Advertisement

Puttur Dengue Case 177 ಶಂಕಿತ, 10 ಖಚಿತ: ಪ್ರತ್ಯೇಕ ವಾರ್ಡ್‌ ಇಲ್ಲ

12:27 AM Jul 06, 2024 | Team Udayavani |

ಪುತ್ತೂರು: ಕಳೆದ ಹದಿನೈದು ದಿನಗಳಿಂದ ಪುತ್ತೂರು ತಾಲೂಕಿನಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ.
ಈ ವರ್ಷದ ಜನವರಿ ಯಿಂದ ಜು.5ರ ತನಕ ಒಟ್ಟು 177 ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ 10 ಮಂದಿಗೆ ಡೆಂಗ್ಯೂ ಖಚಿತ ಪಟ್ಟಿದೆ. ಈ ಪೈಕಿ ಪುತ್ತೂರು ನಗರ, ತಿಂಗಳಾಡಿ, ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಹೆಚ್ಚು ಶಂಕಿತ ಪ್ರಕರಣ ಪತ್ತೆಯಾಗಿದೆ.

Advertisement

ಕಳೆದ ವರ್ಷಕ್ಕಿಂತ ಹೆಚ್ಚು
ತಾಲೂಕಿನಲ್ಲಿ 2021ರಲ್ಲಿ 21, 2022ರಲ್ಲಿ 7 ಹಾಗೂ 2023ರಲ್ಲಿ 5 ಡೆಂಗ್ಯೂ ಪ್ರಕರಣ ಖಚಿತಪಟ್ಟಿತ್ತು. ಮೂರು ವರ್ಷಗಳಿಂದ ಡೆಂಗ್ಯೂ ಇಳಿಮುಖದತ್ತ ಸಾಗುತ್ತಿದ್ದರೂ ಈ ವರ್ಷ ಜುಲಾಯಿ ಮುಗಿಯುವ ಮೊದ ಲೇ 7 ಡೆಂಗ್ಯೂ ಪ್ರಕರಣ ದೃಢಪಟ್ಟಿದ್ದು, ಹಿಂದಿನೆರಡು ವರ್ಷಗಳಿಗಿಂತ ಈ ವರ್ಷ ರೋಗ ತೀವ್ರ ತೆಯ ಪ್ರಮಾಣ ಹೆಚ್ಚಾಗುತ್ತಿರುವುದನ್ನು ಆರು ತಿಂಗಳ ಅಂಕಿಅಂಶ ದೃಢಪಡಿಸಿದೆ.

ಪ್ರತ್ಯೇಕ ವಾರ್ಡ್‌ ಇಲ್ಲ
ತಾಲೂಕು ಆಸ್ಪತ್ರೆಗೆ ಪ್ರತಿದಿನ ಜ್ವರಬಾಧೆಯಿಂದ ಬರುತ್ತಿರುವವರ ಸಂಖ್ಯೆ 50ರಿಂದ 60ಕ್ಕೆ ಏರಿಕೆ ಕಂಡಿದೆ. ಹದಿನೈದು ದಿನಗಳ ಹಿಂದೆ ಈ ಸಂಖ್ಯೆ 15ರಿಂದ 20ರಷ್ಟಿತ್ತು ಎನ್ನುತ್ತಾರೆ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ| ಆಶಾ ಜ್ಯೋತಿ ಪುತ್ತೂರಾಯ.

