Advertisement

156 ವರ್ಷದ ಕಟ್ಟಡ ನೆಲಸಮ ಪ್ರಕರಣ: ವರದಿ ನೀಡುವಂತೆ ಡಿಸಿ ಸೂಚನೆ

12:17 AM Dec 15, 2021 | Team Udayavani |

ಪುತ್ತೂರು: ಡಾ| ಕೆ. ಶಿವರಾಮ ಕಾರಂತರು ನಾಟ್ಯ ತರಬೇತಿ ನೀಡುತ್ತಿದ್ದ 156 ವರ್ಷ ಹಳೆಯ ಕಟ್ಟಡವನ್ನು ರಾತೋರಾತ್ರಿ ನೆಲಸಮ ಮಾಡಿರುವ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸಲು ದ.ಕ. ಜಿಲ್ಲಾಧಿಕಾರಿ ಅವರು ಡಿಡಿಪಿಐ ಹಾಗೂ ಜಿ.ಪಂ. ಸಿಇಒಗೆ ಸೂಚನೆ ನೀಡಿದ್ದಾರೆ.

Advertisement

ಪುತ್ತೂರಿನ ಹೃದಯ ಭಾಗದ ನೆಲ್ಲಿಕಟ್ಟೆಯಲ್ಲಿರುವ ಸರಕಾರಿ ಶಾಲೆಯ ಪ್ರಾಚೀನ ಕಟ್ಟಡ ಇದಾಗಿದ್ದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ| ಕೆ. ಶಿವರಾಮ ಕಾರಂತರು 83 ವರ್ಷಗಳ ಹಿಂದೆ ಅಲ್ಲಿ ನಾಟ್ಯ ನಿರ್ದೇಶನ ಮಾಡುತ್ತಿದ್ದರು. ಕಟ್ಟಡ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಎಸ್‌ಡಿಎಂಸಿ ನಿರ್ಣಯ ಕೈಗೊಂಡು ಡಿ. 11ರಂದು ಜೆಸಿಬಿ ಬಳಸಿ ನೆಲಸಮ ಮಾಡಲಾಗಿತ್ತು. ಇದು ಕಾರಂತರ ಅಭಿಮಾನಿಗಳ ಸಹಿತ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.

ಬಿಇಒ ನೋಟಿಸ್‌
ಜಿಲ್ಲಾಧಿಕಾರಿ ಸೂಚನೆಯಂತೆ ಡಿಡಿಪಿಐ ಅವರು ಘಟನೆಯ ಬಗ್ಗೆ ವರದಿ ನೀಡುವಂತೆ ಬಿಇಒಗೆ ಸೂಚಿಸಿದ್ದಾರೆ. ಬಿಇಒ ಲೋಕೇಶ್‌ ಎಸ್‌ಡಿಎಂಸಿ ಹಾಗೂ ಮುಖ್ಯ ಗುರುಗಳಿಗೆ ನೋಟಿಸ್‌ ನೀಡಿ ತೆರವಿಗೆ ಕಾರಣದ ಬಗ್ಗೆ ವರದಿ ನೀಡುವಂತೆ ನಿರ್ದೇಶಿಸಿದ್ದಾರೆ.

ಎಸ್‌ಡಿಎಂಸಿಗೆ ಅಧಿಕಾರ ಇಲ್ಲ
ಪಾರಂಪರಿಕ ಶಾಲಾ ಕಟ್ಟಡದ ದುರಸ್ತಿ, ನಿರ್ವಹಣೆ, ಸಂರಕ್ಷಣೆ, ಸುರಕ್ಷೆ ಬಗ್ಗೆ ಡಿಡಿಪಿಐಗೆ ಶಾಲಾ ಎಸ್‌ಡಿಎಂಸಿಯು ಬಿಇಒ ಮೂಲಕ ಮಾಹಿತಿ ನೀಡಬೇಕು. ಅವರು ತಾಂತ್ರಿಕ ಪರಿಣಿತರನ್ನು ಕಳುಹಿಸಿ ವರದಿ ಪಡೆದುಕೊಂಡು ಅಗತ್ಯ ಕಾಮಗಾರಿಗಾಗಿ ರಾಜ್ಯ ವಿದ್ಯಾಂಗ ನಿರ್ದೇಶಕರಿಗೆ ಮನವರಿಕೆ ಮಾಡಬೇಕು. ಕಟ್ಟಡ ಅಪಾಯದಲ್ಲಿದೆ ಎಂದು ಏಕಾಏಕಿ ನೆಲಸಮ ಮಾಡುವ ಅಧಿಕಾರ ಶಾಲಾ ಎಸ್‌ಡಿಎಂಸಿಗೆ ಇಲ್ಲ. ಆದ್ದರಿಂದ ಪುರಾತನ ಕಟ್ಟಡ ನೆಲಸಮ ಕಾನೂನು ಬಾಹಿರ ಎನ್ನುವುದು ಅನೇಕರ ವಾದ.

ಇದನ್ನೂ ಓದಿ:ರಾಷ್ಟ್ರಪತಿ ರಾಮನಾಥ ಕೋವಿಂದ್‌ 3 ದಿನಗಳ ಕಾಲ ಬಾಂಗ್ಲಾ ಪ್ರವಾಸ

Advertisement

ಕಟ್ಟಡ ನೆಲಸಮ ವಿಚಾರ ಗಮನಕ್ಕೆ ಬಂದಿದೆ. ಪಾರಂಪರಿಕ ಕಟ್ಟಡವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವ ಬದಲು ಯಾಕೆ ನೆಲಸಮ ಮಾಡಲಾಗಿದೆ ಎನ್ನುವ ಬಗ್ಗೆ ವರದಿ ಪಡೆದುಕೊಂಡು ಕ್ರಮದ ಕುರಿತು ನಿರ್ಧರಿಸಲಾಗುವುದು.
– ಡಾ| ಕೆ.ವಿ. ರಾಜೇಂದ್ರ,
ದ.ಕ. ಜಿಲ್ಲಾಧಿಕಾರಿ

ಕೆಡಹುವ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಚೇರಿಗಳು ಅಲ್ಲೇ ಇದ್ದರೂ ಅವರಿಗೂ ಮಾಹಿತಿ ಇಲ್ಲ. ಈ ಕಟ್ಟಡ ಸರಕಾರದ ಆಸ್ತಿ ಆಗಿತ್ತು. ನಿಯಮ ಉಲ್ಲಂಘನೆ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶ ಇದೆ.
– ಡಾ| ಯತೀಶ್‌ ಉಳ್ಳಾಲ್‌,
ಸಹಾಯಕ ಆಯುಕ್ತ, ಪುತ್ತೂರು ಉಪವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next