ನಾಗರಾಜ ಹರಪನಹಳ್ಳಿ
ಕಾರವಾರ: ಜಾತಿ ವ್ಯವಸ್ಥೆ ತೊಡೆದು ಹಾಕಲು ಹಾಗೂ ಅಂತರ್ಜಾತಿ ವಿವಾಹವೇ ಮದ್ದೆಂದು ತಿಳಿದಿರುವ ಸರ್ಕಾರ ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹಧನ ನೀಡುವ ಮೂಲಕ ಅಂತರ್ಜಾತಿ ವಿವಾಹಗಳನ್ನು ಕಾನೂನು ಬದ್ಧವಾಗಿಯೇ ಬೆಂಬಲಿಸುತ್ತ ಬಂದಿದೆ.
ಅಸ್ಪೃಶ್ಯತೆ ನಿವಾರಣೆಗೆ ಸಮಾಜ ಕಲ್ಯಾಣ ಇಲಾಖೆ ಶ್ರಮಿಸುತ್ತಲೇ ಬಂದಿದ್ದು, ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಅಂತರ್ಜಾತಿ ವಿವಾಹಿತರು 5 ಲಕ್ಷದವರೆಗೆ ಆದಾಯ ಹೊಂದಿದ್ದರೂ ಪ್ರೋತ್ಸಾಹಧನ ಪಡೆಯಲು ಅರ್ಹರು ಎಂದು ಕೆಲ ತಿದ್ದುಪಡಿಗಳನ್ನು ಮಾಡಲಾಯಿತು. ಮೊದಲ ಕಂತಾಗಿ 50 ಸಾವಿರ ನಗದು ನೀಡಿದರೆ, ಎರಡನೇ ಕಂತಿನ ಹಣವನ್ನು ಶಾಶ್ವತ ಠೇವಣಿಯಾಗಿ ಇಡುವ ಪದ್ಧತಿ ಈಗ ಅನುಷ್ಠಾನದಲ್ಲಿದೆ. ಅಲ್ಲದೇ ಮೂರನೇ ಕಂತನ್ನು ವಿವಾಹಿತರಿಗೆ ನೀಡುವ ಪದ್ಧತಿ ನಮ್ಮಲ್ಲಿದೆ. ಪರಿಶಿಷ್ಟ ಜಾತಿಯ ಹೆಣ್ಣು ಮಗಳು ಪರಿಶಿಷ್ಟ ವರ್ಗ ಅಥವಾ ಮೇಲ್ಜಾತಿಯಲ್ಲಿ ವಿವಾಹವಾದರೆ 3ಲಕ್ಷ ರೂ. ಪ್ರೋತ್ಸಾಹಧನ ಸೌಲಭ್ಯವಿದ್ದರೆ, ಪರಿಶಿಷ್ಟ ಜಾತಿಯ ಹುಡುಗ ಮೇಲ್ಜಾತಿಯ ಯುವತಿಯನ್ನು ಮದುವೆಯಾದರೆ 2.50 ಲಕ್ಷ ಪ್ರೋತ್ಸಾಹಧನವಿದೆ. ಅಲ್ಲದೇ ಅಂತರ್ಜಾತಿ ವಿವಾಹಗಳಿಗೂ ಆರ್ಥಿಕ ಪ್ರೋತ್ಸಾಹದ ಯೋಜನೆಗಳಿವೆ. ಆಯಾ ಸಮುದಾಯಗಳಲ್ಲಿ ಸರಳ- ಸಾಮೂಹಿಕ ವಿವಾಹವಾದರೆ 50 ಸಾವಿರವರೆಗೆ ಪ್ರೋತ್ಸಾಹಧನವಿದೆ.