100 ಬೆಡ್‌ ಸೌಲಭ್ಯ ಇರುವ ತಾಲೂಕು ಆಸ್ಪತ್ರೆಯಲ್ಲಿ ಜನರಲ್‌ ವಾರ್ಡ್‌ ಒಂದೇ ಇರುವ ಕಾರಣ ಡೆಂಗ್ಯೂ ಪೀಡಿತರಿಗೆ ಪ್ರತ್ಯೇಕ ವಾರ್ಡ್‌ ತೆರೆದಿಲ್ಲ. ಅವರಿಗೆ ಉಳಿದ ಜ್ವರ ಪೀಡಿತರಂತೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಶಂಕಿತ ಡೆಂಗ್ಯೂ ಪ್ರಕರಣದಡಿ ದಿನಂಪ್ರತಿ ದಾಖಲಾಗುತ್ತಿರುವವರ ಸಂಖ್ಯೆ 5 ರಿಂದ 6ರಷ್ಟಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 2ರಿಂದ 5ರಷ್ಟಿದ್ದು, ಆದರೆ ಇಲ್ಲಿ ಇತರ ಜ್ವರ ಬಾಧಿತರ ಸಂಖ್ಯೆ 80ರಿಂದ 150ರ ತನಕವೂ ಕಂಡು ಬಂದಿದೆ. ತಾ| ಆಸ್ಪತ್ರೆಯಲ್ಲಿ ಈಗ ಡೆಂಗ್ಯೂ ಖಚಿತಪಟ್ಟಿರುವ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ರೋಗ ಖಚಿತತೆ ಸವಾಲು!
ಡೆಂಗ್ಯೂ ಖಚಿತಪಡಿಸಲು ತಾ| ಆಸ್ಪತ್ರೆಯಲ್ಲಿ ಎಲಿಸಾ ಟೆಸ್ಟ್‌ ಸೌಲಭ್ಯ ಇಲ್ಲದಿರುವ ಕಾರಣ ರಕ್ತದ ಮಾದರಿಯನ್ನು ಮಂಗಳೂರಿಗೆ ಕಳು ಹಿಸಲಾಗುತ್ತದೆ. ಅಲ್ಲಿಂದ ಫಲಿತಾಂಶ ಬರಬೇಕಾದರೆ ಮೂರು ದಿನ ಕಾಯಬೇಕು. ಪ್ರಸ್ತುತ ಡೆಂಗ್ಯೂ ಜ್ವರದ ಕುರಿತಂತೆ ಆರಂಭಿಕ ರಕ್ತ ಪರೀಕ್ಷೆಯಾದ ಕಾರ್ಡ್‌ ಟೆಸ್ಟ್‌ ಮಾಡಿದ್ದರೂ ಅದನ್ನು ಡೆಂಗ್ಯೂ ಎಂದೇ ಖಚಿತಪಡಿಸಲು ಆಗುವುದಿಲ್ಲ.

Advertisement

ಪರೀಕ್ಷಾ ವಿಧಾನ
ಡೆಂಗ್ಯೂ ರೋಗದ ನಿಖರ ಪತ್ತೆಗೆ ಜ್ವರ ಬಂದ 5 ದಿನಗಳ ಒಳಗಾದರೆ ಎನ್‌ಎಸ್‌ಐ ಪರೀಕ್ಷೆ, 5 ದಿನದ ಅನಂತರವಾದರೆ ಐಜM, ಐಜಎ, ಉಔಐಖಅ, Rಖ ಕಇ ಪರೀಕ್ಷೆಗಳು ಮಾಡಲಾಗುತ್ತಿದೆ. ಈ ಯಾವುದೇ ಸೌಲಭ್ಯಗಳು ತಾಲೂಕು ವ್ಯಾಪ್ತಿಯ ಸರಕಾರಿ ಆಸ್ಪತ್ರೆಗಳಲ್ಲಿ ದೊರಕುತ್ತಿಲ್ಲ. ಇದರಿಂದ ತತ್‌ಕ್ಷಣ ಚಿಕಿತ್ಸೆ ನೀಡಲು ಸಮಸ್ಯೆ ಉಂಟಾಗಿದೆ.

ಫಾಗಿಂಗ್‌ಗೆ ಮಳೆ ಅಡ್ಡಿ
ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಸ್ಥಳೀಯ ಸಂಸ್ಥೆಗಳ ನೇತೃತ್ವದಲ್ಲಿ ಅಲ್ಲಲ್ಲಿ ಫಾಗಿಂಗ್‌ ನಡೆಸಲು ಆರೋಗ್ಯ ಇಲಾಖೆ ಸೂಚಿಸಿದೆ. ಕೆಲವೆಡೆ ಫಾಗಿಂಗ್‌ ನಡೆದಿದ್ದರೂ ಈಗ ಮಳೆ ಅಡ್ಡಿ ಉಂಟು ಮಾಡಿದೆ.

