ಹುಬ್ಬಳ್ಳಿ: ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿ ಸಿದ ಬೈಕ್ ಸವಾರರೊಬ್ಬರನ್ನು ಉತ್ತರ ಸಂಚಾರ ಠಾಣೆ ಪೊಲೀಸರು ಪತ್ತೆ ಮಾಡಿ, ಬಾಕಿ ಉಳಿಸಿಕೊಂಡಿರುವ 17,500ರೂ. ದಂಡ ಪಾವತಿಸುವಂತೆ ಸೂಚಿಸಿದ್ದಾರೆ.
ನಗರದ ಮಹ್ಮದ ರಫೀಕ ಗುಡಗೇರಿ ಎಂಬುವರೆ 23 ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆಂದು ಗುರುತಿಸಲಾಗಿದೆ. ಇವರು 2017ರಿಂದ ಇಲ್ಲಿಯ ವರೆಗೆ ನಗರದ ವಿವಿಧೆಡೆ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದರು.
ತೋಳನಕೆರೆ ಕಡೆಯಿಂದ ವಿದ್ಯಾನಗರದ ಕಡೆಗೆ ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಹೊರಟಿದ್ದರು. ಶಿರೂರ ಪಾರ್ಕ್ ನ ಹರ್ಷಾ ಹೋಟೆಲ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ರಮ್‌ಜಾನಬಿ ಅಳಗವಾಡಿ ಮತ್ತು ಕಾನ್‌ಸ್ಟೇಬಲ್ ಚವ್ಹಾಣ ಅವರು ಸವಾರರನ್ನು ನಿಲ್ಲಿಸಿ, ಬೈಕ್‌ನ ನೋಂದಣಿ ಸಂಖ್ಯೆಯನ್ನು ಬ್ಲ್ಯಾಕ್‌ಬೆರಿ ಯಂತ್ರದಲ್ಲಿ ನಮೂದಿಸಿ ಪರಿಶೀಲಿಸಿದ್ದಾರೆ. ಆಗ ನಗರದ 23 ಕಡೆ ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ.
2017ರಿಂದಲೇ ಸಂಚಾರ ನಿಯಮ ಉಲ್ಲಂಘಿಸುತ್ತ ಬೈಕ್ ಓಡಿಸುತ್ತಿದ್ದರು. ಆಗ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದರೆ 100ರೂ. ದಂಡ ಇತ್ತು. 2019ರಲ್ಲಿ ಅದಕ್ಕೆ 500ರೂ. ದಂಡ ನಿಗದಿ ಪಡಿಸಲಾಗಿದೆ. ನಿಯಮ ಉಲ್ಲಂಘಿಸಿರುವ ಕುರಿತು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ಅಷ್ಟೊಂದು ಹಣ ಈಗಲೇ ಪಾವತಿಸಲು ಸಾಧ್ಯವಿಲ್ಲ ಎಂದು ಸವಾರ ಬೈಕ್ ಕೀಲಿ ನಮಗೆ ಕೊಟ್ಟಿದ್ದಾರೆ. ಠಾಣೆ ಎದುರು ಅದನ್ನು ನಿಲ್ಲಿಸಿದ್ದೇವೆ ಎಂದು ಎಎಸ್‌ಐ ರಮ್‌ಜಾನಬಿ ಅಳಗವಾಡಿ ಹೇಳಿದರು.