ಮಂಡ್ಯ: ಕಬ್ಬಿನ ಗದ್ದೆಯಲ್ಲಿ ಅನುಮಾನಾಸ್ಪದವಾಗಿ ಪರೇಡ್ ನಡೆಸುತ್ತಿದ್ದ 16 ಮಂದಿಯನ್ನು ಪೊಲೀಸರು ಭಾನುವಾರ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಹುಣಸೂರು ಮೂಲದ ಇಬ್ಬರು, ಕೆ.ಆರ್.ಪೇಟೆಯ 9, ಆಲಂಬಾಡಿ ಕಾವಲ್‌ನ 5 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹುಣಸೂರು ಮೂಲದ ಮುಬಾರಕ್ ಪಾಷ ಎಂಬಾತನ ನೇತೃತ್ವದಲ್ಲಿ ಕಬ್ಬಿನ ಗದ್ದೆಯ ಮರೆಯಲ್ಲಿ ಇವರೆಲ್ಲರೂ ಪರೇಡ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತರೆಲ್ಲರೂ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಎಂದು ಪೊಲೀಸರು ಹೇಳಿದ್ದು, ಈ ಪರೇಡ್‌ನ ಉದ್ದೇಶವೇನು, ಸಾರ್ವಜನಿಕ ಸ್ಥಳಗಳಲ್ಲಿ ಪರೇಡ್ ಮಾಡದೆ ಕಬ್ಬಿನ ಗದ್ದೆಯ ಮರೆಯಲ್ಲೇ ಏಕೆ ನಡೆಸಲಾಗುತ್ತಿತ್ತು, ಅಲ್ಲಿ ಎಂತಹ ತರಬೇತಿಯನ್ನು ನೀಡಲಾಗುತ್ತಿತ್ತು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಪರೇಡ್ ನಡೆಸುತ್ತಿದ್ದ ಸ್ಥಳವನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಅಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳು ಅಥವಾ ಇನ್ನಾವುದೇ ವಿಧ್ವಂಸಕ ಕೃತ್ಯವೆಸಗುವಂತಹ ವಸ್ತುಗಳು, ಕರಪತ್ರಗಳಾಗಲೀ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಾದವರ ಹೆಸರು: ಹುಣಸೂರು ಜಿಲ್ಲೆಯ ಮುಬಾರಕ್ ಷರೀಫ್ (24), ಮೊಹಮ್ಮದ್ ಖಲೀಲ್ (24), ಕೆ.ಆರ್.ಪೇಟೆ ಸುಭಾಷ್‌ನಗರದ ನಜೀಬ್ (24), ಇಮ್ರಾನ್‌ಖಾನ್ (28), ಹಳೇ ಮೈಸೂರು ರಸ್ತೆಯ ಸಲ್ಮಾನ್ (30), ಸುಭಾಷ್ ನಗರದ ಸಲ್ಮಾನ್, ಹೇಮಾವತಿ ಬಡಾವಣೆಯ ಶಫೀರ್ (28), ನದೀಂ (26), ಮೊಹಮ್ಮದ್ ಸಲ್ಮಾನ್ (24), ಕಿಕ್ಕೇರಿ ರಸ್ತೆಯ ಸುಹೇಲ್ (24), ಕೆ.ಆರ್.ಪೇಟೆ ತಾಲೂಕಿನ ಆಲಂಬಾಡಿ ಕಾವಲ್‌ನ ಸೈಯದ್ ರಿಯಾಜ್ (28), ಸೈಯದ್ ಷರೀಫ್(19), ಸೈಯದ್ ಸರವರ್ (22), ಸೈಯದ್ ಜುಬೇರ್ (22), ಮಹಮದ್ ನದೀಂ, (23), ಸದ್ದಾಂ (20) ಬಂಧಿತರು.
ಹುಣಸೂರು ಮೂಲದ ವ್ಯಕ್ತಿಯೊಬ್ಬನಿಂದ ಅವರೆಲ್ಲರೂ ತರಬೇತಿ ಪಡೆಯುತ್ತಿದ್ದರು. ಅವರ ಪರೇಡ್ ಅನುಮಾನಾಸ್ಪದವಾಗಿದ್ದರಿಂದ ಬಂಧಿಸಲಾಗಿದೆ. ಇವರೆಲ್ಲರೂ ಪಿಎಫ್ಐ ಸಂಘಟನೆಗೆ ಸೇರಿದ್ದರೂ, ಆ ಸಂಘಟನೆಯವರು ಎಂಬ ಕಾರಣಕ್ಕೆ ನಾವು ಬಂಧಿಸಿಲ್ಲ. ಪರೇಡ್ ನಡೆಸುವ ಸಮಯದಲ್ಲಿ ಅವರ ವರ್ತನೆ ಅನುಮಾನದಿಂದ ಕೂಡಿತ್ತು.
-ಕೆ.ಪರಶುರಾಮ್, ಎಸ್‌ಪಿ