Advertisement
ಉಡುಪಿ ಇಂದಿರಾ ನಗರದ 60ರ ವ್ಯಕ್ತಿ ಮಧುಮೇಹ, ಹೃದ್ರೋಗದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ರವಿವಾರ ಮೃತಪಟ್ಟರು.
Related Articles
Advertisement
169 ಸೋಂಕಿತರ ಪೈಕಿ ಪುರುಷರು 89, ಮಹಿಳೆಯರು 63, ಗಂಡು ಮಕ್ಕಳು 11, ಹೆಣ್ಣು ಮಕ್ಕಳು 6 ಮಂದಿ ಇದ್ದಾರೆ. ಉಡುಪಿ ತಾಲೂಕಿನ 86, ಕುಂದಾಪುರ ತಾಲೂಕಿನ 31, ಕಾರ್ಕಳ ತಾಲೂಕಿನ 52 ಮಂದಿ ಇದ್ದಾರೆ. ರವಿವಾರ ಜಿಲ್ಲೆಯಲ್ಲಿ 125 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ರವಿವಾರ 912 ಜನರ ಮಾದರಿ ಪಡೆಯಲಾಗಿದೆ. 706 ಜನರಿಗೆ ನೆಗೆಟಿವ್ ಬಂದಿದ್ದು 564 ಮಾದರಿಗಳ ವರದಿ ಬರಬೇಕಾಗಿವೆ. 2,133 ಮಂದಿ ಆಸ್ಪತ್ರೆಯಿಂದ ಇದುವರೆಗೆ ಬಿಡುಗಡೆಗೊಂಡಿದ್ದರೆ 1,241 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 626 ಮಂದಿ ಹೋಂ ಐಸೊಲೇಶನ್‌ನಲ್ಲಿದ್ದಾರೆ. 1,701 ಜನರು ಮನೆಗಳಲ್ಲಿ, 260 ಮಂದಿ ಐಸೊಲೇಶನ್ ವಾರ್ಡ್‌ಗಳಲ್ಲಿ ನಿಗಾದಲ್ಲಿದ್ದಾರೆ.
ಉಡುಪಿ ಮೂಲದ ವೈದ್ಯ ಆಫ್ರಿಕಾದಲ್ಲಿ ಸಾವುಮೂಲತಃ ಉಡುಪಿಯ ಮೂಡನಿಡಂಬೂರು ಹೊಸ ಮನೆಯ ವಾದಿರಾಜ ಶೆಟ್ಟಿ ಮತ್ತು ಪಿಲಾರು ಬಂಗ್ಲೆ ಮನೆ ನಿವಾಸಿ ವಿಶಾಲಾಕ್ಷಿ ಶೆಟ್ಟಿ ದಂಪತಿಯ ಪುತ್ರ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ| ನಿತಿನ್ ವಿ. ಶೆಟ್ಟಿ (40) ಜು. 25ರಂದು ಡರ್ಬನ್‌ನಲ್ಲಿ ಕೋವಿಡ್-19 ಸೋಂಕಿನಿಂದ ನಿಧನ ಹೊಂದಿದರು. 14 ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಅವರು ಪತ್ನಿಯನ್ನು ಅಗಲಿದ್ದಾರೆ. ಕುಂದಾಪುರ: 19 ಮಂದಿಗೆ ಕೋವಿಡ್ 19 ಸೋಂಕು
ಅಂಪಾರು ಗ್ರಾಮದ ನಾಲ್ವರ ಸಹಿತ ಕುಂದಾಪುರ ತಾಲೂಕಿನಲ್ಲಿ 10 ಮಂದಿ ಮತ್ತು ಬೈಂದೂರು ತಾಲೂಕಿನ 9 ಮಂದಿ ಸಹಿತ ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಒಟ್ಟು 19 ಮಂದಿಗೆ ಕೋವಿಡ್ 19 ಸೋಂಕು ರವಿವಾರ ಪತ್ತೆಯಾಗಿದೆ. ಕುಂದಾಪುರ ಪುರಸಭೆ ವ್ಯಾಪ್ತಿಯ ಇಬ್ಬರು, ಅಂಪಾರು ಗ್ರಾಮದ ಒಂದೇ ಮನೆಯ ಇಬ್ಬರ ಸಹಿತ ನಾಲ್ವರು ವ್ಯಕ್ತಿಗಳಿಗೆ, ವಂಡ್ಸೆಯ ಇಬ್ಬರಿಗೆ, ಕೋಟೇಶ್ವರ, ಆಜ್ರಿಯ ತಲಾ ಒಬ್ಬರಿಗೆ, ಬೈಂದೂರು ತಾಲೂಕಿನ ನಾಡ, ಕಿರಿಮಂಜೇಶ್ವರ ಗ್ರಾಮದ ತಲಾ ಮೂವರಿಗೆ, ಬೈಂದೂರಿನ ಇಬ್ಬರಿಗೆ ಮತ್ತು ಬಡಾಕೆರೆಯ ಒಬ್ಬರಿಗೆ ಕೋವಿಡ್ 19 ಪಾಸಿಟಿವ್ ದೃಢವಾಗಿದೆ. ಸಿದ್ದಾಪುರ: 6 ಪ್ರಕರಣ
