ಅಮೀನಗಡ: ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನ ಪ್ರಯುಕ್ತ ಹುನಗುಂದ-ಇಳಕಲ್ಲ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ವಿತರಣೆ ಮಾಡಲು 17500 ರಾಷ್ಟ್ರಧ್ವಜ ಸಿದ್ಧಗೊಂಡಿವೆ.
ಹೌದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಆ. 13ರಿಂದ ಆರಂಭವಾಗುವ ಹರ್ ಘರ್ ತಿರಂಗಾ ಅಭಿಯಾನ 15ರ ಸ್ವಾತಂತ್ರ್ಯ ದಿನೋತ್ಸವದವರೆಗೂ ನಡೆಯಲಿದೆ. ಅಭಿಯಾನದಲ್ಲಿ ಗ್ರಾಮಗಳ ಮನೆ ಮನೆಯಲ್ಲಿ ರಾಷ್ಟ್ರೀಯ ಧ್ವಜ ಹಾರಿಸುವಂತೆ ಪ್ರೇರೇಪಿಸುವುದರ ಮೂಲಕ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರ ಪ್ರೇಮ ಮೂಡಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ರಾಷ್ಟ್ರಧ್ವಜ ತಯಾರಿ: ಹುನಗುಂದ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 19 ಗ್ರಾಮ ಪಂಚಾಯಿತಿಗಳಿಗೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಸೂಳೇಭಾವಿಯ ಕಾಳಿಕಾದೇವಿ ಸಂಜೀವಿನಿ ಮಹಿಳಾ ಒಕ್ಕೂಟದ ವ್ಯಾಪ್ತಿಯಲ್ಲಿ ಬರುವಂತಹ 10 ಸ್ವಸಹಾಯ ಸಂಘದ ಸದಸ್ಯರು ಹಾಗೂ ಗುಡೂರ (ಎಸ್.ಸಿ) ಗ್ರಾಮದ ಸಂಜೀವಿನಿ ಮಹಿಳಾ ಒಕ್ಕೂಟದ ಅಡಿಯಲ್ಲಿ ಬರುವ 10 ಒಕ್ಕೂಟದ ಸದಸ್ಯರು ರಾಷ್ಟ್ರಸೇವೆ ಮಾಡಲು ಸುವರ್ಣ ಅವಕಾಶ ಎಂದು ಭಾವಿಸಿ ಎರಡು ತಾಲೂಕಿನ ಗ್ರಾಪಂಗಳಿಗೆ ಪಾಲಿಸ್ಟರ್ ಬಟ್ಟೆಯ ರಾಷ್ಟ್ರಧ್ವಜ ತಯಾರಿ ಮಾಡಲಾಗಿದೆ.
ತಾಲೂಕು ಪಂಚಾಯಿತಿ ಕ್ರಮ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಡಿ ಪ್ರತಿ ಗ್ರಾಮ ಪಂಚಾಯಿತಿಗೆ 500 ರಂತೆ ರಾಷ್ಟ್ರಧ್ವಜಗಳನ್ನು ಖರೀದಿಸಿ ನೀಡಲಿದೆ. ಸ್ಥಳಿಯ ಸಂಸ್ಥೆಗಳಾದ ಪಂಚಾಯತ ರಾಜ್ ಸಂಸ್ಥೆಗಳು, ಸ್ವ ಸಹಾಯ ಸಂಘಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಚೆ ಕಚೇರಿಗಳು, ಸಹಕಾರ ಸಂಘಗಳು, ಗ್ರಂಥಾಲಯಗಳ ಮತ್ತು ಇತರೆ ಸರಕಾರಿ ಕಟ್ಟಡಗಳ ಮೇಲೆ ಧ್ವಜ ಹಾರಿಸುವುದರೊಂದಿಗೆ ರೋಜಗಾರ ಸೇವಕರು ಹಾಗೂ ಶಿಕ್ಷಕರು ಈ ಅಭಿಯಾನಕ್ಕೆ ಪಥ ಸಂಚಲನ ಹಾಗೂ ಸೆಮಿನಾರ್ ಮೂಲಕ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ನಾಗರಿಕರಿಗೆ ಉತ್ತೇಜನ ನೀಡುವಂತೆ ತಾಪಂ ಕ್ರಮ ಕೈಗೊಂಡಿದೆ ಎನ್ನುತ್ತಾರೆ ತಾಪಂ ಸಹಾಯಕ ಲೆಕ್ಕಾ ಧಿಕಾರಿ ಶ್ರೀಶೈಲ ತತ್ರಾಣಿ ಹಾಗೂ ತಾಪಂ ವಲಯ ಮೇಲ್ವಿಚಾರಕ ಕೃಷ್ಣಾ ಪವಾರ.