ಅಂತರ್ ಧರ್ಮೀಯ ವಿವಾಹಗಳಿಗೆ ಸಹಾಯಧನವಿಲ್ಲ: ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ಇರುವ ಕಾರಣ ಅಂತರ್ಜಾತಿ ಮದುವೆಗಳಿಗೆ ಸರ್ಕಾರದ ಪ್ರೋತ್ಸಾಹಧನವಿದೆ. ಅದೇ ಒಂದು ಧರ್ಮದ ಯುವಕರು, ಜೈನ, ಸಿಖ್, ಇಸ್ಲಾಂ, ಕ್ರಿಶ್ಚಿಯನ್ ಧರ್ಮದ ಯುವತಿಯರನ್ನು ಅಥವಾ ಅನ್ಯ ಧರ್ಮದ ಯುವತಿಯರು ಹಿಂದೂ ಯುವಕರನ್ನು ಮದುವೆಯಾದರೆ ಸರ್ಕಾರದ ಪ್ರೋತ್ಸಾಹದಧನ ಸಿಗಲ್ಲ. ಕಾರಣ ಹಿಂದೂ ಧರ್ಮ ಹೊರತುಪಡಿಸಿ ಇತರೆ ಧರ್ಮಗಳಲ್ಲಿ ಅಸ್ಪೃಶ್ಯತೆ ಇಲ್ಲ ಎಂಬ ಕಾರಣವನ್ನು ಸರ್ಕಾರ ಮುಂದಿಟ್ಟುಕೊಂಡಿದೆ. ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಲು ಕಾರಣ ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಿ, ಮನುಷ್ಯರಲ್ಲಿ, ಯುವ ಜನಾಂಗದಲ್ಲಿ ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಿಸುವುದೇ ಆಗಿದೆ. ಅಲ್ಲದೆ ಸಮಾನತೆ ತರುವುದು ಸಹ ಅಂತರ್ ಜಾತಿ ವಿವಾಹಗಳಿಗೆ ಪ್ರೋತ್ಸಾಹದ ಪ್ರಮುಖ ಉದ್ದೇಶವಾಗಿದೆ. ಕಳೆದ ಸಾಲಿನಲ್ಲಿ ನಡೆದ ಇಂಟರ್‌ಕಾಸ್ಟ್ ಮ್ಯಾರೇಜಸ್: ಜಿಲ್ಲೆಯಲ್ಲಿ ಇಂಟರ್‌ಕಾಸ್ಟ್ ಮ್ಯಾರೇಜಸ್ ನಡೆಯುತ್ತಲೇ ಇವೆ.
2019-20ನೇ ಸಾಲಿನಲ್ಲಿ 68 ಯುವಕರು, ತಮ್ಮ ಜಾತಿ ಮೀರಿ ಮೇಲ್ಜಾತಿ ಅಥವಾ ಶೂದ್ರ ಸಮುದಾಯದ ಅಥವಾ ತಮ್ಮದೇ ಸಮುದಾಯದ ಇತರೆ ಪಂಗಡಗಳ ಯುವತಿಯರನ್ನು ಮದುವೆಯಾಗಿ ಆದರ್ಶ ಮೆರೆದಿದ್ದಾರೆ. ಪರಿಶಿಷ್ಟ ವರ್ಗದ ಯುವಕ, ಬ್ರಾಹ್ಮಣ, ದೈವಜ್ಞ ಬ್ರಾಹ್ಮಣ ಇಲ್ಲವೇ ನಾಯ್ಕ, ಮಡಿವಾಳ ಇಲ್ಲವೇ ಬೋವಿ, ವಾಲ್ಮೀಕಿ, ವಡ್ಡರ ಸಮುದಾಯದ ಯುವತಿಯನ್ನು ಮದುವೆಯಾದ ಉದಾಹರಣೆಗಳು ಇವೆ. ಇನ್ನು ಪರಿಶಿಷ್ಟ ಜಾತಿಯ ಯುವತಿಯರು ಮೇಲ್ಜಾತಿಯ ಯುವಕರನ್ನು, ಶೂದ್ರ ಸಮುದಾಯದಲ್ಲಿ ಇಲ್ಲದೇ ಪರಿಶಿಷ್ಟ ಪಂಗಡದಲ್ಲಿ ವಿವಾಹವಾದ ಘಟನೆಗಳಿವೆ. ಮೇಲ್ಜಾತಿಯ ಯುವತಿಯರು ದಲಿತ ಸಮುದಾಯದ ಯುವಕರನ್ನು ವರಿಸಿದ ಉದಾಹರಣೆಗಳು ಇವೆ. ಒಂದು ರೀತಿಯ ಸಣ್ಣ ಪ್ರಮಾಣದ ಚಲನೆ ಜಿಲ್ಲೆಯಲ್ಲಿ ಕಂಡು ಬಂದಿದೆ. 2019-20ನೇ ಸಾಲಿನಲ್ಲಿ 89 ಯುವತಿಯರು ಅಂತರ್ಜಾತಿ ವಿವಾಹವಾಗಿದ್ದಾರೆ. ಒಟ್ಟು 157 ಕುಟುಂಬಗಳು ಅಂತರ್ಜಾತಿ ವಿವಾಹವಾಗಿದ್ದು, ಅವರಿಗೆ 2.60 ಕೋಟಿ ರೂ. ಪ್ರೋತ್ಸಾಹಧನ ಬಿಡುಗಡೆಯಾಗಿದೆ.
