Advertisement
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಎರಡು ದಿನಗಳ ಹಿಂದೆ ನರೇಗಾ ಕೂಲಿ ಕಾರ್ಮಿಕರಿಗೆ ಎರಡು ತಿಂಗಳುಗಳ ಕೂಲಿಯನ್ನು ಮುಂಗಡವಾಗಿಯೇ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಈಗಾಗಲೇ ದುಡಿದ ಕೂಲಿಯೂ ಬರದಿರುವುದರಿಂದ ಹಳೆಯ ಬಾಕಿಯನ್ನಾದರೂ ಸರಕಾರ ಮೊದಲು ನೀಡಲಿ ಎಂಬ ಬೇಡಿಕೆ ಕೂಲಿ ಕಾರ್ಮಿಕರದ್ದಾಗಿದೆ.ರಾಜ್ಯ ಸರಕಾರವೂ ಕೂಡ ನರೇಗಾ ಕಾರ್ಮಿಕರ 755 ಕೋ. ರೂ. ಕೂಲಿ ಹಣ ಬಾಕಿ ಉಳಿಸಿಕೊಂಡಿದೆ. 2018-19 ನೇ ಸಾಲಿನ 32.81 ಕೋ.ರೂ. ಕೂಲಿ ಮತ್ತು 119.17 ಕೋ. ರೂ. ಸಾಮಗ್ರಿ ಖರೀದಿ ಹಣ, 2019-20 ನೇ ಸಾಲಿನ 53.61 ಕೋ. ರೂ. ಕೂಲಿ ಹಣ ಮತ್ತು 549.81 ಕೋ.ರೂ. ಸಾಮಗ್ರಿ ಹಣವನ್ನು ರಾಜ್ಯ ಸರಕಾರ ಬಾಕಿ ಉಳಿಸಿಕೊಂಡಿದೆ.
Related Articles
ರಾಜ್ಯ ಸರಕಾರ ಈಗ ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ವೈಯಕ್ತಿಕವಾಗಿ ಯಾವುದೇ ಆ್ಯಕ್ಷನ್ ಪ್ಲಾನ್ ಇಲ್ಲದೇ ಕಾಮಗಾರಿ ಕೈಗೆತ್ತಿಕೊಳ್ಳಲು ಸರಕಾರ ಅವಕಾಶ ಕಲ್ಪಿಸಿ ಆದೇಶಿಸಿದೆ. ಇದು ಪಿಡಿಒ ಮತ್ತು ಪಂಚಾಯತ್ ಸದಸ್ಯರು ಬೇಕಾದವರಿಗೆ ಮಾತ್ರ ಅನುಕೂಲ ಕಲ್ಪಿಸಲು ಮಾಡಿಕೊಟ್ಟಂತಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿದೆ.
Advertisement
ಕೋವಿಡ್-19 ಭೀತಿ: ಕೂಲಿಗೆ ಕತ್ತರಿನರೇಗಾ ಯೋಜನೆ ಅಡಿ ನೋಂದಾಯಿತ ಕೂಲಿ ಕಾರ್ಮಿಕರಿಗೆ ವಾರ್ಷಿಕ ನೂರು ದಿನಗಳ ಕೂಲಿ ಒದಗಿಸಲಾಗುತ್ತದೆ. ಈ ವರ್ಷ ರಾಜ್ಯದಲ್ಲಿ ಪ್ರವಾಹ ಉಂಟಾಗಿರುವುದರಿಂದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 150 ದಿನಗಳ ಕೂಲಿ ಕೊಡಲು ರಾಜ್ಯ ಸರಕಾರ ಕೇಂದ್ರದಿಂದ ಅನುಮತಿ ಪಡೆದಿದೆ. ಆದರೆ ಈಗ ರಾಜ್ಯಾದ್ಯಂತ ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ನರೇಗಾ ಯೋಜನೆ ಅಡಿಯಲ್ಲಿ ಸಾರ್ವಜನಿಕ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಹಳೆಯ ಕೂಲಿಯ ಹಣವೂ ಬಾರದೆ ಈಗಲೂ ಕೂಲಿ ಸಿಗದೆ ನರೇಗಾ ಕಾರ್ಮಿಕರು ಕಂಗಾಲಾಗಿದ್ದಾರೆ. ಅಲ್ಲದೆ ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗಿದ್ದ ಕಾರ್ಮಿಕರೂ ಈಗ ಕೋವಿಡ್-19 ಭೀತಿಯಿಂದ ಹಳ್ಳಿಗಳಿಗೆ ತೆರಳಿದ್ದು, ಅವರಿಗೂ ಉದ್ಯೋಗ ಒದಗಿಸುವ ಸವಾಲು ರಾಜ್ಯ ಸರಕಾರದ ಮುಂದಿದೆ. -ಶಂಕರ ಪಾಗೋಜಿ