ದುನಿಯಾ ವಿಜಯ್ ನಟನೆ, ನಿರ್ದೇಶನದ “ಭೀಮ’ ಚಿತ್ರ ಆಗಸ್ಟ್ 9ರಂದು ತೆರೆ ಕಾಣುತ್ತಿದೆ. ಸದ್ಯ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಭೀಮ ಸೆನ್ಸಾರ್‌ನಿಂದ “ಎ’ ಪ್ರಮಾಣ ಪತ್ರ ಪಡೆದಿದ್ದಾನೆ.
ಇತ್ತೀಚೆಗೆ ಮಾಧ್ಯಮ ಮುಂದೆ ಬಂದಿದ್ದ ವಿಜಯ್ ಕುಮಾರ್ ಸಿನಿಮಾ ಕುರಿತಾಗಿ ಮಾತನಾಡಿದರು. “ಈ ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸಂದೇಶವಿರುವ ಈ ಚಿತ್ರ ಎಲ್ಲರಲ್ಲೂ ಜಾಗೃತಿ ಮೂಡಿಸುವಂತೆ ಆಗಬೇಕು. ನಾನು ಹಾಗೂ ಸಂಭಾಷಣೆಕಾರ ಮಾಸ್ತಿ ಸೇರಿ ಕಥೆ ಹಂತದಿಂದ ಹಿಡಿದು ಚಿತ್ರಕಥೆ, ಸಂಭಾಷಣೆಯಿಂದ ಪ್ರತಿ ಹಂತದಲ್ಲೂ ಬಹಳ ಶ್ರಮ ಪಟ್ಟು ಕೆಲಸ ಮಾಡಿದ್ದೇವೆ. ಈಗ ಚಿತ್ರ ಸೆನ್ಸಾರ್‌ನಿಂದ ಹೊರ ಬಂದಿದೆ. ನಾನು ಶಾಲಾ ದಿನಗಳಿಂದಲೂ ಬಿ ಪ್ಲಸ್, ಸಿ ಪ್ಲಸ್ ಪಡೆಯುತ್ತಿದೆ. ಈಗ ನನ್ನ ಸಿನಿಮಾ ಮೂಲಕ ಸೆನ್ಸಾರ್‌ನಿಂದ ಎ ಪ್ಲಸ್ ಪಡೆದಿದೆ. ವಿದ್ಯಾರ್ಥಿಗಳು, ಹದಿಹರೆಯದವರ ಬದುಕಿನ ದುಃಸ್ಥಿತಿಯ ವಿಚಾರ ಸೇರಿದಂತೆ ಒಂದಷ್ಟು ನಾ ಕಂಡು ಕೇಳಿದಂತ ಸತ್ಯಗಳನ್ನು ಹೊರಹಾಕುವ ಪ್ರಯತ್ನ ಭೀಮ ಚಿತ್ರದಲ್ಲಿ ಮಾಡಿದ್ದೇನೆ. ನನ್ನ ಈ ಪ್ರಯತ್ನಕ್ಕೆ ನನ್ನ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ತುಂಬಾ ಸಾಥ್ ನೀಡಿದ್ದಾರೆ’ ಎಂದರು.
ಇನ್ನು ಈ ಚಿತ್ರದ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಮಾತನಾಡಿ, “ನಮ್ಮ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಸೆನ್ಸಾರ್ ಹಂತದಲ್ಲಿ ಹೋದಾಗ ಕೊಂಚ ಭಯ ಇತ್ತು. ಆದರೆ ನಿರ್ದೇಶಕ ವಿಜಯ್ ಅವರು ಸೆನ್ಸಾರ್ ಅಧಿಕಾರಿಗಳಿಗೆ ನಮ್ಮ ಸಿನಿಮಾದ ಕಂಟೆಂಟ್ ಬಗ್ಗೆ ವಿವರಿಸಿ ಅವರನ್ನು ಕನ್ವಿನ್ಸ್ ಮಾಡಿದ ರೀತಿ ಅದ್ಭುತ. ಈಗಾಗಲೇ ಸಿನಿಮಾದ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದರು.
“ಬಹಳ ಶ್ರಮವಹಿಸಿ ಒಂದು ಉತ್ತಮ ಸಂದೇಶವಿರುವ ಚಿತ್ರವನ್ನು ಬಿಡುಗಡೆ ಹಂತಕ್ಕೆ ತಂದಿದ್ದೇವೆ. ಸದ್ಯ ಚಿತ್ರಮಂದಿರಗಳ ಪರಿಸ್ಥಿತಿ ನಮಗೂ ತಿಳಿದಿದೆ. ಮುಚ್ಚು ಹೋಗುತ್ತಿರುವ 18 ಚಿತ್ರಮಂದಿರಗಳು ನಮ್ಮ ಭೀಮ ಚಿತ್ರದ ಮೂಲಕ ಮತ್ತೆ ಓಪನ್ ಆಗಲಿದೆ. ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಲ್ಲಿ ನಮ್ಮ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದೇವೆ. ಅದೇ ರೀತಿ ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಕೂಡ ನಮ್ಮ ಚಿತ್ರ ನೇರವಾಗಿ ರಿಲೀಸ್ ಆಗುತ್ತಿದ್ದು, ವಿದೇಶದಲ್ಲಿ ಕೂಡ ಬಿಡುಗಡೆಗೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ಚಿತ್ರದ ಎಲ್ಲಾ ಏರಿಯ ಸೋಲ್ಡ್‌ಔಟ್ ಆಗಿದ್ದು, ಬಿಕೆಟಿಯನ್ನು ನಾನೇ ಉಳಿಸಿಕೊಂಡಿದ್ದೇನೆ. ಸದ್ಯ ಸಂಕಷ್ಟದಲ್ಲಿರುವ ಚಿತ್ರೋದ್ಯಮಕ್ಕೆ ನಮ್ಮ ಚಿತ್ರದ ಮೂಲಕ ಒಂದಷ್ಟು ಚೈತನ್ಯ ಸಿಗುವಂತಾಗಲಿ’ ಎಂದರು ಮತ್ತೂಬ್ಬ ನಿರ್ಮಾಪಕ ಜಗದೀಶ್.
ಇನ್ನು ಈ ಚಿತ್ರದಲ್ಲಿ ಅಭಿನಯಿಸಿದಂತ ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ತಮ್ಮ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡರು.