Advertisement

ರಾ.ಹೆ. 169ಎಯಲ್ಲಿ 140 ಮರಗಳ ಕಟಾವು; ವೃಕ್ಷ ನಾಶಕ್ಕೆ ತೀವ್ರ ಆಕ್ಷೇಪ

11:01 PM Sep 04, 2019 | Team Udayavani |

ಉಡುಪಿ: ರಾ.ಹೆ. 169ಎ 77 ಕಿ.ಮೀ.ನಿಂದ 87 ಕಿ.ಮೀ. ವರೆಗಿನ (ಪರ್ಕಳ ದೇವಿನಗರದಿಂದ ಆದಿ ಉಡುಪಿ ಕರಾವಳಿ ಜಂಕ್ಷನ್‌ ವರೆಗೆ) ರಸ್ತೆಯ ಚತುಷ್ಪಥ ಕಾಮಗಾರಿಯ ಬಗ್ಗೆ ರಸ್ತೆಯ ಇಕ್ಕೆಡೆಗಳಲ್ಲಿ ಅಡಚಣೆಯಾಗಿರುವ 140 ಮರಗಳನ್ನು ಕಡಿಯಲು ಉದ್ದೇಶಿಸಿರುವುದರ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

Advertisement

ವಲಯ ಅರಣ್ಯಾಧಿಕಾರಿ ಉಡುಪಿ ವಲಯ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಸಾರ್ವಜನಿಕರು, ವಿವಿಧ ಸಂಘಟನೆಗಳು ಹಲವು ಬೇಡಿಕೆ, ಆಗ್ರಹಗಳನ್ನೊಳಗೊಂಡ ಮನವಿಯನ್ನು ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್‌ ಅವರಿಗೆ ನೀಡಿದರು.

ಈಗಾಗಲೇ ಕಡಿದ ಮರಗಳು ಎಲ್ಲಿಗೆ ಹೋಗಿವೆ? ಎನ್ನುವ ಬಗ್ಗೆ ಇಲಾಖೆಯಿಂದ ತನಿಖೆಯಾಗಬೇಕು. ಮರ ಕಡಿಯುವ ಮುನ್ನ ರಾ.ಹೆ. ಪ್ರಾಧಿಕಾರ, ಅರಣ್ಯ ಇಲಾಖೆ ಮತ್ತು ಸಾರ್ವಜನಿಕರ ಸಮಿತಿ ರಚಿಸಿ ಜಂಟಿ ಸರ್ವೇ ಕಾರ್ಯ ನಡೆಸಬೇಕು. ಹಲವಾರು ವರ್ಷಗಳಿಂದ ಪ್ರಸ್ತುತ ಕಡಿಯಲುದ್ದೇಶಿಸಿರುವ ಮರಗಳಲ್ಲಿ ಸಾಕಷ್ಟು ಪಕ್ಷಿ ಸಂಕುಲಗಳು ಜೀವಿಸುತ್ತಿವೆ. ಅಲ್ಲದೆ ಮನುಷ್ಯ ಜೀವನಕ್ಕೆ ಬೇಕಾದ ಆಮ್ಲಜನಕ, ಗಾಳಿ, ಬೆಳಕು, ಕಾಲಕ್ಕೆ ಸರಿಯಾಗಿ ಮಳೆ ಬರುವುದಕ್ಕೆ ಅನುಕೂಲವಾಗಿರುವ ಮರಗಳನ್ನು ಉಳಿಸಬೇಕು. ಸಾರ್ವಜನಿಕರಿಂದ ಕೊಡಲ್ಪಟ ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

