ನವದೆಹಲಿ: ಸೋಮವಾರ ಸಂಜೆ 6 ರಿಂದ ರಾತ್ರಿ 8 ರ ನಡುವೆ ದೆಹಲಿಯಲ್ಲಿ ಸುರಿದ ಮಳೆಯಿಂದಾಗಿ ದೆಹಲಿಗೆ ತೆರಳುತ್ತಿದ್ದ ಹದಿನಾರು ವಿಮಾನಗಳ ಮಾರ್ಗವನ್ನು ಬದಲಾಯಿಸಲಾಯಿತು ಎಂದು ವಿಮಾನಯಾನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಇಳಿಯಬೇಕಿದ್ದ 16 ವಿಮಾನಗಳ ಪೈಕಿ 10 ವಿಮಾನಗಳನ್ನು ಜೈಪುರಕ್ಕೆ, ಮೂರು ಲಕ್ನೋಗೆ, ಒಂದು ವಿಮಾನವನ್ನು ಅಹಮದಾಬಾದ್‌ಗೆ ಹಾಗೂ ಎರಡನ್ನು ಅಮೃತಸರಕ್ಕೆ ತಿರುಗಿಸಲಾಗಿದೆ ಎಂದು ಹೇಳಲಾಗಿದೆ.
ಇದರ ಜೊತೆಗೆ, ದೆಹಲಿ ವಿಮಾನ ನಿಲ್ದಾಣದಲ್ಲಿ ಕೆಟ್ಟ ಹವಾಮಾನ ಮತ್ತು ವಾಯು ಸಂಚಾರ ದಟ್ಟಣೆಯಿಂದಾಗಿ ಗುವಾಹಟಿಯಿಂದ ದೆಹಲಿಗೆ ಬಂದ ವಿಸ್ತಾರಾ ವಿಮಾನವನ್ನು ಜೈಪುರಕ್ಕೆ ತಿರುಗಿಸಲಾಗಿದೆ ಎಂದು ಏರ್‌ಲೈನ್‌ನ ಸಾಮಾಜಿಕ ಮಾಧ್ಯಮ ಮಾಹಿತಿ ಹಂಚಿಕೊಂಡಿದೆ.
ಸೋಮವಾರ ಸಂಜೆ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಲಘು ಮಳೆಯಾಗಿದ್ದು, ತಾಪಮಾನದ ಮಟ್ಟವು ಕೆಲವು ಡಿಗ್ರಿಗಳಷ್ಟು ಕಡಿಮೆಯಾಗಿದೆ. ಆದಾಗ್ಯೂ, ದೆಹಲಿಯ ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ಮಟ್ಟದಲ್ಲೇ ಉಳಿದಿದೆ. ಭಾರತೀಯ ಹವಾಮಾನ ಇಲಾಖೆ ಉತ್ತರ ಭಾರತದಲ್ಲಿ ತಾಪಮಾನದಲ್ಲಿ ಎರಡರಿಂದ ಮೂರು ಡಿಗ್ರಿಗಳಷ್ಟು ಇಳಿಕೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ, ಇದು ಮುಂದಿನ ದಿನಗಳಲ್ಲಿ ಚಳಿ ಹೆಚ್ಚಾಗುವ ಸಂಕೇತವಾಗಿದೆ ಎನ್ನಲಾಗಿದೆ.
ನವೆಂಬರ್ 28 ರಿಂದ ದೆಹಲಿ-ಎನ್‌ಸಿಆರ್, ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಮಂಜಿನ ವಾತಾವರಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: Mangaluru University ಕುಸಿತ ಕಂಡ ಮಂಗಳೂರು ವಿ.ವಿ. ಗ್ರೇಡ್ ಮೇಲೆತ್ತಲು ಸಿದ್ಧತೆ