ರಾಯಬಾಗ: ಮತಕ್ಷೇತ್ರದ ರೈತರ ಬಹುದಿನಗಳ ಬೇಡಿಕೆಯ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಯವರು ರೂ.1699 ಕೋಟಿ ಹಣ ಮಂಜೂರು ಮಾಡಿದ್ದಾರೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಸೋಮವಾರ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಯಬಾಗ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ, ಸತತ ಬರಗಾಲ ಅನುಭವಿಸುತ್ತಿರುವ ಗ್ರಾಮಗಳ ರೈತರ ಬೆಳೆಗಳಿಗೆ ಹಾಗೂ ಜನ-ಜಾನುವಾರುಗಳಿಗೆ ಕುಡಿಯಲು ಕಾಯಂ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ.
ತಮ್ಮ ಮತಕ್ಷೇತ್ರದಲ್ಲಿ 870 ಕೋಟಿ ರೂ. ವೆಚ್ಚದಲ್ಲಿ ಭೆಂಡವಾಡ ಏತ ನೀರಾವರಿ ಯೋಜನೆಯಿಂದ ಕೃಷ್ಣಾ ನದಿಯಿಂದ ಭೆಂಡವಾಡ, ಮಂಟೂರ, ಬಿರನಾಳ, ಬ್ಯಾಕೂಡ, ಬೂದಿಹಾಳ, ಹುಬ್ಬರವಾಡಿ, ಕಟಕಬಾವಿ, ದೇವಾಪೂರಹಟ್ಟಿ, ಸವಸುದ್ದಿ, ಖನದಾಳ, ಮೇಖಳಿ, ಬಾವಚಿ, ಮಾವಿನಹೊಂಡ, ದೇವನಕಟ್ಟಿ, ಮಾರಡಿ, ಗಿರಿನಾಯ್ಕವಾಡಿ ಗ್ರಾಮಗಳಿಗೆ ನೀರು ಪೂರೈಸಲಾಗುವುದು. 454 ಕೋಟಿ ವೆಚ್ಚದ ಕರಗಾಂವ ಏತ ನೀರಾವರಿ ಯೋಜನೆಯಡಿ ಉಮರಾಣಿ, ನಾಗರಮುನ್ನೊಳ್ಳಿ, ಬೆಳಕೂಡ, ಡೊನವಾಡ, ಬಂಬಲವಾಡ, ಕರಗಾಂವ, ಬೆಣ್ಣಿಹಳ್ಳಿ, ಕುಮಟೊಳ್ಳಿ, ಕಮತ್ಯಾನಟ್ಟಿ, ಮುಗಳಿ, ಕರೋಶಿ, ಹಂಚಿನಾಳ ಕೆ.ಕೆ, ಗ್ರಾಮಗಳು ಸೇರುತ್ತವೆ. ಹನುಮಾನ ಏತ ನೀರಾವರಿ ಯೋಜನೆಯಡಿ 357 ಕೋಟಿ ವೆಚ್ಚದಲ್ಲಿ ವಡ್ರಾಳ, ಮಜಲಟ್ಟಿ, ತೋರಣಹಳ್ಳಿ, ಹತ್ತರವಾಟ, ಕಜಗೌಡನಟ್ಟಿ, ಬಿದರೊಳ್ಳಿ, ಜೈನಾಪೂರ, ಮಾಂಗೂರ ಗ್ರಾಮಗಳು ಒಳಪಡಲಿವೆ ಎಂದರು.
ಘಟಪ್ರಭಾ ನದಿಯಿಂದ ನಾಗರಮುನ್ನೊಳಿ, ಬೆಳಕೂಡ, ಬಂಬಲವಾಡ ಈ ಮೂರು ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 18 ಕೋಟಿ ರೂ. ಮಂಜೂರು ಮಾಡಿಸಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.