ಸಾರ್ವಜನಿಕರ ಆಕ್ಷೇಪಣೆ, ಅಹವಾಲುಗಳನ್ನು ಸ್ವೀಕರಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್‌ ಮಾತನಾಡಿ, ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕರಣದಡಿ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಕ್ರಮ ಕೈಗೊಳ್ಳಬೇಕಾದ ನೆಲೆಯಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಸಲಾಯಿತು. 30 ಸೆಂ.ಮೀ. ಸುತ್ತಳತೆ, 2 ಮೀ. ಎತ್ತರವಿರುವುದು ‘ಮರ’ ಎಂದು ಪರಿಗಣಿಸಲ್ಪಡುತ್ತದೆ. ಮರಗಳನ್ನು ಕಡಿಯಲೇಬೇಕೆನ್ನುವ ಉದ್ದೇಶ ಇಲಾಖೆಗಿಲ್ಲ. ಆದರೆ ಅಭಿವೃದ್ಧಿ ದೃಷ್ಟಿಯಿಂದ ಮರ ಕಡಿಯಬೇಕಾದುದು ಅನಿವಾರ್ಯ. ಒಂದು ಮರ ಕಡಿದರೆ ಹತ್ತು ಗಿಡಗಳನ್ನು ನೆಟ್ಟು ಬೆಳೆಸಬೇಕೆನ್ನುವ ನೆಲೆಯಲ್ಲಿ ಲಭ್ಯ ಸ್ಥಳಗಳಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ ಎಂದರು.

ಮರ ಸ್ಥಳಾಂತರ ಕಾರ್ಯಕ್ಕೆ ದುಬಾರಿ ವೆಚ್ಚ, ಸಾಕಷ್ಟು ಸಮಯ ಬೇಕಾಗುತ್ತದೆ. ಅಲ್ಲದೆ ಸ್ಥಳಾಂತರ ಮಾಡುವಾಗ ಮರದ ತಾಯಿ ಬೇರಿನೊಂದಿಗೆ ಅದರ ಸನಿಹದ ಮಣ್ಣನ್ನೂ ಸ್ಥಳಾಂತರಿಸಬೇಕು. ಸ್ಥಳಾಂತರಗೊಂಡ ಮರಗಳಲ್ಲಿ ಆಲ, ಅರಳಿ ಮಾತ್ರ ಉಳಿಯಲಿದೆ. 2005ರಲ್ಲಿ ಬಂದ ಜೆಸಿಬಿ, ಹಿಟಾಚಿಗಳಿಂದ ಇದುವರೆಗೆ ಸಾಕಷ್ಟು ಅರಣ್ಯ ನಾಶವಾಗಿದೆ. ಇದನ್ನು ತಡೆಗಟ್ಟಲು ಅರಣ್ಯ ಇಲಾಖೆಯಿಂದ ಮಾತ್ರ ಸಾಧ್ಯವಾಗದು. ಇದಕ್ಕೆ ಸಾರ್ವಜನಿಕರ ಸಂಪೂರ್ಣ ಸಹಕಾರ ಅವಶ್ಯವಿದೆ. ಸಾರ್ವಜನಿಕರು ನೀಡಿದ ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.

Advertisement

ಪರಿಸರ ವಿಜ್ಞಾನಿ, ಪರಿಸರ ಪ್ರೇಮಿ ಬಾಲಕೃಷ್ಣ ಮಧ್ದೋಡಿ, ಪರಿಸರ ವಾದಿಗಳಾದ ಸ್ವಚ್ಛ ಉಡುಪಿ ಬ್ರಿಗೇಡ್‌ನ‌ ಕಾರ್ಯದರ್ಶಿ ಸುಧಾಕರ ಪ್ರಭು, ರೋಟರಿ ಉಡುಪಿ ರಾಯಲ್ ಅಧ್ಯಕ್ಷ ಯಶವಂತ್‌ ಬಿ.ಕೆ., ನಗರಸಭೆ ಸದಸ್ಯ ಮಂಜುನಾಥ ಮಣಿಪಾಲ, ಸಾಮಾಜಿಕ ಕಾರ್ಯಕರ್ತ ರತ್ನಾಕರ ಇಂದ್ರಾಳಿ, ನೇತಾಜಿ ಸ್ಪೋರ್ಟ್ಸ್ ಕ್ಲಬ್‌ ಅಧ್ಯಕ್ಷ ಬಾಲಕೃಷ್ಣ ಪರ್ಕಳ, ನೇಟಿವ್‌ ಯೂತ್‌ ಸಂಸ್ಥೆಯ ಪ್ರೇಮಾನಂದ ಕಲ್ಮಾಡಿ, ರ್ಯಾನ್‌ ಫೆರ್ನಾಂಡಿಸ್‌, ನಮ್ಮ ಭೂಮಿ ಕುಂದಾಪುರ ರಾಮಾಂಜಿ ಇನ್ನಿತರರು ವೃಕ್ಷ ಉಳಿಸುವ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಲ್ಲದೆ, ವೃಕ್ಷ ಉಳಿಸುವಂತೆ ಮನವಿ ಸಲ್ಲಿಸಿದರು.