ಹಗಲು ಆರೋಗ್ಯ ಕೇಂದ್ರದಲ್ಲಿ, ರಾತ್ರಿ ಮನೆಗೆ!
ಕೆಲವು ವರ್ಷಗಳಿಂದ ಡೆಂಗ್ಯೂ ಪ್ರಕರಣ ಕಂಡು ಬರುತ್ತಿದ್ದರೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅದಕ್ಕೆ ಪೂರಕವಾಗಿ ಸಿದ್ಧಗೊಳಿಸಿಲ್ಲ ಎನ್ನುವುದು ಜನರ ದೂರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರಾಸರಿ 50ಕ್ಕಿಂತ ಅಧಿಕ ಮಂದಿ ಜ್ವರ ತಪಾಸಣೆಗೆ ಬರುತ್ತಾರೆ. ರಕ್ತ ಪರೀಕ್ಷೆ ನಡೆಸಿದಾಗ ಶಂಕಿತ ಡೆಂಗ್ಯೂ ಎಂಬ ಅನುಮಾನ ಬಂದಲ್ಲಿ ಅಂತಹ ರೋಗಿಗಳನ್ನು ಒಳ ರೋಗಿಗಳಾಗಿ ದಾಖಲಿಸಿ ಸಂಜೆತನಕ ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ಆರೋಗ್ಯ ಕೇಂದ್ರ ಬಂದ್‌ ಆಗುವ ಕಾರಣ ರೋಗಿಗಳು ಮನೆಗೆ ಹೋಗಬೇಕು. ಒಂದು ವೇಳೆ ಜ್ವರ ತೀವ್ರವಾಗಿದ್ದರೆ ತಾಲೂಕು ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಬೇಕಿದೆ. ಆರ್ಥಿಕ ಸಮಸ್ಯೆ ಇರುವ ರೋಗಿಗಳಿಗೆ ಇದರಿಂದ ತೀವ್ರ ಸಮಸ್ಯೆ ಉಂಟಾಗಿದೆ ಎಂದು ತಾಲೂಕು ಆಸ್ಪತ್ರೆಗೆ ತಪಾಸಣೆಗೆ ಬಂದಿದ್ದ ಸೀತಾ ಅಳಲು ತೋಡಿಕೊಂಡರು. ಈ ಜನವರಿಯಿಂದ ಜುಲೈ ತನಕ ತಾಲೂಕಿನ 11 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಶಂಕಿತ ಡೆಂಗ್ಯೂ ಪ್ರಕರಣ ಕಂಡು ಬಂದಿದೆ.

ಖಾಸಗಿ ಆಸ್ಪತ್ರೆಗಳ ಲೆಕ್ಕ ಇಲಾಖೆಯಲ್ಲಿಲ್ಲ!
ಜ್ವರ ಪೀಡಿತ ಹೆಚ್ಚಿನವರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದು, ಅಲ್ಲಿ ಡೆಂಗ್ಯೂ ಸಹಿತ ಇತರ ಜ್ವರಕ್ಕೆ ಸಂಬಂಧಿಸಿ ಚಿಕಿತ್ಸೆ ಪಡೆಯುವವರ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ ಇಲ್ಲಿ ದಾಖಲಾದವರ ವಿವರಗಳು ತಾಲೂಕು ಆಸ್ಪತ್ರೆಗೆ ನಿಖರವಾಗಿ ಸಲ್ಲಿಕೆಯಾಗದ ಕಾರಣ ಡೆಂಗ್ಯೂ ಬಾಧಿತರ ಸಮರ್ಪಕ ಅಂಕಿಅಂಶ ದೊರೆಯುತ್ತಿಲ್ಲ. 6 ತಿಂಗಳಿನಲ್ಲಿ ಖಾಸಗಿ, ಸರಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಸಂಬಂಧಿಸಿ ದಾಖಲಾದವರ ಸಂಖ್ಯೆ 500ಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.

ಪ್ಲೇಟ್‌ಲೆಟ್‌ ಕೊರತೆ ಇರುವ ರೋಗಿಗಳನ್ನು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ರಕ್ತದ ಕೊರತೆ ಉಂಟಾಗಿಲ್ಲ. ಅಗತ್ಯ ಔಷಧಗಳು ಆಯಾ ಪ್ರಾಥಮಿಕ, ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿದೆ.
-ಡಾ| ದೀಪಕ್‌ ರೈ, ತಾಲೂಕು ಆರೋಗ್ಯಾಧಿಕಾರಿ, ಪುತ್ತೂರು

 

Advertisement

Udayavani is now on Telegram. Click here to join our channel and stay updated with the latest news.

Next