವು ಸಂಭವಿಸಿರುವ ಕುರಿತು ಅನುಮಾನ ಎದ್ದಿರುವ ಕಾರಣ 2 ದಿನಗಳಲ್ಲಿ ವರದಿ ಸಲ್ಲಿಸುವಂತೆ ಆಸ್ಪತ್ರೆಗೆ ಸರ್ಕಾರ ಸೂಚಿಸಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್, ಥಾಣೆಯ ಆಸ್ಪತ್ರೆಯಲ್ಲಿ ಉಂಟಾಗಿರುವ ಸಾವು ಅತ್ಯಂತ ದುಃಖದ ವಿಚಾರ. ಕೆಲವು ದಿನಗಳಿಂದ ಈ ರೀತಿ ಸಾವು ನೋವು ಉಂಟಾಗುತ್ತಿದ್ದರೂ ಸ್ಥಳೀಯ ಮಹಾನಗರ ಪಾಲಿಕೆ ಎಚ್ಚೆತ್ತುಕೊಳ್ಳದೇ ಇದ್ದದ್ದು ಖಂಡನೀಯ ಎಂದಿದ್ದಾರೆ.
ಲೂಟಿ ಮತ್ತು ಜುಮ್ಲಾಗಳು ದೇಶದ ಆರೋಗ್ಯ ವ್ಯವಸ್ಥೆಯನ್ನು ಕಂಗೆಡಿಸಿವೆ. ಪ್ರಧಾನಿ ಮೋದಿಯವರ ಪ್ರತಿ ಮಾತಿನಲ್ಲಿಯೂ ಸುಳ್ಳು ಎದ್ದು ಕಾಣುತ್ತಿದೆ. ಎಐಐಎಂಎಸ್‌ಗಳನ್ನು ಸ್ಥಾಪಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಮಾಧ್ಯಮ ವರದಿಗಳಲ್ಲಿ ಉಲ್ಲೇಖವಾಗಿರುವಂತೆ ಆ ಸಂಸ್ಥೆಗಳಲ್ಲಿ ವೈದ್ಯರು ಮತ್ತು ಇತರ ಸಿಬ್ಬಂದಿಯ ಕೊರತೆ ಇದೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