Advertisement

ಕೋವಿಡ್‌-19 ವಿರುದ್ಧದ ಹೋರಾಟಕ್ಕೆ 15,000 ರೋವರ್, ರೇಂಜರ್

10:35 PM May 03, 2020 | Sriram |

ಉಡುಪಿ: ಜಿಲ್ಲೆಯ ಸ್ಕೌಟ್ಸ್‌ ಹಾಗೂ ಗೈಡ್ಸ್‌ ವಿದ್ಯಾರ್ಥಿಗಳು ಆರೋಗ್ಯ ವಿಪತ್ತು ಕೋವಿಡ್‌-19 ವಿರುದ್ಧ ಸಮರ ಸಾರಿದ್ದು, ಸುಮಾರು ಒಂದು ಲಕ್ಷ ಮಾಸ್ಕ್ ತಯಾರಿಸಿ ಹಂಚುವ ಗುರಿಯನ್ನು ಹೊಂದಿದ್ದಾರೆ. ಇದರಲ್ಲಿ ಜಿಲ್ಲೆಯ 15,000 ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗಿಯಾಗಿದ್ದಾರೆ.

Advertisement

ಮಾಸ್ಕ್ ಬ್ಯಾಂಕ್‌ ವ್ಯವಸ್ಥೆ
ಕೇಂದ್ರ ಸರಕಾರ ಸ್ಕೌಟ್ಸ್‌ ಹಾಗೂ ಗೈಡ್ಸ್‌ ವಿದ್ಯಾರ್ಥಿಗಳ ಮೂಲಕ ರಾಜ್ಯದಲ್ಲಿ 25 ಲಕ್ಷ ಮಾಸ್ಕ್ ತಯಾರಿಸಿ ವಿತರಿಸುವ ಆದೇಶ ನೀಡಿದೆ. ಅದರ ಅನ್ವಯ ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ, ಕಾಪು, ಕಾರ್ಕಳ, ಬ್ರಹ್ಮಾವರ, ಸಂತೆಕಟ್ಟೆಯ ರೋವರ್ಸ್‌ ರೇಂಜರ್ಸ್‌ಗಳು ತಯಾರಿಸಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 25,000 ಸ್ಕೌಟ್ಸ್‌ ಹಾಗೂ ಗೈಡ್ಸ್‌ ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ 15,000 ವಿದ್ಯಾರ್ಥಿಗಳಿಂದ ಒಟ್ಟಾಗಿ ಮೇ 15ರೊಳಗಾಗಿ 1 ಲಕ್ಷ ಮಾಸ್ಕ್ ತಯಾರಿಸುವ ಯೋಜನೆ ಹಾಕಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಮಾಸ್ಕ್ ತಯಾರಿಸಿ ಲಾಕ್‌ಡೌನ್‌ ಮುಗಿದ ಬಳಿಕ ವಿತರಿಸುವ ಗುರಿಯನ್ನು ಹೊಂದಿದ್ದಾರೆ. ಕಳೆದ ಎರಡು ದಿನಗಳಲ್ಲಿ ವಿದ್ಯಾರ್ಥಿಗಳು 6,000 ಮಾಸ್ಕ್ ತಯಾರಿಸಿದ್ದಾರೆ.

15 ವಿವಿಧ ಟಾಸ್ಕ್
ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ರುವ ಮಕ್ಕಳು ಕ್ರಿಯಾಶೀಲರಾಗಲು ಮಾತ್ರವಲ್ಲದೇ ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಉದ್ದೇಶದಿಂದ ಸ್ಕೌಟ್ಸ್‌ ಹಾಗೂ ಗೈಡ್ಸ್‌ ಮಕ್ಕಳಿಗೆ ಸ್ವತ್ಛತೆ ಮತ್ತು ಕೈ ತೊಳೆಯುವ ವಿಧಾನಗಳು, ನೆರೆಹೊರೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುವುದು, ಪರಿಚಿತರಿಗೆ ದೂರವಾಣಿ ಕರೆ ಮಾಡಿ ಕೋವಿಡ್‌-19 ಹರಡುವುದನ್ನು ತಡೆಯುವ ಬಗ್ಗೆ ತಿಳಿಸುವುದು ಸೇರಿದಂತೆ ಒಟ್ಟು 15 ಟಾಸ್ಕ್ ಗಳನ್ನು ನೀಡಲಾಗಿದೆ.

ಐಜಿಒಟಿಯಲ್ಲಿ ಭಾಗಿ
ಕೇಂದ್ರ ಸರಕಾರ ಕೋವಿಡ್‌-19 ವಾರಿಯರ್ಸ್‌ಗಳಿಗಾಗಿ ಐಜಿಒಟಿ (Integrated government online Training) ಎಂಬ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ರೋವರ್ಸ್‌, ರೇಂಜರ್ಸ್‌ ಹಾಗೂ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಶಿಕ್ಷಕರು ಭಾಗವಹಿಸಿ, ವಿಶೇಷ ತರಬೇತಿ ಪಡೆದುಕೊಂಡಿದ್ದಾರೆ. ಜಿಲ್ಲಾಡಳಿತಕ್ಕೆ ಸಹಾಯ ಮಾಡಲು ಸಿದ್ಧರಿರುವ 80 ರೋವರ್ಸ್‌ ಹಾಗೂ ರೇಂಜರ್ಸ್‌ ಪಟ್ಟಿಯನ್ನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಅಗತ್ಯವಿದ್ದರೆ ಸೇವೆಗೆ ಕರೆಯುವುದಾಗಿ ಜಿಲ್ಲಾಡಳಿತ ತಿಳಿಸಿದೆ.

Advertisement

ಸ್ವಯಂಸೇವೆ
ಕೋವಿಡ್‌-19 ವಿರುದ್ಧ ಜಿಲ್ಲಾಡಳಿತ ಕೈಗೊಳ್ಳುವ ಕಾರ್ಯಗಳಲ್ಲಿ ಸ್ವಯಂಸೇವೆ ಸಲ್ಲಿಸಲು ಸಿದ್ಧರಿರುವ ರೋವರ್ಸ್‌ ರೇಂಜರ್ಸ್‌ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದು, ಜಿಲ್ಲೆಯಲ್ಲಿ ಅಗತ್ಯ ಬಿದ್ದಲ್ಲಿ ಸ್ವಯಂಸೇವಕರಾಗಲು ಕರೆ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
-ನಿತಿನ್‌ ಅಮೀನ್‌,
ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌
ಉಡುಪಿ ಜಿಲ್ಲಾ ಸಂಘಟಕ

Advertisement

Udayavani is now on Telegram. Click here to join our channel and stay updated with the latest news.

Next