ಥಾಣೆ : ಮಹಾರಾಷ್ಟ್ರದ ಥಾಣೆಯ ಶಹಾಪುರದಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತಿದ್ದ ಸ್ಥಳದಲ್ಲಿ ಕ್ರೇನ್ ಕುಸಿದು 16 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸೋಮವಾರ ತಡ ರಾತ್ರಿ ನಡೆದಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಥಾಣೆಯ ಸರ್ಲಾಂಬೆ ಗ್ರಾಮದ ಬಳಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಈ ವೇಳೆ ಕ್ರೇನ್ ಕುಸಿದು ಅಪಘಾತ ಸಂಭವಿಸಿದೆ. ಮೃತರ ಹೊರತಾಗಿ ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಕೂಡ ವ್ಯಕ್ತವಾಗಿದ್ದು ರಕ್ಷಣಾ ತಂಡ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಗರ್ಡರ್ ಯಂತ್ರಕ್ಕೆ ಸಂಪರ್ಕ ಕಲ್ಪಿಸುವ ಕ್ರೇನ್ ಮತ್ತು ಸ್ಲ್ಯಾಬ್ 100 ಅಡಿ ಎತ್ತರದಿಂದ ಬಿದ್ದು ಭಾರಿ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸ್ ಸಿಬ್ಬಂದಿ, ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಅಧಿಕಾರಿಗಳು ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎನ್ನಲಾಗಿದೆ.
ಇದನ್ನೂ ಓದಿ: ಚೀನ “ಮಾಯಾ’ಲೋಕ; ಖಿನ್ ಗಾಂಗ್ ಪ್ರೇಮ ಪ್ರಕರಣವೂ, ವಿದೇಶಾಂಗ ಇಲಾಖೆಯೂ…