ಉಳ್ಳಾಲ: ಉಳ್ಳಾಲದಲ್ಲಿ ಕೋವಿಡ್-19 ಸೋಂಕು ಸಾಮುದಾಯಿಕವಾಗಿ ಹಬ್ಬುತ್ತಿದ್ದು, ಉಳ್ಳಾಲದ ಪ್ರಥಮ ಸೋಂಕಿತೆಯ ಮನೆಯಲ್ಲಿದ್ದ ಎಲ್ಲಾ 16 ಮಂದಿ ಸದಸ್ಯರಿಗೆ ಸೋಂಕು ತಗುಲಿದ್ದು ಮಹಿಳೆ ಸೇರಿದಂತೆ ಒಂದೇ ಮನೆಯ 17 ಸದಸ್ಯರಿಗೆ ಸೋಂಕು ದೃಢವಾದಂತಾಗಿದೆ.
ಉಳ್ಳಾಲ ವ್ಯಾಪ್ತಿಯಲ್ಲಿ ಪೊಲೀಸರು ಸೇರಿದಂತೆ 22 ಸೋಂಕು ಶನಿವಾರ ದೃಢವಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ, ದೇರಳಕಟ್ಟೆ, ಅಸೈಗೋಳಿ ಸೇರಿ ಸೋಂಕಿತರ ಸಂಖ್ಯೆ 29ಕ್ಕೇರಿದ್ದು ಒರ್ವ ಮಹಿಳೆ ಮೃತಪಟ್ಟಿದ್ದಾರೆ.
ಉಳ್ಳಾಲ ಆಝಾದ್ ನಗರದ 57ರ ಹರೆಯದ ಮಹಿಳೆಗೆ ಆರಂಭದಲ್ಲಿ ಸೋಂಕು ತಗುಲಿತ್ತು. ಅವರಿಗೆ ನಗರದ ವೆನ್‍ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಎರಡು ದಿನಗಳ ಹಿಂದೆ ಅವರ ಪ್ರಾಥಮಿಕ ಸಂಪರ್ಕ ಇದ್ದ ಎಲ್ಲಾ 16 ಮಂದಿ ಕುಟುಂಬದ ಸದಸ್ಯರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು ಇಂದು ಎಲ್ಲಾ 16 ಮಂದಿಗೆ ಸೋಂಕು ದೃಡವಾಗಿದೆ. ಆರೋಗ್ಯ ಇಲಾಖೆ ಇನ್ನಷ್ಟೇ ದೃಢಪಡಿಸಬೇಕಾಗಿದ್ದು ಒಂದೇ ಮನೆಯ 17 ಜನರಿಗೆ ಸೋಂಕು ದೃಢಪಟ್ಟಂತಾಗಿದೆ. ಈ ಮನೆಯ ಇಬ್ಬರು ಸದಸ್ಯರು ಸೌದಿಯಿಂದ ಆಗಮಿಸಿದ್ದು ಅವರು ಖಾಸಗಿ ಕ್ವಾರಂಟೈನ್‍ನಲ್ಲಿದ್ದು, ಇವರ ಸಂಪೂರ್ಣ ಮಾಹಿತಿ ತಿಳಿದು ಬಂದಿಲ್ಲ.
ಉಳ್ಳಾಲ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಈ ಹಿಂದೆ ಸೋಂಕು ತಗುಲಿತ್ತು. ಇವರ ಸಂಪರ್ಕದಲ್ಲಿದ್ದ ಇಬ್ಬರು ಸಿಬಂದಿಗಳಿಗೆ ಶನಿವಾರ ಸೋಂಕು ದೃಢವಾಗಿದೆ. ಉಳಿದಂತೆ ವಿದೇಶದಿಂದ ಆಗಮಿಸಿ ಉಳ್ಳಾಲದ ಖಾಸಗಿ ರೆಸಾರ್ಟ್‍ನಲ್ಲಿ ಕ್ವಾರಂಟೈನ್‍ಲ್ಲಿರುವ ಕೃಷ್ಣಾಪುರ ಮೂಲದ ಇಬ್ಬರಿಗೆ ಸೋಂಕು ದೃಢವಾಗಿದೆ.ದೇರಳಕಟ್ಟೆಯ ಖಾಸಗಿ ಆಹಾರ ತಯಾರಿಕೆ ಸಂಸ್ಥೆಯ ಇಬ್ಬರಿಗೆ ಸೋಂಕು ದೃಢವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಶಾಸಕ
ಶಾಸಕ ಯು.ಟಿ. ಖಾದರ್ ಸೀಲ್‍ಡೌನ್ ಆಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಸಭೆ ನಡೆಸಿದ್ದು, ಜನರು ಸೋಂಕಿನಿಂದ ರಕ್ಷಣೆಗೆ ಆದ್ಯತೆ ನೀಡಬೇಕು ಎಂದಿದ್ದಾರೆ.