ಬೀದರ: ಗಡಿ ಜಿಲ್ಲೆ ಬೀದರನಲ್ಲಿ ಮಹಾಮಾರಿ ಸೋಂಕು ಹರಡುವಿಕೆ ಶರವೇಗದಲ್ಲಿ ಸಾಗುತ್ತಿದ್ದು, ಮಂಗಳವಾರ ಮತ್ತೆ 17 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 607ಕ್ಕೆ ತಲುಪಿದೆ.
ತಾಲೂಕು ಕೇಂದ್ರ ಚಿಟಗುಪ್ಪ ಪಟ್ಟಣವನ್ನು ರಕ್ಕಸ ಕೋವಿಡ್ ಬೆಂಬಿಡದೇ ಕಾಡುತ್ತಿದ್ದು, ಒಟ್ಟು 17 ಕೇಸ್‌ಗಳಲ್ಲಿ 14 ಪಾಸಿಟಿವ್ ಪ್ರಕರಣಗಳು ಒಂದೇ ಪಟ್ಟಣಕ್ಕೆ ಸೇರಿವೆ. ಸಾವು ಮತ್ತು ಸೋಂಕಿತರ ಪ್ರಕರಣಗಳಿಂದಾಗಿ ಜಿಲ್ಲೆಯಲ್ಲಿ ಚಿಟಗುಪ್ಪ ಹಾಟ್‌ಸ್ಪಾಟ್ ಎನಿಸಿಕೊಳ್ಳುತ್ತಿದ್ದು, ಸಾರ್ವಜನಿಕರಲ್ಲಿ ರೋಗ ಹರಡುವಿಕೆ ಆತಂಕ ಹೆಚ್ಚುವಂತೆ ಮಾಡಿದೆ. ಇನ್ನುಳಿದ ಮೂರು ಪಾಸಿಟಿವ್ ಕೇಸ್‌ಗಳು ಬೀದರ ನಗರಕ್ಕೆ ಸೇರಿವೆ.
30 ವರ್ಷದ ಮಹಿಳೆ (ಪಿ- ಬಿಡಿಆರ್ 591), 53 ವರ್ಷದ ಪುರುಷ (ಪಿ-ಬಿಡಿಅರ್ 592), 28 ವರ್ಷದ ಮಹಿಳೆ (ಪಿ-ಬಿಡಿಆರ್ 593), 5 ವರ್ಷದ ಬಾಲಕಿ (ಪಿ-ಬಿಡಿಆರ್ 594), 7 ವರ್ಷದ ಬಾಲಕಿ (ಪಿ-ಬಿಡಿಆರ್ 595), 16 ವರ್ಷದ ಬಾಲಕ (ಪಿ-ಬಿಡಿಆರ್ 596), 35 ವರ್ಷದ ಪುರುಷ (ಪಿ-ಬಿಡಿಆರ್ 597), 11 ವರ್ಷದ ಬಾಲಕ (ಪಿ- ಬಿಡಿಅರ್ 598), 62 ವರ್ಷದ ವೃದ್ಧೆ (ಪಿ-ಬಿಡಿಆರ್ 599), 40 ವರ್ಷದ ಪುರುಷ (ಪಿ-ಬಿಡಿಆರ್ 600), 36 ವರ್ಷದ ಪುರುಷ (ಪಿ-ಬಿಡಿಆರ್ 602), 30 ವರ್ಷದ ಮಹಿಳೆ (ಪಿ- ಬಿಡಿಆರ್ 603), 25 ವರ್ಷದ ಪುರುಷ (ಪಿ-ಬಿಡಿಅರ್ 604), 29 ವರ್ಷದ ಪುರುಷ (ಪಿ-ಬಿಡಿಆರ್ 607) ರೋಗಿಗಳು ಚಿಟ್ಟಗುಪ್ಪದವರಾಗಿದ್ದಾರೆ. ಇನ್ನು 50 ವರ್ಷದ ಪುರುಷ (ಪಿ- ಬಿಡಿಆರ್ 601), 68 ವರ್ಷದ ವೃದ್ಧ (ಪಿ-ಬಿಡಿಆರ್ 605) ಮತ್ತು 21 ವರ್ಷದ ಯುವಕ (ಪಿ-ಬಿಡಿಆರ್ 606) ರೋಗಿಗಳು ಬೀದರ ನಗರದವರು ಆಗಿದ್ದಾರೆ.
1398 ವರದಿ ಬಾಕಿ: ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 607 ಆದಂತಾಗಿದೆ. 19 ಜನ ಸಾವನ್ನಪ್ಪಿದ್ದರೆ 477 ಜನ ಡಿಸ್ಚಾರ್ಜ್ ಆಗಿದ್ದಾರೆ. 111 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 37,877 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 35,868 ಮಂದಿ ವರದಿ ನೆಗೆಟಿವ್ ಬಂದಿದ್ದು, ಇನ್ನೂ 1398 ವರದಿ ಬರುವುದು ಬಾಕಿ ಇದೆ.