ಚಿತ್ರದುರ್ಗ: ಶಾಶ್ವತ ಬರ ಹಾಗೂ ನೀರಿನ ಕೊರತೆ ಎದುರಿಸುತ್ತಿರುವ ರಾಜ್ಯದ 16 ಜಿಲ್ಲೆಗಳನ್ನು ಗುರುತಿಸಿರುವ ಕೇಂದ್ರ ಸರ್ಕಾರ, ಆ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಜಿಲ್ಲೆಗಳಲ್ಲಿ ಕೇಂದ್ರದ ಅನುದಾನದಲ್ಲಿ ಬರ ಪರಿಹಾರ ಕಾಮಗಾರಿಗಳು ಆರಂಭಗೊಂಡು ಅಭಿವೃದ್ಧಿ ಹೊಂದಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.
ಕೇಂದ್ರ ಸರ್ಕಾರ ಗುರುತಿಸಿರುವ ಶಾಶ್ವತ ಬರಪೀಡಿತ ಜಿಲ್ಲೆಗಳ ಪಟ್ಟಿಯಲ್ಲಿ ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ದಾವಣಗೆರೆ, ಗದಗ, ಕಲಬುರಗಿ, ಹಾಸನ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳು ಸ್ಥಾನ ಪಡೆದಿವೆ.
ಕ್ರಿಯಾ ಯೋಜನೆಗೆ ಸೂಚನೆ: ನಿರಂತರ ಬರ ಮತ್ತು ನೀರಿನ ಕೊರತೆ ಸಮಸ್ಯೆಯನ್ನು ಎದುರಿಸಲು ಈ ಜಿಲ್ಲೆಗಳ ಸಂಪೂರ್ಣ ಮಾಹಿತಿ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಬರಕ್ಕೆ ಪ್ರಮುಖ ಕಾರಣಗಳೇನು, ಬರದ ತೀವ್ರತೆ ಹೇಗಿದೆ, ಯಾವ ನಿರ್ದಿಷ್ಟ ಕಾರಣದಿಂದ ಬರ ಕಾಣಿಸಿಕೊಂಡಿದೆ, ಬರವನ್ನು ಶಾಶ್ವತವಾಗಿ ಹೋಗಲಾಡಿಸಲು ಯಾವ ರೀತಿಯ ಯೋಜನೆಗಳನ್ನು ಅನುಷ್ಠಾನ ಮಾಡಬೇಕು ಎನ್ನುವ ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಕ್ರಿಯಾ ಯೋಜನೆ ಸಿದ್ಧಪಡಿಸಿ ಡಿಸೆಂಬರ್ ಅಂತ್ಯದೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ 16 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ, ಕೃಷಿ, ತೋಟಗಾರಿಕೆ, ಪಶು, ಮೀನುಗಾರಿಕೆ, ಜಲಸಂಪನ್ಮೂಲ, ಸಣ್ಣ ನೀರಾವರಿ, ಕುಡಿಯುವ ನೀರು, ನರೇಗಾ ಇಲಾಖೆಗಳನ್ನೊಳಗೊಂಡ ಜಿಲ್ಲಾ ಮಟ್ಟದ ತಾಂತ್ರಿಕ ಮತ್ತು ಸಲಹಾ ಸಮಿತಿ ರಚನೆ ಮಾಡಬೇಕು. ಬರ ಹೋಗಲಾಡಿಸಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ರಾಜ್ಯ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಮತ್ತು ಸೇವೆಗಳ ಸರ್ಕಾರದ ಅಧಿಧೀನ ಕಾರ್ಯದರ್ಶಿಯವರು ಆದೇಶ ಹೊರಡಿಸಿದ್ದಾರೆ. 2000-2001 ಸಾಲಿನಿಂದ 2017-18ನೇ ಸಾಲಿನವರೆಗೆ ಬರದ ತೀವ್ರತೆ ಹೇಗಿತ್ತು, 2009-10 ರಿಂದ 2017-18ರವರೆಗೆ ಅಂತರ್ಜಲ ಮಟ್ಟ ವೃದ್ಧಿಗೆ ಕೈಗೊಂಡಿರುವ ಕ್ರಮಗಳೇನು, ಮುಂದಿನ 5 ವರ್ಷಗಳಲ್ಲಿ ನೀರಿನ ಉಳಿತಾಯಕ್ಕೆ ಯಾವ ಯೋಜನೆ ರೂಪಿಸಲಾಗಿದೆ, ಆಯಾ ಜಿಲ್ಲೆಗಳಲ್ಲಿ ಎಷ್ಟು ಹೆಕ್ಟೇರ್ ಪ್ರದೇಶದ ಭೂಮಿ ಬಳಕೆಯಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿ ಕಾರಿಗಳು ಒದಗಿಸಬೇಕಿದೆ.
ರಾಜ್ಯ ಸರ್ಕಾರದಿಂದ ಸಮಗ್ರ ಮಾಹಿತಿ ಸಲ್ಲಿಕೆಯಾದ ನಂತರ 16 ಬರಪೀಡಿತ ಜಿಲ್ಲೆಗಳ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ.
ಶಾಶ್ವತ ಬರಗಾಲಕ್ಕೆ ತುತ್ತಾಗುವ 16 ಜಿಲ್ಲೆಗಳ ಮಾಹಿತಿ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಬರ ಹೋಗಲಾಡಿಸಲು ಶಾಶ್ವತ ಯೋಜನೆ ರೂಪಿಸುವ ಸಾಧ್ಯತೆ ಇದೆ. ಈ ಬಗ್ಗೆ ಕೆಲಸ ಆರಂಭಿಸಲಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಕೇಂದ್ರ ಸರ್ಕಾರಕ್ಕೆ ಕ್ರಿಯಾ ಯೋಜನೆಗಳನ್ನೊಳಗೊಂಡ ವರದಿ ಸಲ್ಲಿಸಲಾಗುವುದು.
– ಎಂ.ಕೆ. ಶ್ರೀರಂಗಯ್ಯ, ಚಿತ್ರದುರ್ಗ ಜಿಲ್ಲಾಧಿಕಾರಿ
ನಿರ್ದಿಷ್ಟವಾಗಿ ಅನುದಾನ ನೀಡುವುದಾಗಿ ಸರ್ಕಾರ ಎಲ್ಲಿಯೂ ಹೇಳಿಲ್ಲ. ಸಮಗ್ರ ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಿಕೊಡುವಂತೆ ಸೂಚನೆ ನೀಡಿರುವುದರಿಂದ ಈಗಾಗಲೇ ಅನುಷ್ಠಾನದಲ್ಲಿರುವ ವಿವಿಧ ಯೋಜನೆಗಳು ಸೇರಿದಂತೆ ಅಂತರ್ಜಲ ವೃದ್ಧಿಯಂತಹ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಸಿಗಬಹುದು.
– ಲಕ್ಷ್ಮಣ್, ಜಂಟಿ ಕೃಷಿ ನಿರ್ದೇಶಕ, ಚಿತ್ರದುರ್ಗ
– ಹರಿಯಬ್ಬೆ ಹೆಂಜಾರಪ್ಪ