ಮಂಗಳೂರು: ಪ್ರತೀ ನಿಮಿಷಕ್ಕೆ 930 ಲೀಟರ್ ಉತ್ಪಾದನಾ ಸಾಮರ್ಥ್ಯದ ಆಕ್ಸಿಜನ್ ಘಟಕ ಎಂಆರ್‌ಪಿಎಲ್ ವತಿಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ನಿರ್ಮಾಣವಾಗುವ ಪ್ರಸ್ತಾವನೆಯ ಬೆನ್ನಲ್ಲೇ ಸುಸಜ್ಜಿತ ಪ್ರತ್ಯೇಕ ಸರ್ಜಿಕಲ್ ಕಟ್ಟಡ ನಿರ್ಮಾಣ ಕಾಮಗಾರಿ ಕೂಡ ವೇಗ ಪಡೆದುಕೊಂಡಿದ್ದು, ವರ್ಷದೊಳಗೆ ಪೂರ್ಣವಾಗುವ ನಿರೀಕ್ಷೆಯಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಸರ್ಜಿಕಲ್ ಕಟ್ಟಡದಲ್ಲಿ 12 ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ಒಟ್ಟು 168 ಹಾಸಿಗೆಗಳಿರಲಿವೆ. ಸದ್ಯ ಶೇ. 10ರಷ್ಟು ಕಾಮಗಾರಿ ನಡೆದಿದೆ.ಒಟ್ಟು 39.19 ಕೋ.ರೂ. ವೆಚ್ಚ ಅಂದಾಜಿಸಲಾಗಿದೆ.
ಸುಸಜ್ಜಿತ ಕಟ್ಟಡ :
ಕಟ್ಟಡವು ನೆಲ ಅಂತಸ್ತು, ಜಿ+6 ಮಹಡಿಗಳನ್ನು ಹೊಂದಿರಲಿದೆ. ಕಟ್ಟಡದ ವಿಸ್ತೀರ್ಣ 13,252 ಚ.ಮೀ. ಇರಲಿದೆ. ಮೆಡಿಸಿನ್ ಹಾಗೂ ಸರ್ಜರಿ ವಿಭಾಗ ಪ್ರತ್ಯೇಕವಿರಲಿದ್ದು, ಇದರ ಮಧ್ಯೆ ಸೇತುವೆ ಜೋಡಣೆಯಾಗಲಿದೆ. ರೋಗಿಗಳ ಅನುಕೂಲಕ್ಕಾಗಿ ರ್‍ಯಾಂಪ್ ನಿರ್ಮಾಣವೂ ಆಗಲಿದೆ. ಅಗ್ನಿಶಾಮಕ ಸಹಿತ ಎಲ್ಲ ಸುರಕ್ಷಾ ಪರಿಕರಗಳನ್ನು ಅಳವಡಿಸಲಾಗುತ್ತದೆ. ಸಿಟಿ ಸ್ಕ್ಯಾನ್, ಎಕ್ಸ್‌ರೇ,ರೇಡಿಯೋಥೆರಪಿ ಕೊಠಡಿ ಸೇರಿದಂತೆ ವಿಕಿರಣ ಶಾಸ್ತ್ರ, ಲಾಂಡ್ರಿ, ಔಷಧಾಲಯ, ಅಲ್ಟ್ರಾಸೌಂಡ್, ಸೆಂಟ್ರಲ್ ಸ್ಟ್ರೈಲ್ ಸಪ್ಲೈ ಡಿಪಾರ್ಟ್ ಮೆಂಟ್ , ಸ್ಟೆರೈಲ್ ಸ್ಟೋರ್, ಪ್ರೀ ಆಪರೇಟಿವ್ ಹಾಗೂ ಪೋಸ್ಟ್ ಆಪರೇಟಿವ್ ವ್ಯವಸ್ಥೆ ಇರಲಿದೆ.
170 ವರ್ಷಗಳ ಇತಿಹಾಸವಿರುವ ವೆನ್ಲಾಕ್‌ನಲ್ಲಿ ವರ್ಷಕ್ಕೆ 2.25 ಲಕ್ಷ ಮಂದಿ ಹೊರರೋಗಿ ಗಳಾಗಿಯೂ 25,000ಕ್ಕೂ ಅಧಿಕ ಮಂದಿ ಒಳ ರೋಗಿಗಳಾಗಿಯೂ ಚಿಕಿತ್ಸೆ ಪಡೆಯುತ್ತಾರೆ. ಆಸ್ಪತ್ರೆಯು 12.5 ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿದೆ.ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಾಗಿದ್ದರೂ ಹಲವಾರು ವರ್ಷಗಳಿಂದ ರಾಜ್ಯದ 8 ಜಿಲ್ಲೆಗಳ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಸದ್ಯ ಆಕ್ಸಿಜನ್ ಸಹಿತ 275 ಬೆಡ್‌ಗಳನ್ನು ಕೋವಿಡ್ ಕಾರಣದಿಂದ ಮೀಸಲಿಡಲಾಗಿದೆ. ಕೊರೊನಾ ಹೊರತಾದ 310 ರೋಗಿಗಳು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ವೆನ್ಲಾಕ್‌ನಲ್ಲಿ ಸುಸಜ್ಜಿತ ಸರ್ಜಿಕಲ್ ಬ್ಲಾಕ್ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಿಸಲಾ ಗುವುದು. ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮಂಗಳೂರಿಗೆ ಇದೊಂದು ದೊಡ್ಡ ಕೊಡುಗೆಯಾಗಲಿದೆ.
– ಪ್ರಶಾಂತ್ ಕುಮಾರ್ ಮಿಶ್ರಾ, ವ್ಯವಸ್ಥಾಪಕ ನಿರ್ದೇಶಕರು (ಪ್ರಭಾರ), ಸ್ಮಾರ್ಟ್‌ಸಿಟಿ-ಮಂಗಳೂರು