ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ( ಮಾರ್ಚ್ 8) ಮಂಡಿಸುತ್ತಿರುವ ರಾಜ್ಯ ಬಜೆಟ್‍ನಲ್ಲಿ ಮಹದಾಯಿ ಯೋಜನೆ ಭರ್ಜರಿ ಅನುದಾನ ಘೋಷಣೆಯಾಗಿದೆ.
ಮಹದಾಯಿ ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ ಬರೋಬ್ಬರಿ 1,677 ಕೋಟಿ ರೂ. ಅನುದಾನ ನೀಡುವ ಮೂಲಕ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕ ಭಾಗದ ರೈತರ ಬೇಡಿಕೆ ಈಡೇರಿಸಿದ್ದಾರೆ.
ಗದಗ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ರೈತರು ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ ಆಗ್ರಹಿಸಿ ಕಳೆದ 20 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. 2015 ರಲ್ಲಿ ಗದಗ ಜಿಲ್ಲೆಯ ನರಗುಂದದಲ್ಲಿ ಮಹದಾಯಿ ಹೋರಾಟಗಾರರು ಒಂದು ವರ್ಷ ಕಾಲ ಧರಣಿ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.
ಅದಾದ ಬಳಿಕ ನ್ಯಾಯಾಧಿಕರಣ ತೀರ್ಪು ಬಂತು. 13.42 ಟಿಎಂಸಿ ನೀರು ಬಳಸಿಕೊಳ್ಳಲು ರಾಜ್ಯಕ್ಕೆ ಅವಕಾಶ ಸಿಕ್ಕಿತು. ಕೇಂದ್ರ ಸರ್ಕಾರ ಕೂಡ ನೀರು ಬಳಕೆ ಮಾಡಿಕೊಳ್ಳಲು ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ನಂತರ ರಾಜ್ಯ ಸರ್ಕಾರ ಈ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳದಲ್ಲಿ ಹರಿಯುವ ನೀರು ಬಳಕೆ ಮಾಡಿಕೊಳ್ಳುವ ಕಾಮಗಾರಿಗೆ 500 ಕೋಟಿ ಮೀಸಲಿಟ್ಟಿತು. ಆದರೆ ಇದುವರೆಗೂ ಕಾಮಗಾರಿ ಪ್ರಾರಂಭ ಮಾಡಿ ನೀರು ಪಡೆದುಕೊಳ್ಳಲು ಮುಂದಾಗಿರಲಿಲ್ಲ.
ಈ ಬಾರಿ ಮಂಡನೆಯಾಗುತ್ತಿರುವ ಬಜೆಟ್ ನಲ್ಲಿ ಕಳಸಾ ಕಾಮಗಾರಿಗೆ ಅನುದಾನ ಸಿಗಬಹುದೇನ್ನುವ ನಿರೀಕ್ಷೆ ರೈತರಲ್ಲಿತ್ತು. ಅದು ಈಗ ಈಡೇರಿದ್ದು ಸಿಎಂ ಯಡಿಯೂರಪ್ಪನವರು 1,677 ಕೋಟಿ ರೂ. ಅನುದಾನ ನೀಡಿದ್ದಾರೆ. ಇದು ಮಹದಾಯಿ ಹೋರಾಟಗಾರರ ಸಂತಸಕ್ಕೆ ಕಾರಣವಾಗಿದೆ.