ಹೈದರಾಬಾದ್: ಮೂರು ಲಕ್ಷ ರೂಪಾಯಿ ಹಣ ವಸೂಲಿಗಾಗಿ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಏಳು ವರ್ಷದ ಹುಡುಗನನ್ನು ಅಪಹರಿಸಿರುವ ಘಟನೆ ಹೈದರಾಬಾದ್ ನ ಮೀರ್ ಪೇಟ್ ನಲ್ಲಿ ನಡೆದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮೂವರು ಗಂಟೆಯೊಳಗೆ 7 ವರ್ಷದ ಬಾಲಕನನ್ನು ರಕ್ಷಿಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ವರದಿ ತಿಳಿಸಿದೆ.
2ನೇ ತರಗತಿಯಲ್ಲಿ ಓದುತ್ತಿದ್ದ ತನ್ನ ಮಗನನ್ನು ಅಪಹರಿಸಿದ್ದು, ಆ ವ್ಯಕತಿ ಮೂರು ಲಕ್ಷ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿರುವುದಾಗಿ ಸಾಫ್ಟ್ ವೇರ್ ಇಂಜಿನಿಯರ್ ಜಿ.ರಾಜು ಅವರು ಪೊಲೀಸ್ ಅಧಿಕಾರಿಯನ್ನು ಭೇಟಿಯಾಗಿ ದೂರು ನೀಡಿದ್ದರು. ಒಂದು ವೇಳೆ ಹಣ ನೀಡದಿದ್ದಲ್ಲಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರೆ ಮಗನನ್ನು ಕೊಲ್ಲುವುದಾಗಿಯೂ ಅಪಹರಣಕಾರ ಬೆದರಿಕೆಯೊಡ್ಡಿರುವುದಾಗಿಯೂ ಪೊಲೀಸರಿಗೆ ವಿವರಿಸಿದ್ದರು.
ಏತನ್ಮಧ್ಯೆ ಅಪಹರಣಕಾರನ ಬಳಿ ಒಂದೂವರೆ ಲಕ್ಷ ರೂಪಾಯಿ ಕೊಡುವುದಾಗಿ ಬಾಲಕನ ತಂದೆ ಮನವಿ ಮಾಡಿಕೊಂಡಿದ್ದರು. ಆದರೆ ತನಗೆ ಮೂರು ಲಕ್ಷ ರೂಪಾಯಿ ಹಣ ನೀಡಬೇಕು ಎಂದು ಪಟ್ಟು ಹಿಡಿದಿದ್ದ. ಕೊನೆಗೆ 25 ಸಾವಿರ ರೂಪಾಯಿ ನಗದು ನೀಡಿ, ಉಳಿದ ಹಣಕ್ಕೆ ಚೆಕ್ ನೀಡುವುದಾಗಿ ರಾಜು ಅವರು ತಿಳಿಸಿದ್ದರು.
ಹೀಗೆ ಪೊಲೀಸರ ಸೂಚನೆ ಮೇರೆಗೆ ರಾಜು ಅವರು ಪ್ರತಿ 30 ನಿಮಿಷಕ್ಕೊಮ್ಮೆ ಮೊಬೈಲ್ ಕರೆ ಮಾಡುತ್ತಿದ್ದರು. ಹೀಗೆ ಮೊಬೈಲ್ ಮೂಲಕ ಕಿಡ್ನಾಪರ್ ಬಾಲಕನ ತಂದೆ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದ. ಅಷ್ಟರೊಳಗೆ ಪೊಲೀಸರು ಟವರ್ ಲೊಕೇಶನ್ ಪತ್ತೆ ಹಚ್ಚಿ ಅಪಹರಣಕಾರನನ್ನು ಬಂಧಿಸಿದ್ದರು.
ಆಗ ಪೊಲೀಸರಿಗೆ ಆಘಾತವಾಗಿತ್ತು…ಯಾಕೆಂದರೆ ಅಪಹರಣಕಾರರನೇ ಅಪ್ರಾಪ್ತನಾಗಿದ್ದ! ಕೊನೆಗೆ 7 ವರ್ಷದ ಬಾಲಕನನ್ನು ರಕ್ಷಿಸಿದ ಪೊಲೀಸರು, ಆರೋಪಿಯನ್ನು ಬಾಲಪರಾಧಿ ಮಂಡಳಿ ಅಧಿಕಾರಿಗಳಿಗೆ ಒಪ್ಪಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.