ಶಂಕರನಾರಾಯಣದ ಲೈನ್‌ಮನ್, ಅನಾರೋಗ್ಯದಿಂದ ಬಳಲುತ್ತಿರುವ ಸಿದ್ದಾಪುರ ಕೆಳಪೇಟೆ ನಿವಾಸಿ, ಆಜ್ರಿ, ಹೊಸಂಗಡಿಯಲ್ಲಿ ಈ ಹಿಂದೆ ಕೋವಿಡ್ 19 ಪಾಸಿಟಿವ್ ದೃಢಪಟ್ಟ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರು, ಉಳ್ಳೂರು-74 ಗ್ರಾಮಕ್ಕೆ ಬೆಂಗಳೂರಿನಿಂದ ಆಗಮಿಸಿದ ಯುವಕ ಸೇರಿದಂತೆ 6 ಮಂದಿಗೆ ರವಿವಾರ ಕೋವಿಡ್ 19 ದೃಢಪಟ್ಟಿದೆ. ಇವರಲ್ಲಿ 9 ವರ್ಷ ಪ್ರಾಯದ ಬಾಲಕನೂ ಇದ್ದಾನೆ. ಹಾಲಾಡಿಯ ದಾದಿಗೆ ಸೋಂಕು
ವಾರದ ಹಿಂದೆ ಜ್ವರ ಬಾಧಿತರಾಗಿದ್ದ ಹಾಲಾಡಿಯ ಆಸ್ಪತ್ರೆಯ ನರ್ಸ್ ಒಬ್ಬರಿಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ. 12 ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಕಾಪು: 22 ಪ್ರಕರಣ
ತಾಲೂಕಿನಲ್ಲಿ 2 ದಿನಗಳಲ್ಲಿ 22 ಮಂದಿಯಲ್ಲಿ ಕೋವಿಡ್ 19 ದೃಢಪಟ್ಟಿದೆ. ಪುರಸಭೆ ವ್ಯಾಪ್ತಿಯಲ್ಲಿ 8, ಇನ್ನಂಜೆ ಗ್ರಾ.ಪಂ.ನಲ್ಲಿ 2, ಮಜೂರು 4, ಕೋಟೆ 2, ಬೆಳಪು, ಪಡುಬೆಳ್ಳೆ, ಹೆಜಮಾಡಿ, ಕುತ್ಯಾರು, ಬಂಟಕಲ್ಲು, ದೇವರಗುಡ್ಡೆಯಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ. ಬೆಳ್ಮಣ್: 3 ಪಾಸಿಟಿವ್
ಬೆಳ್ಮಣ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಂಬಯಿಯಿಂದ ಆಗಮಿಸಿ ಗೃಹನಿಗಾದಲ್ಲಿದ್ದ 6ರ ಮಗು, 40ರ ಮಹಿಳೆ, ಬೆಳ್ಮಣ್ ಅಂಚೆ ಕಚೇರಿ ಸಿಬಂದಿಗೆ ಸೋಂಕು ಬಾಧಿಸಿದೆ. ನಿರ್ಲಕ್ಷ್ಯ: 13 ಮಂದಿ ವಿರುದ್ಧ ಪ್ರಕರಣ
ಕೋವಿಡ್ 19 ಸೋಂಕು ದೃಢಪಟ್ಟ ಸಿಬಂದಿ ಹೊರಗೆಲ್ಲೂ ಹೋಗದಂತೆ ನಿಯಂತ್ರಿಸದೆ ಬೇಜವಾಬ್ದಾರಿ ತೋರಿದ ಆರೋಪದಲ್ಲಿ ಇನ್ನಾ ಗ್ರಾಮ ಕಾಂಜರಕಟ್ಟೆಯ ಫ್ಲೆಕ್ಸ್ ಕಂಪೆನಿಯೊಂದರ ಆಡಳಿತ ವರ್ಗದ 13 ಮಂದಿಯ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ನೌಕರರಿಗೆ ಸೋಂಕು ದೃಢಪಟ್ಟ ಕಾರಣ ಜು. 21ರಂದು ಕಂಪೆನಿಯನ್ನು ಸೀಲ್‌ಡೌನ್ ಮಾಡಿ ಒಳಗಿರುವವರನ್ನು ಅಲ್ಲೇ ಇರುವಂತೆ ಸೂಚಿಸಲಾಗಿತ್ತು. ಆದರೂ ಕೆಲವರು ಬೇರೆಡೆ ತೆರಳಿದ್ದಾರೆ ಎಂದು ಇನ್ನಾ ಗ್ರಾ.ಪಂ.ಗೆ ದೂರು ಬಂದಿದ್ದು, ಜು. 24ರಂದು ಕಂಪೆನಿಗೆ ನೋಟಿಸ್ ನೀಡಲಾಗಿತ್ತು. 30 ಮಂದಿ ಆಸ್ಪತ್ರೆಯಲ್ಲಿದ್ದು, 6 ಮಂದಿ ನಾಪತ್ತೆಯಾಗಿದ್ದಾರೆ ಎಂದು ಕೋವಿಡ್ ಜಾಗೃತ ದಳದ ಅಧಿಕಾರಿ ಡಾ| ಎಚ್. ಸುಬ್ರಹ್ಮಣ್ಯ ಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೇಟೆ ಲಾಕ್‌ಡೌನ್
ಹಲವರಿಗೆ ಕೋವಿಡ್ 19 ದೃಢವಾಗಿರುವ ಪರಿಣಾಮ ಕಾಂಜರಕಟ್ಟೆ ಪೇಟೆ ಅನಿವಾರ್ಯವಾಗಿ ಲಾಕ್‌ಡೌನ್ ಆಗಿದೆ.