Advertisement

ನಿನ್ನೆ ಮತ್ತೆ 164 ಸ್ಯಾಂಪಲ್‌ ತಪಾಸಣೆಗೆ

04:45 AM Jun 01, 2020 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ 77 ಜನರಿಗೆ ಅಂಟಿದ್ದ ಕೋವಿಡ್, ಸದ್ಯ ತುಸು ತನ್ನ ಆರ್ಭಟವನ್ನು ಕಡಿಮೆ ಮಾಡಿದೆ. ಕಳೆದ 9 ದಿನಗಳಿಂದ ಒಂದೂ ಕೋವಿಡ್ ಪಾಸಿಟಿವ್‌ ಪ್ರಕರಣ ಪತ್ತೆಯಾಗಿಲ್ಲ. ಇದರಿಂದ ಜನರು ಕೊಂಚ ನಿರ್ಲಿಪ್ತರಾಗಿದ್ದಾರೆ.

Advertisement

ಜಿಲ್ಲೆಯಲ್ಲಿ ಏ.3ರಿಂದ ಮೇ 22ರ ವರೆಗೆ ಒಟ್ಟು 77 ಜನರಿಗೆ ಈ ಸೋಂಕು ಖಚಿತವಾಗಿದ್ದು, ಅದರಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದು, 66 ಜನರು ಕೊರೊನಾ ಮುಕ್ತರಾಗಿ, ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ 10 ಜನರು ಮಾತ್ರ ಜಿಲ್ಲಾ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರೂ ಸಂಪೂರ್ಣ ಚೇತರಿಸಿಕೊಂಡು ಬಿಡುಗಡೆಗೊಳ್ಳಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

164 ಸ್ಯಾಂಪಲ್‌ ಪರೀಕ್ಷೆ: ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿ, ಜಿಲ್ಲಾಡಳಿತ ನಿಗದಿಪಡಿಸಿದ ವಸತಿ ನಿಲಯ, ಶಾಲೆಗಳಲ್ಲಿ ಕ್ವಾರಂಟೈನ್‌ನಲ್ಲಿ ಇದ್ದವರಲ್ಲಿ 164 ಜನರ ಗಂಟಲು ದ್ರವ ಮಾದರಿ ರವಿವಾರ ಪರೀಕ್ಷೆಗೆ ಕಳುಹಿಸಲಾಗಿದೆ. ಈವರೆಗೆ ಕಳುಹಿಸಿದ್ದ 1039 ಹಾಗೂ ರವಿವಾರ ಹೊಸದಾಗಿ ಕಳುಹಿಸಿದ 164 ಸಹಿತ ಒಟ್ಟು 1203 ಜನರ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲಾ ಕೋವಿಡ್‌-19 ಆಸ್ಪತ್ರೆಯಲ್ಲಿ ಮೇ 17ರಿಂದ ಸ್ಥಳೀಯವಾಗಿ ಕೋವಿಡ್ ಪರೀಕ್ಷೆ ಲ್ಯಾಬ್‌ ಆರಂಭಗೊಂಡಿದ್ದು, ಈ ವರೆಗೆ ಒಟ್ಟು 169 ಜನರ ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದೆ. ಉಳಿದ ಸ್ಯಾಂಪಲ್‌ಗ‌ಳನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

1151 ಜನರ ಬಿಡುಗಡೆ: ವಲಸೆ ಕಾರ್ಮಿಕರು ಸಹಿತ ಹೊರ ರಾಜ್ಯದಿಂದ ಆಗಮಿಸಿದ್ದ 3050 ಜನರನ್ನು ಜಿಲ್ಲಾಡಳಿತ ವಿವಿಧೆಡೆ ವಸತಿ ನಿಲಯ, ಶಾಲೆಗಳಲ್ಲಿ ಸರ್ಕಾರಿ ಕ್ವಾರಂಟೈನ್‌ ಮಾಡಿದ್ದು, 14 ದಿನಗಳ ಅವಧಿ ಪೂರ್ಣಗೊಂಡ 1151 ಜನರನ್ನು ಮನೆಗೆ ಬಿಡುಗಡೆ ಮಾಡಲಾಗಿದೆ. ಸದ್ಯ 1899 ಜನರು ಸರ್ಕಾರಿ ಕ್ವಾರಂಟೈನ್‌ ನಲ್ಲಿ ಇದ್ದಾರೆ. ಅಲ್ಲದೇ ಈ ವರೆಗೆ ಒಟ್ಟು 8172 ಜನರ ಸ್ಯಾಂಪಲ್‌ ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ 6857 ಜನರ ವರದಿ ನೆಗೆಟಿವ್‌ ಬಂದಿವೆ. 77 ಜನರಿಗೆ ಪಾಜಿಟಿವ್‌ ಬಂದಿದ್ದು, 66 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಓರ್ವ ವೃದ್ಧ ಮೃತಪಟ್ಟಿದ್ದು, 10 ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. 13 ಸ್ಯಾಂಪಲ್‌ಗ‌ಳು ರಿಜೆಕ್ಟ್ ಆಗಿವೆ. ಸೋಂಕಿತ ವ್ಯಕ್ತಿಗಳು ಕಂಡು ಬಂದು, ಈಗಲೂ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳು ವಾಸಿಸುವ 3 ಪ್ರದೇಶಗಳನ್ನು ಇಂದಿಗೂ ಕಂಟೇನ್ಮೆಂಟ್‌ ಝೋನ್‌ ಗಳೆಂದು ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next