ಬೆಂಗಳೂರು: ಮೋಜಿನ ಜೀವನಕ್ಕಾಗಿ ಕಾರು ಮತ್ತು ಬೈಕ್‌ಗಳನ್ನು ಕಳವು ಮಾಡುತ್ತಿದ್ದ 60 ಮಂದಿ ಕಳ್ಳರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಸುಮಾರು 80 ಲಕ್ಷ ಮೌಲ್ಯದ 159 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇಂದ್ರ, ಉತ್ತರ, ಪಶ್ಚಿಮ ಹಾಗೂ ದಕ್ಷಿಣ ವಿಭಾಗಗಳಲ್ಲಿ ಬಂಧಿಸಲಾದ 60 ಆರೋಪಿಗಳಿಂದ 153 ದ್ವಿಚಕ್ರ, 5 ತ್ರಿಚಕ್ರ ಹಾಗೂ ನಾಲ್ಕು ಚಕ್ರದ ಒಂದು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಅಶೋಕ್‌ನಗರ, ಕಬ್ಬನ್‌ಪಾರ್ಕ್, ವಿಧಾನಸೌಧ, ವಿವೇಕನಗರ, ಹಲಸೂರು ಗೇಟ್ ವೈಯಾಲಿಕಾವಲ್, ಸದಾಶಿವನಗರ, ಮಲ್ಲೇಶ್ವರಂ, ರಾಜಾಜಿನಗರ, ಬನಶಂಕರಿ, ಸುಬ್ರಹ್ಮಣ್ಯನಗರ, ಬಸವನಗುಡಿ ಸೇರಿದಂತೆ ನಗರದ ವಿವಿಧ ವಲಯಗಳ ಠಾಣೆಗಳಲ್ಲಿ ದಾಖಲಾಗಿದ್ದ 46 ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದ್ದ ವಾಹನಗಳನ್ನು ಬುಧವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಮಾಲೀಕರಿಗೆ ಹಸ್ತಾಂತರಿಸಿದರು. ಜನರ ನಿರ್ಲಕ್ಷ್ಯವೇ ಕಳವಿಗೆ ಕಾರಣ: ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಕಾರು, ದ್ವಿಚಕ್ರ ವಾಹನ
ಪಾರ್ಕಿಂಗ್ ಮಾಡುವ ಸಾರ್ವಜನಿಕರು ಅದನ್ನು ಬೀಗ ಹಾಕಿ ಭದ್ರವಾಗಿ ನಿಲ್ಲಿಸದೆ ನಿರ್ಲಕ್ಷ್ಯತನ ತೋರುವುದು ಕೂಡಾ ವಾಹನಗಳ ಕಳವಿಗೆ ಪ್ರಮುಖ ಕಾರಣ. ಸಾಕಷ್ಟು ಬಾರಿ ಜನ ಬೈಕ್, ಕಾರಿನಲ್ಲೇ ಕೀಲಿ ಬಿಟ್ಟು ಹೋಗುತ್ತಾರೆ. ಕೆಲವೊಮ್ಮೆ ಹ್ಯಾಂಡಲ್ ಲಾಕ್ ಮಾಡುವುದಿಲ್ಲ. ಇದು ಕಳ್ಳರಿಗೆ ವಾಹನ ಕಳವು ಮಾಡಲು ಅವಕಾಶ ಕೊಟ್ಟಂತಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದರು. ಜತೆಗೆ ಸಾರ್ವಜನಿಕರು ವಾಹನದಲ್ಲೇ ಕೀ ಬಿಡಬಾರದು. ಜಿಪಿಎಸ್ ಟ್ರಾಕಿಂಗ್, ಅಲಾರ್ಮ್ ಸಿಸ್ಟಂ ಅಳವಡಿಸಿಕೊಳ್ಳಿ. ಕಾರುಗಳ ಕಿಟಕಿ ತೆರೆದ ಸ್ಥಿತಿಯಲ್ಲಿ ಬಿಡಬಾರದು. ಕಳವು ನಿರೋಧಕ ವ್ಯವಸ್ಥೆ ಅಳವಡಿಸಿಕೊಳ್ಳಿ. ಹಾಗೆಯೇ ಬೆಲೆ ಬಾಳುವ ವಸ್ತುಗಳನ್ನು ವಾಹನದಲ್ಲಿ ಇಡಬಾರದು ಎಂದು ಸಾರ್ವಜನಿಕರಿಗೆ ಆಯುಕ್ತರು ಸಲಹೆ ನೀಡದರು.