2 ಅಶ್ವತ್ಥ, 5 ಗೋಳಿ, 1 ಆಲ, 2 ಅತ್ತಿ, ದೇವದಾರು ಸೇರಿದಂತೆ ಇನ್ನಿತರ ಜಾತಿಯ 140 ಮರಗಳನ್ನು ಕಡಿಯಲು ಈಗಾಗಲೇ ಗುರುತಿಸಲಾಗಿದೆ. ಈ ಎಲ್ಲ ಮರಗಳನ್ನು ಕಡಿದ ಬಳಿಕ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸಬೇಕು. ಮಣಿಪಾಲದ ಕ್ಯಾನ್ಸರ್‌ ಆಸ್ಪತ್ರೆಯ ಎದುರಿನಲ್ಲಿದ್ದ 4 ಸಾಗುವಾನಿ ಮರಗಳನ್ನು ಈಗಾಗಲೇ ಕಡಿಯಲಾಗಿದ್ದು, ಈ ಬಗ್ಗೆ ರಾ.ಹೆ. ಪ್ರಾಧಿಕಾರಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗಿದೆಯೇ?, ಅನುಮತಿ ನೀಡದೇ ಇದ್ದರೂ ಮರಗಳನ್ನು ಕಡಿದ ಬಗ್ಗೆ ಪ್ರಾಧಿಕಾರಕ್ಕೆ ನೋಟೀಸ್‌ ಜಾರಿಗೊಳಿಸಬೇಕು. ಅಲ್ಲದೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

ಸಾರ್ವಜನಿಕರ ಆಗ್ರಹ
2 ಅಶ್ವತ್ಥ, 5 ಗೋಳಿ, 1 ಆಲ, 2 ಅತ್ತಿ, ದೇವದಾರು ಸೇರಿದಂತೆ ಇನ್ನಿತರ ಜಾತಿಯ 140 ಮರಗಳನ್ನು ಕಡಿಯಲು ಈಗಾಗಲೇ ಗುರುತಿಸಲಾಗಿದೆ. ಈ ಎಲ್ಲ ಮರಗಳನ್ನು ಕಡಿದ ಬಳಿಕ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸಬೇಕು. ಮಣಿಪಾಲದ ಕ್ಯಾನ್ಸರ್‌ ಆಸ್ಪತ್ರೆಯ ಎದುರಿನಲ್ಲಿದ್ದ 4 ಸಾಗುವಾನಿ ಮರಗಳನ್ನು ಈಗಾಗಲೇ ಕಡಿಯಲಾಗಿದ್ದು, ಈ ಬಗ್ಗೆ ರಾ.ಹೆ. ಪ್ರಾಧಿಕಾರಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗಿದೆಯೇ?, ಅನುಮತಿ ನೀಡದೇ ಇದ್ದರೂ ಮರಗಳನ್ನು ಕಡಿದ ಬಗ್ಗೆ ಪ್ರಾಧಿಕಾರಕ್ಕೆ ನೋಟೀಸ್‌ ಜಾರಿಗೊಳಿಸಬೇಕು. ಅಲ್ಲದೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next