Advertisement

ಮೂರುವರೆ ಗಂಟೆಯಲ್ಲಿ 15507 ಅಸುರಕ್ಷಿ  ಹೆಲ್ಮೆಟ್‌ ವಶ

01:17 PM Jan 03, 2018 | Team Udayavani |

ಮೈಸೂರು: ಹಿಂಬದಿ ಸವಾರರಿಗೂ ಹೆಲ್ಮೆಟ್‌ ಕಡ್ಡಾಯ ಮಾತ್ರವಲ್ಲದೆ, ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್‌ಗಳನ್ನೇ ಬಳಸಬೇಕು ಎಂದು ತಿಂಗಳುಗಳ ಹಿಂದೆಯೇ ಪೊಲೀಸರು ತಿಳಿಸಿದ್ದರೂ ರಸ್ತೆ ಬದಿಗಳಲ್ಲಿ ಸಿಗುವ ಕಡಿಮೆ ಬೆಲೆಯ ಅರ್ಧ ಹೆಲ್ಮೆಟ್‌ಗಳನ್ನು ಹಾಕಿಕೊಂಡು ತಿರುಗುತ್ತಿದ್ದ ಸವಾರರಿಗೆ ಮಂಗಳವಾರ ಪೊಲೀಸರು ಬಿಸಿ ಮುಟ್ಟಿಸಿದರು. 

Advertisement

ಅತಿ ಕಡಿಮೆ ಅವಧಿಯಲ್ಲಿ ಅಂದರೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರ ಒಳಗೆ ಬರೋಬ್ಬರಿ 15501 ಹೆಲ್ಮೆಟ್‌ಗಳನ್ನು ಪೋಲಿಸರು ವಶಕ್ಕೆ ಪಡೆದರು. ದಿನಗಳ ಕಾಲ ಹೆಲ್ಮೆಟ್‌ ಧರಿಸದೆ ವಾಹನ ಸವಾರಿ ಮಾಡುವವರನ್ನು ಹಿಡಿದು ದಂಡಕಟ್ಟಿಸಿಕೊಂಡು ಕಳುಹಿಸುತ್ತಿದ್ದ ಪೊಲೀಸರು, ಮಂಗಳವಾರ ಹೆಲ್ಮೆಟ್‌ ಧರಿಸಿ ವಾಹನ ಚಾಲನೆ ಮಾಡುತ್ತಿದ್ದವರನ್ನು ತಪಾಸಣೆ ನಡೆಸಿ, ಐಎಸ್‌ಐ ಮುದ್ರೆ ಇಲ್ಲದ ಸಾವಿರಾರು ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದು, ಪೊಲೀಸ್‌ ಠಾಣೆಗಳಿಗೆ ಕೊಂಡೊಯ್ದರು.

ಆಷರೇಷನ್‌ ಸೇಪ್‌ ರೈಡ್‌: ಬೆಳಗ್ಗಿನಿಂದಲೇ ಬೀದಿಗಿಳಿದ ಪೊಲೀಸರು, ಆಷರೇಷನ್‌ ಸೇಪ್‌ ರೈಡ್‌ ಹೆಸರಿನಲ್ಲಿ ಐಎಸ್‌ಐ ಮುದ್ರೆ ಇರದ ಅರ್ಧ ಹೆಲ್ಮೆಟ್‌ ಧರಿಸುವವರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಯ ಮೊದಲ ದಿನವೇ ರಾಶಿ ರಾಶಿ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದ ಪೊಲೀಸರು, ಐಎಸ್‌ಐ ಮುದ್ರೆ ಇರದ ಹೆಲ್ಮೆಟ್‌ಗಳು, ಅರ್ಧ ಹೆಲ್ಮೆಟ್‌ಗಳು ಸುರಕ್ಷಿತವಲ್ಲ.

