ಹೊಸದಿಲ್ಲಿ: ಮೇ 3ರಂದು ಲಾಕ್ ಡೌನ್ ಮುಗಿಯುತ್ತದೆ ಎಂದು ಭಾವಿಸಿದ್ದ ಅನೇಕ ವಲಸೆ ಕಾರ್ಮಿಕರಿಗೆ ಮತ್ತೆ ನಿರ್ಬಂಧ ವಿಸ್ತರಣೆಯಾಗಿರುವುದು ಆಘಾತ ಉಂಟುಮಾಡಿದೆ. ಕಾರ್ಮಿಕರ ಅಂತಾರಾಜ್ಯ ಸಂಚಾರಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದ್ದು, ಅನೇಕ ರಾಜ್ಯಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಆದರೆ, ಹಲವಾರು ಕಾರ್ಮಿಕರು ಆಹಾರ, ಹಣ, ಆಶ್ರಯವಿಲ್ಲದೇ ಒದ್ದಾಡುತ್ತಿದ್ದು, ಸರ್ಕಾರವನ್ನು ಸಂಪರ್ಕಿಸುವುದು ಹೇಗೆಂದು ತಿಳಿಯದೇ, ಊರಿಗೆ ಹೋಗಲು ಹಣಕಾಸು ವ್ಯವಸ್ಥೆ ಮಾಡಲಾಗದೇ ಹತಾಶರಾಗಿದ್ದಾರೆ.
ಊರಿಗೆ ತೆರಳುವ ಧಾವಂತದಲ್ಲಿ 18 ಮಂದಿ ಕಾರ್ಮಿಕರು ಕಾಂಕ್ರೀಟ್ ಮಿಶ್ರಣ ಮಾಡುವ ಯಂತ್ರದೊಳಗೆ ಕುಳಿತುಕೊಂಡು ಮಧ್ಯಪ್ರದೇಶ ದಿಂದ ಉತ್ತರಪ್ರದೇಶದ ಲಕ್ನೋಗೆ ತೆರಳುತ್ತಿದ್ದ ಮನಕಲಕುವ ಘಟನೆ ಶನಿವಾರ ನಡೆದಿದೆ. ಮಧ್ಯ ಪ್ರದೇಶದ ಹೆದ್ದಾರಿಯಲ್ಲಿ ಟ್ರಕ್ ಅನ್ನು ತಡೆದ ಪೊಲೀಸರು, ಒಳಗೆ ತಪಾಸಣೆ ನಡೆಸಿದಾಗ 18 ಕಾರ್ಮಿಕರು ಒಬ್ಬರ ಮೇಲೊಬ್ಬರಂತೆ ಒತ್ತೂತ್ತಾಗಿ ಸಿಮೆಂಟ್ ಮಿಶ್ರಣ ಯಂತ್ರದೊಳಗೆ ಕುಳಿತಿದ್ದ ದೃಶ್ಯ ಕಂಡುಬಂದಿದೆ.
ಅವರೆಲ್ಲರನ್ನು ಕೆಳಗಿಳಿಸಿ ಕ್ವಾರಂಟೈನ್‌ಗೆ ಕಳುಹಿಸಲಾಗಿದ್ದು, ಟ್ರಕ್ ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಮಿಕರನ್ನು ಸ್ಕ್ರೀನಿಂಗ್ ಬಳಿಕ ಬಸ್ ಮೂಲಕ ಲಕ್ನೋಗೆ ತಲುಪಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಹಾರಾಷ್ಟ್ರ, ಚೆನ್ನೈನಲ್ಲಿ ಬೀದಿಗಿಳಿದ ಕಾರ್ಮಿಕರು: ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಶನಿವಾರ ಸುಮಾರು ಸಾವಿರ ವಲಸೆ ಕಾರ್ಮಿಕರು ಬೀದಿ ಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬಹುತೇಕ ಉತ್ತರ ಭಾರತ ಮೂಲದವರಾದ ಈ ಕಾರ್ಮಿಕರು, ತಮ್ಮನ್ನು ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಿ ಎಂದು ಗೋಗರೆದಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜಿನ ನಿರ್ಮಾಣ ಸ್ಥಳದಲ್ಲಿ ಆಶ್ರಯ ಪಡೆದಿದ್ದ ಈ ಕಾರ್ಮಿಕರು ಬೆಳಗ್ಗೆ ಏಕಾ ಏಕಿ ರಸ್ತೆಗಿಳಿದು, ಹೆದ್ದಾರಿ ತಡೆ ನಡೆಸಿ ರೈಲು ನಿಲ್ದಾಣ ದತ್ತ ನಡೆಯಲು ಆರಂಭಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ತಮಿಳು ನಾಡಿನ ವೆಳಚೇರಿ ಚೆಕ್‌ಪೋಸ್ಟ್‌ನಲ್ಲೂ ಶನಿವಾರ ಕಾರ್ಮಿಕರು ಪ್ರತಿಭಟನೆ ನಡೆಸಿ, ನಮ್ಮೂರುಗಳಿಗೆ ಕಳಿಸಿ ಎಂದು ಮನವಿ ಮಾಡಿದ ಘಟನೆ ನಡೆದಿದೆ.
ಅರ್ಜಿಗಾಗಿ
ಠಾಣೆಗೆ ಬಂದರು!
ದೆಹಲಿಯಲ್ಲಿ ವಲಸೆ ಕಾರ್ಮಿಕರನ್ನು ಊರಿಗೆ ಕಳಿಸಬೇಕೆಂದರೆ ಅವರು ಪ್ರಯಾಣ ಅರ್ಜಿ ಭರ್ತಿ ಮಾಡಬೇಕಾದ್ದು ಕಡ್ಡಾಯ ಎಂಬ ಸುಳ್ಳು ಸುದ್ದಿಯೊಂದು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನು ನಂಬಿದ ಕೆಲವು ಕಾರ್ಮಿಕರು, ಶನಿವಾರ ಪೊಲೀಸ್ ಠಾಣೆಗೆ ಬಂದು ಪ್ರಯಾಣ ಅರ್ಜಿಗಳಿಗೆ ಬೇಡಿಕೆಯಿಟ್ಟಿದ್ದಾರೆ. ಇನ್ನೂ ಕೆಲವರು ತಾವೇ ಅರ್ಜಿ ಭರ್ತಿ ಮಾಡಿಕೊಂಡು ಬಂದು, ಅನುಮತಿ ಕೊಡಿ ಎಂದು ಕೇಳಿಕೊಂಡಿದ್ದಾರೆ. ಕೊನೆಗೆ ಪೊಲೀಸರು ಪ್ರಕಟಣೆ ಹೊರಡಿಸಿ, ಅಂಥ ಯಾವುದೇ ಅರ್ಜಿ ಭರ್ತಿ ಮಾಡಬೇಕಾಗಿಲ್ಲ. ವದಂತಿಗಳನ್ನು ನಂಬಬೇಡಿ ಎಂದು ಸಲಹೆ ನೀಡಿದ್ದಾರೆ.