Advertisement
ಸಂಗ್ರಹಿತ ಮಾದರಿಗಳ ಫಲಿತಾಂಶ ಬರುವಿಕೆ ಈ ರೀತಿ ವಿಳಂಬವಾದರೆ ಗಂಟಲು ದ್ರವ ಪರೀಕ್ಷೆಗೆ ಕೊಟ್ಟಿರುವವರಲ್ಲಿ ಒಂದುವೇಳೆ ಸೋಂಕಿತರಿದ್ದು ಅವರು ಎಲ್ಲೆಡೆ ಓಡಾಡಿದರೆ ಸೋಂಕು ಹರಡುವುದಿಲ್ಲವೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
Related Articles
ಹೀಗೆ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕೊಟ್ಟಿರುವ ಶಂಕಿತರು ಅವರವರ ಮನೆಯಲ್ಲೇ ಉಳಿದು ಸ್ವಯಂ ನಿರ್ಬಂಧ ವಿಧಿಸಿಕೊಂಡರೆ ಸರಿ. ಆದರೆ ಅವರು ಊರೆಲ್ಲಾ ಓಡಾಡಿದರೆ, ಅವರಿಗೆ ಈಗಾಗಲೇ ಪಾಸಿಟಿವ್ ಇದ್ದರೆ? ಎಂಬ ಆತಂಕ ಜನರಲ್ಲಿ ಮೂಡಿದೆ. ಫಲಿತಾಂಶ ಬರುವುದು ವಿಳಂಬವಾದಷ್ಟೂ ಸೋಂಕಿತರು ಎಲ್ಲೆಂದರಲ್ಲಿ ಓಡಾಡುವ ಸಾಧ್ಯತೆಯೂ ಹೆಚ್ಚಾಗುತ್ತದೆ.
Advertisement
ಪರೀಕ್ಷೆ ಮಾಡಿಸಿಕೊಂಡಿರುವವರಲ್ಲಿ ಸುಶಿಕ್ಷಿತರು, ಕೋವಿಡ್ ಬಗ್ಗೆ ಅರಿವಿರುವವರಿದ್ದರೆ ಸ್ವಯಂ ಕ್ವಾರಂಟೈನ್ ಆಗಿರುತ್ತಾರೆ. ಆದರೆ ಅಂಥವರ ಸಂಖ್ಯೆ ಕಡಿಮೆ. ಹೀಗೆ ಪರೀಕ್ಷೆ ಮಾಡಿಸಿಕೊಂಡು ಕಳೆದ ಮೂರು ನಾಲ್ಕು ದಿನಗಳಿಂದ ಮನೆಯಲ್ಲೇ ಉಳಿದಿರುವ ಇಬ್ಬರು ಉದಯವಾಣಿಯೊಂದಿಗೆ ಮಾತನಾಡಿ, ನಾವು ಪರೀಕ್ಷೆ ಫಲಿತಾಂಶ ಬರುತ್ತದೆಂದು ಭಾನುವಾರದಿಂದ ಕಾಯುತ್ತಿದ್ದೇವೆ.
ಮಂಗಳವಾರವೂ ಪರೀಕ್ಷೆಯ ವರದಿ ಬಂದಿಲ್ಲ. ಬೇರೆಯವರಿಗೆ ಸೋಂಕು ಹರಡೀತು ಎಂಬ ಮುಂದಾಲೋಚನೆಯಿಂದ ಮನೆಯಲ್ಲೇ ಉಳಿದಿದ್ದೇವೆ. ಮನೆಯಲ್ಲೂ ಸಹ ಇತರರಿಂದ ಅಂತರ ಕಾಪಾಡಿಕೊಂಡು ಪ್ರತ್ಯೇಕ ಕೋಣೆಯಲ್ಲಿದ್ದೇವೆ. ಫಲಿತಾಂಶ ಬಂದು ನೆಗೆಟಿವ್ ಆದರೆ ನಿರಾಳವಾಗಬಹುದು. ಪಾಸಿಟಿವ್ ಬಂದರೆ ಆಸ್ಪತ್ರೆಗಾದರೂ ದಾಖಲಾಗಬಹುದು. ಆದರೆ ಫಲಿತಾಂಶವೇ ಬಾರದೇ ಇಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ. ಎಂದು ಅಳಲು ತೋಡಿಕೊಂಡರು.
ಕಂಟೈನ್‌ಮೆಂಟ್ ವಲಯದಲ್ಲಿ ಕೇಳುವವರಿಲ್ಲ:ಇನ್ನೊಂದೆಡೆ, ನಗರದಲ್ಲಿ ಕಂಟೈನ್‌ಮೆಂಟ್ ವಲಯಗಳೆಂದು ಸೀಲ್‌ಡೌನ್ ಮಾಡಿರುವ ಪ್ರದೇಶಗಳಲ್ಲಿ ಉಸ್ತುವಾರಿ ನೋಡಿಕೊಳ್ಳುವವರಿಲ್ಲದೇ ಅನಾಥವಾಗಿವೆ. ನಗರದ ಭ್ರಮರಾಂಬ ಬಡಾವಣೆ 6ನೇ ಕ್ರಾಸ್‌ನಲ್ಲಿ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್‌ಡೌನ್ ಮಾಡಿ ಎರಡು ಬ್ಯಾರಿಕೇಡ್ ಹಾಕಲಾಗಿದೆ. ಒಂದೆರಡು ದಿನ ಅಲ್ಲಿ ಉಸ್ತುವಾರಿ ಸಿಬ್ಬಂದಿ, ಪೊಲೀಸ್, ಹೋಂ ಗಾರ್ಡ್ ಇದ್ದರು. ಆದರೆ ಮಂಗಳವಾರ ಮಧ್ಯಾಹ್ನದವರೆಗೆ ಹೋಂ ಗಾರ್ಡ್ ಮಾತ್ರ ಇದ್ದರು. ಸೀಲ್‌ಡೌನ್ ಪ್ರದೇಶದ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿ ಇರಲಿಲ್ಲ. ಸೀಲ್‌ಡೌನ್ ಪ್ರದೇಶದ ಜನರ ಅವಶ್ಯಕತೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಆ ಪ್ರದೇಶದ ನಾಗರಿಕರು ಆರೋಪಿಸಿದ್ದಾರೆ. ಇದರಿಂದಾಗಿ ಸೀಲ್‌ಡೌನ್ ಪ್ರದೇಶದ ಜನರು ಬೇರೆಡೆಗೆ ಹೋಗಲು ಅವಕಾಶವಾಗಿದೆ. ಸೀಲ್‌ಡೌನ್ ಉದ್ದೇಶವೇ ವಿಫಲವಾಗಿದೆ ಎಂದು ಅಕ್ಕಪಕ್ಕದ ನಿವಾಸಿಗಳು ದೂರಿದ್ದಾರೆ. – ಕೆ.ಎಸ್. ಬನಶಂಕರ ಆರಾಧ್ಯ