ಹೀಗಾಗಿ ಕಡ್ಡಾಯವಾಗಿ ಐಎಸ್‌ಐ ಮುದ್ರೆ ಹೊಂದಿರುವ ಸದೃಢ ಹೆಲ್ಮೆಟ್‌ ಧರಿಸುವಂತೆ ಬುದ್ಧಿ ಹೇಳಿ, ಯಾವುದೇ ದಂಡ ವಿಧಿಸದೆ, ಕೇಸ್‌ ದಾಖಲಿಸದೆ ಕಳುಹಿಸಿದರು. ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಐಎಸ್‌ಐ ಮುದ್ರೆ ಹೊಂದಿರದ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದ ಪೊಲೀಸರು, ಬೈಕ್‌ನ ನೋಂದಣಿ ಸಂಖ್ಯೆ, ವಾಹನ ಚಾಲಕರ ಮೊಬೈಲ್‌ ಸಂಖ್ಯೆಯನ್ನು ದಾಖಲಿಸಿಕೊಂಡರು.

ಹೆಲ್ಮೆಟ್‌ ಖರೀದಿ ಜೋರು: ಐಎಸ್‌ಐ ಮಾರ್ಕ್‌ ಇಲ್ಲದ ಅರ್ಧ ಹೆಲ್ಮೆಟ್‌ಗಳನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಂತೆ, ಐಎಸ್‌ಐ ಮಾರ್ಕ್‌ ಹೆಲ್ಮೆಟ್‌ಗಳನ್ನು ಖರೀದಿಸಲು ಬೈಕ್‌ ಸವಾರರು ಅಟೋಮೊಬೈಲ್‌ ಅಂಗಡಿಗಳತ್ತ ಮುಖ ಮಾಡಿದರು. ಹೀಗಾಗಿ ನಗರದ ಚಾಮರಾಜ ಜೋಡಿರಸ್ತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿರುವ ಹೆಲ್ಮೆಟ್‌ ಮಾರಾಟ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಜೋರಾಗಿತ್ತು.

Advertisement

ನೂರಾರು ಬೈಕ್‌ ಸವಾರರು ಹೊಸ ಹೆಲ್ಮೆಟ್‌ ಖರೀದಿಗಾಗಿ ಏಕಾಏಕಿ ಅಂಗಡಿಗಳಿಗೆ ಆಗಮಿಸಿದ್ದರಿಂದ ಸಾಮಾನ್ಯ ದಿನಗಳಿಗೆ ಹೋಲಿಸಿದರೆ, ಹೆಲ್ಮೆಟ್‌ ಖರೀದಿದಾರರ ಸಂಖ್ಯೆ ಶೇ.50 ಹೆಚ್ಚಾಗಿದ್ದು, ಅನೇಕರು ಪುಲ್‌ಪೇಸ್‌ ಹೆಲ್ಮೆಟ್‌ಗಳನ್ನೇ ಖರೀದಿಸಿದರು.

ಹೆಲ್ಮೆಟ್‌ ವಾಪಸ್‌ ಕೊಡ್ತಿವಿ: ಪೋಲಿಸ್‌ ಇಲಾಖೆ ಅಪರೇಷನ್‌ ಸೇಪ್‌ ರೈಡ್‌ ಹೆಸರಿನಲ್ಲಿ ನಡೆಸುತ್ತಿರುವ ಅಚ್ಚರಿ ಕಾರ್ಯಾಚರಣೆ ಮೂಲಕ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಕಳೆದ ಸಾಲಿನಲ್ಲಿ ನಡೆದ ರಸ್ತೆ ಅಪಘಾತದಿಂದ ಬೈಕ್‌ ಸವಾರರು ಹಾಗೂ ಹಿಂಬದಿ ಸವಾರರ ತಲೆಗೆ ಹೆಚ್ಚಾಗಿ ಗಾಯಗಳಾಗಿದೆ. ಹೆಲ್ಮೆಟ್‌ ಧರಿಸದಿರುವುದು ಹಾಗೂ ಐಎಸ್‌ಐ ಮಾರ್ಕ್‌ ಇಲ್ಲದ ಅರ್ಧದ ಹೆಲ್ಮೆಟ್‌ ಧರಿಸಿದ್ದೇ ಇದಕ್ಕೆ ಕಾರಣವಾಗಿದೆ.