ಮಹಿಳೆಯರ ಕಾರ್ಯಕ್ಕೆ ಮೆಚ್ಚುಗೆ: ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತವಾಗಿ ಪ್ರತಿ ಮನೆಗಳಿಗೆ ರಾಷ್ಟ್ರಧ್ವಜ ಪೂರೈಸಬೇಕು ಎಂಬ ಉದ್ದೇಶದಿಂದ ಹುನಗುಂದ -ಇಳಕಲ್ ತಾಲೂಕಿನ ಎಲ್ಲ ಗ್ರಾಪಂಗಳಿಗೆ ಕಡಿಮೆ ದರದಲ್ಲಿ ರಾಷ್ಟ್ರಧ್ವಜ ಸಿದ್ಧಪಡಿಸಿ ದೇಶ ಸೇವೆ ಮಾಡುತ್ತಿರುವ ಸೂಳೇಭಾವಿ ಹಾಗೂ ಗುಡೂರ ಗ್ರಾಮದ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರ ಕಾರ್ಯಕ್ಕೆ ಅವಳಿ ತಾಲೂಕಿನ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿದ್ಧವಾಗುತ್ತಿವೆ 17500 ಧ್ವಜ
ಹುನಗುಂದ ತಾಲೂಕು ಪಂಚಾಯಿತಿ ವ್ಯಾಪ್ತಿಯ 19 ಗ್ರಾಪಂಗಳಿಗೆ ತಲಾ 500ರಂತೆ ಸುಮಾರು 9500 ರಾಷ್ಟ್ರಧ್ವಜಗಳು ಹಾಗೂ ಇಳಕಲ್ ತಾಲೂಕು ಪಂಚಾಯಿತಿ ವ್ಯಾಪ್ತಿಯ 16 ಗ್ರಾಪಂಗಳಿಗೆ ತಲಾ 500ರಂತೆ ಸುಮಾರು 8000 ರಾಷ್ಟ್ರಧ್ವಜಗಳು ಸೇರಿ ಹುನಗುಂದ ಮತ್ತು ಇಳಕಲ್ ತಾಲೂಕಿನಲ್ಲಿ ಗ್ರಾಮಗಳಿಗೆ ಸುಮಾರು 17500 ರಾಷ್ಟ್ರಧ್ವಜಗಳನ್ನು ಸಂಜೀವಿನಿ ಮಹಿಳಾ ಒಕ್ಕೂಟದ ಸ್ವಸಹಾಯ ಸದಸ್ಯರು ಸಿದ್ಧಪಡಿಸಿದ್ದು ಅಭಿಯಾನ ಕಾರ್ಯ ಭರದಿಂದ ಸಾಗಿದೆ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಇಳಕಲ್ಲ ತಾಲೂಕಿನ ಎಲ್ಲ ಗ್ರಾಪಂಗಳಿಗೆ ರಾಷ್ಟ್ರಧ್ವಜ ವಿತರಣೆ ಮಾಡಲು ಮಹಿಳಾ ಒಕ್ಕೂಟದಿಂದ 8000 ರಾಷ್ಟ್ರಧ್ವಜ ಸಿದ್ಧಪಡಿಸಲಾಗಿದೆ. ರಾಷ್ಟ್ರಧ್ವಜ ತಯಾರಿಸುವ ಮೂಲಕ ದೇಶ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಅವಕಾಶ ನಮಗೆ ಒದಗಿಬಂದಿದ್ದು ಸಂತಸದ ವಿಷಯ. –
ಕಸ್ತೂರಿ ಲಾಯದಗುಂದಿ, ಗ್ರಾಪಂ ಮಹಿಳಾ ಒಕ್ಕೂಟ, ಗುಡೂರ (ಎಸ್.ಸಿ)
ಭಾರತದ 75ನೇಯ ಸ್ವಾತಂತ್ರ್ಯ ದಿನೋತ್ಸವ ಅಂಗವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಡಿಯಲ್ಲಿ ಮನೆ ಮನೆಗೆ ರಾಷ್ಟ್ರಧ್ವಜ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಮಾಡಲು ಹುನಗುಂದ ತಾಪಂ ಯೋಜನೆ ಮಾಡಿಕೊಂಡು ಕಾರ್ಯೋನ್ಮುಖವಾಗಿದೆ. ಹರ್ ಘರ್ ತಿರಂಗಾ ಅಭಿಯಾನಕ್ಕೆ ಸ್ವ ಸಹಾಯ ಸಂಘದ ಮಹಿಳೆಯರು ತಯಾರಿಸಿದ ರಾಷ್ಟ್ರಧ್ವಜ ಬಳಸಲಾಗುತ್ತಿದೆ. ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ. –
ಸಿ.ಬಿ.ಮ್ಯಾಗೇರಿ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಪಂ ಹುನಗುಂದ
ಹುನಗುಂದ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ರಾಷ್ಟ್ರಧ್ವಜ ತಯಾರಿಸುವ ಮೂಲಕ ದೇಶ ಸೇವೆಯಲ್ಲಿ ತೊಡಗಿರುವುದು ಹೆಮ್ಮೆಯ ವಿಷಯ. ಇದು ಒಂದು ಉತ್ತಮ ಅನುಭವವಾಗಿದೆ. –
ಆರೀಫಾ ಅತ್ತಾರ, ಬಿಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘ, ಸೂಳೇಭಾವಿ
-ಎಚ್.ಎಚ್.ಬೇಪಾರಿ