Advertisement

18 ಲ. ರೂ. ಮೌಲ್ಯದ ಅಡಿಕೆ, ಕಾಳು ಮೆಣಸು ಕಳವು

01:09 PM May 27, 2017 | Team Udayavani |

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ಜಡ್ಕಲ್‌ ಶಾಖೆಯ ಗೋದಾಮಿನ ಶಟರ್‌ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು 18 ಲಕ್ಷ ರೂ. ಮೌಲ್ಯದ ಅಡಿಕೆ ಹಾಗೂ ಕಾಳುಮೆಣಸು ತುಂಬಿದ ಚೀಲಗಳನ್ನು ಕದ್ದೊಯ್ದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

Advertisement

ಶುಕ್ರವಾರ ಬೆಳಗ್ಗೆ ಜಡ್ಕಲ್‌ನಲ್ಲಿರುವ ವ್ಯ.ಸೇ. ಸಂಘದ ಶಟರ್‌ ತೆರೆದಿರುವುದನ್ನು ತಿಳಿದ ಅಲ್ಲಿನ ನಿವಾಸಿಗಳು ಕೊಲ್ಲೂರು ಪೊಲೀಸರು ಹಾಗೂ ವ್ಯ.ಸೇ. ಸ. ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅವರಿಗೆ ಮಾಹಿತಿ ನೀಡಿದರು. ಅಲ್ಲಿಗಾಗಮಿಸಿ ಪರಿಶೀಲಿಸಿದಾಗ 7,399 ಕೆಜಿ ಅಡಿಕೆ ಹಾಗೂ 336 ಕೆಜಿ ಕಾಳುಮೆಣಸಿನ ಚೀಲಗಳು ನಾಪತ್ತೆಯಾಗಿರುವುದು ಕಂಡುಬಂತು. ಆ ಭಾಗದ ಕೃಷಿಕರು ಅಡಿಕೆ ಕಾಳುಮೆಣಸು ಹಾಗೂ ರಬ್ಬರನ್ನು ಸಹಕಾರಿ ಸಂಘದಲ್ಲಿ ಅಡವಿಟ್ಟು ಸಾಲ ಪಡೆಯುವ ಪದ್ದತಿ ಇತ್ತು. 

ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ. ಇದೇ ರೀತಿಯಲ್ಲಿ 3-4 ವರ್ಷಗಳ ಹಿಂದೆ ಕೂಡ ಈ ಭಾಗದಲ್ಲಿ ಕಳವು ನಡೆದಿತ್ತು.

ಮಾಹಿತಿ ಪಡೆದು ಕೃತ್ಯ
ಇಲ್ಲಿನ ಅನೇಕರು ತಮ್ಮ ಕೃಷಿ ಭೂಮಿಗೆ ಸಂಬಂಧಪಟ್ಟಂತೆ ದುಡಿಮೆಗೆ ಬೇಕಾದ ಹಣಕಾಸಿನ ವ್ಯವಸ್ಥೆಗೆ ಸಂಗ್ರಹಿಸಿಟ್ಟ ಅಡಿಕೆ, ಕಾಳಮೆಣಸು ಹಾಗೂ ರಬ್ಬರನ್ನು ಅಡವಿಟ್ಟು ಆರ್ಥಿಕ ಮುಗ್ಗಟ್ಟಿಗೆ ವ್ಯವಸ್ಥೆ ಕಲ್ಪಿಸುವ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವ ಕಳ್ಳರು ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.

ಆತಂಕಪಡಬೇಕಾದ ಅಗತ್ಯವಿಲ್ಲ:
ಭದ್ರತೆಯ ನೆಲೆಯಲ್ಲಿ ವಿಮಾ ಪಾಲಿಸಿಯನ್ನು ಮಾಡಿರುವುದರಿಂದ ರೈತರು ಭಯಪಡಬೇಕಾಗಿಲ್ಲ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯ. ಸೇ. ಸ. ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ತಿಳಿಸಿದ್ದಾರೆ.

Advertisement

ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಘವ ಪಡೀಲ್‌, ಎಸ್‌.ಐ. ಶೇಖರ್‌ ಹಾಗೂ ಸಿಬಂದಿ  ಶ್ವಾನ ದಳ ಬೆರಳಚ್ಚು ತಜ್ಞರಒಡನೆ ಸ್ಥಳಕ್ಕೆ ಭೇಟಿ ನೀಡಿದ್ದು ಪರೀಶೀಲನೆ ನಡೆಸಿದರು. ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next