ಕಾರ್ಯಾಚರಣೆ ಸಂದರ್ಭದಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಹೆಲ್ಮೆಟ್‌ಗಳನ್ನು ಮೂರು ದಿನಗಳಲ್ಲಿ ಐಎಸ್‌ಐ ಮಾರ್ಕ್‌ ಇರುವ ಹೆಲ್ಮೆಟ್‌ ತೋರಿಸಿದರೆ, ಸಂಬಂಧಪಟ್ಟವರಿಗೆ ಹಿಂತಿರುಗಿಸುತ್ತೇವೆ. ಒಂದೊಮ್ಮೆ ಮೂರು ದಿನದೊಳಗೆ ಐಎಸ್‌ಐ ಹೆಲ್ಮೆಟ್‌ ಖರೀದಿಸಿ, ವಶಕ್ಕೆ ಪಡೆದಿರುವ ಹೆಲ್ಮೆಟ್‌ಗಳನ್ನು ಹಿಂಪಡೆಯದಿದ್ದರೆ ಅವುಗಳನ್ನು ನಾಶ ಪಡೆಸಲಾಗುವುದು.

ಅಲ್ಲದೆ ಬುಧವಾರದಿಂದ ಹೆಲ್ಮೆಟ್‌ ಧರಿಸದವರ ವಿರುದ್ಧ ಎಂದಿನಂತೆ ಕಾರ್ಯಾಚರಣೆ ನಡೆಸಿ, ದಂಡ ವಿಧಿಸಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಡಾ. ಸುಬ್ರಹ್ಮಣ್ಯೇಶ್ವರ ರಾವ್‌ ತಿಳಿಸಿದರು.

ಬೈಕ್‌ ಸವಾರಿ ಮಾಡುವ ಹಿಂಬದಿ ಸವಾರಿಗೂ ಈಗಾಗಲೇ ಹೆಲ್ಮೆಟ್‌ ಕಡ್ಡಾಯ ಮಾಡಲಾಗಿದೆ. ಇದೀಗ ಐಎಸ್‌ಐ ಮಾರ್ಕ್‌ ಇರುವ ಹೆಲ್ಮೆಟ್‌ ಕಡ್ಡಾಯ ಮಾಡಲಾಗಿದ್ದು, ಇದೇ ಅವಕಾಶ ಬಳಸಿಕೊಂಡು ಹೆಲ್ಮೆಟ್‌ ಅಂಗಡಿ ಮಾಲೀಕರು ಹೆಲ್ಮೆಟ್‌ಗಳ ಬೆಲೆಯನ್ನು 50-200 ರೂ.ವರೆಗೂ ಹೆಚ್ಚು ಮಾಡುತ್ತಾರೆ.
-ಆರ್‌.ಚಂದ್ರಶೇಖರ್‌, ಔಷಧ ಕಂಪನಿ ಉದ್ಯೋಗಿ.

ಅರ್ಧ ಹೆಲ್ಮೆಟ್‌ಗಳನ್ನು ಧರಿಸುವ ಬಗ್ಗೆ ಜಾಗೃತಿ ಮೂಡಿಸುವ ಪೊಲೀಸರ ನಿರ್ಧಾರ ಸ್ವಾಗತಾರ್ಹ. ಆದರೆ, ಐಎಸ್‌ಐ ಮಾರ್ಕ್‌ ಇಲ್ಲದಿರುವ ಕಾರಣಕ್ಕೆ ಹೆಲ್ಮೆಟ್‌ಗಳನ್ನು ವಶಪಡಿಸಿಕೊಳ್ಳುವುದು ಸರಿಯಲ್ಲ. ಏಕೆಂದರೆ ಈ ಹೆಲ್ಮೆಟ್‌ಗಳನ್ನು ಹಣ ಕೊಟ್ಟು ಖರೀದಿಸಿರುವುದರಿಂದ ಅದನ್ನು ನಮಗೆ ನೀಡಿದರೆ, ಅರ್ಧ ಹೆಲ್ಮೆಟ್‌ಗಳನ್ನು ಮಕ್ಕಳಿಗೆ ಆಟವಾಡಲು ಅಥವಾ ಕಟ್ಟಡ ನಿರ್ಮಾಣ ಕೆಲಸ ಮಾಡುವ ಕಾರ್ಮಿಕರಿಗೆ ದಾನ ಮಾಡುತ್ತೇನೆ.
-ಹರೀಶ್‌, ಖಾಸಗಿ ಸಂಸ್ಥೆ ನೌಕರ.

Advertisement

Udayavani is now on Telegram. Click here to join our channel and stay updated with the latest news.

Next