2020-21ರಲ್ಲಿ 22 ಜೋಡಿಗಳ ಅಂತರ್ಜಾತಿ ವಿವಾಹ: ಉತ್ತರ ಕನ್ನಡ ಜಿಲ್ಲೆಯಲ್ಲಿ 2020-21ರಲ್ಲಿ 22 ಜೋಡಿಗಳು ಅಂತರ್ಜಾತಿ ವಿವಾಹವಾಗಿವೆ. 11 ಯುವಕರು ಜಾತಿ ಬಂಧನ ಮುರಿದು ಅಂತರ್ಜಾತಿ ಯುವತಿಯರ ಕೈ ಹಿಡಿದಿದ್ದಾರೆ. ಹಾಗೆ 11 ಯುವತಿಯರು ಸಹ ತಮ್ಮ ಜಾತಿ ಚೌಕಟ್ಟು ಮುರಿದು ಅನ್ಯ ಜಾತಿಯ ಯುವಕರನ್ನು ಮದುವೆಯಾಗಿ ಮನುಷ್ಯರು ಒಂದೇ ಎಂಬ ಸಂದೇಶ ಸಾರಿದ್ದಾರೆ. ಅಲ್ಲದೆ ಅಂತರ್ಜಾತಿ ವಿವಾಹ ಆಗಿದ್ದ 49ಜನ ಸಮಾಜ ಕಲ್ಯಾಣ ಇಲಾಖೆಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಜೋಡಿಗಳ ದಾಖಲೆ, ಸ್ಥಳ ಪರಿಶೀಲನೆ ನಡೆದಿದೆ. ಪ್ರಸಕ್ತ ಸಾಲಿನಲ್ಲಿ 22 ಅಂತರ್ಜಾತಿ ವಿವಾಹಿತರಿಗೆ 57 ಲಕ್ಷ ರೂ. ಪ್ರೊತ್ಸಾಹಧನ ತಲುಪಿದ್ದು, ಉಳಿದ ಪ್ರೊತ್ಸಾಹಧನ ಇನ್ನಾರು ತಿಂಗಳಲ್ಲಿ ತಲುಪಲಿದೆ. ಶಿರಸಿ-ಮುಂಡಗೊಡಲ್ಲಿ ಹೆಚ್ಚು: ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಅಂತರ್ಜಾತಿ ವಿವಾಹಗಳು ಹೆಚ್ಚು ನಡೆದಿವೆ ಎಂದು ದಾಖಲೆಗಳು ಹೇಳುತ್ತಿವೆ. 2019-20ನೇ ಸಾಲಿನಲ್ಲಿ ಮುಂಡಗೋಡ ತಾಲೂಕಿನಲ್ಲಿನ 30 ಜೋಡಿ ಅಂತರ್ಜಾತಿ ವಿವಾಹವಾಗಿದ್ದಾರೆ.
ಶಿರಸಿ ತಾಲೂಕಿನಲ್ಲಿ 25 ಮದುವೆಗಳು ಆಗಿವೆ. ಅಂಕೋಲಾ, ಹಳಿಯಾಳದಲ್ಲಿ ತಲಾ 15, ಹೊನ್ನಾವರದಲ್ಲಿ 23, ಭಟ್ಕಳದಲ್ಲಿ 11, ಕುಮಟಾ, ಸಿದ್ದಾಪುರ, ಕಾರವಾರದಲ್ಲಿ ತಲಾ 9, ಯಲ್ಲಾಪುರದಲ್ಲಿ 10 ಜೊಡಿ ಅಂತರ್ಜಾತಿ ವಿವಾಹವಾಗಿ ಅಂಬೇಡ್ಕರ್ ಹಾದಿಯಲ್ಲಿ ನಡೆದಿದ್ದಾರೆ. ಜೊಯಿಡಾದಲ್ಲಿ 1 ಜೋಡಿ ಮಾತ್ರ ಅಂತರ್ಜಾತಿ ವಿವಾಹದ ಬೆಳಕು ಕಂಡಿದೆ.