Advertisement

ನಗರದಲ್ಲಿ ಸಂಚರಿಸಲಿವೆ 1500 ಬಾಡಿಗೆ ಬಸ್‌!

12:25 PM Sep 28, 2017 | |

ಬೆಂಗಳೂರು: ಬಿಎಂಟಿಸಿ ವ್ಯಾಪ್ತಿಯಲ್ಲಿ ಖಾಸಗಿ ಬಸ್‌ಗಳನ್ನು ಬಾಡಿಗೆ ಪಡೆಯಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, 1500 ಬಸ್‌ಗಳನ್ನು ಖಾಸಗಿಯವರಿಂದ ಬಾಡಿಗೆ ಪಡೆಯುವುದಾಗಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

Advertisement

ಬಿಎಂಟಿಸಿಗೆ 80.94 ಕೋಟಿ ರೂ. ವೆಚ್ಚದಲ್ಲಿ 1500 ಹೊಸ ಬಸ್‌ಗಳನ್ನು ಖರೀದಿಸಲು ಒಪ್ಪಿಗೆ ನೀಡಲಾಗಿದ್ದು, 77 ಕೋಟಿ ರೂ. ವೆಚ್ಚದಲ್ಲಿ ಖಾಸಗಿಯವರಿಂದ ಬಸ್‌ಗಳನ್ನು ಬಾಡಿಗೆ ಪಡೆದು ಸಾರಿಗೆ ಸೇವೆ ಕಲ್ಪಿಸಲು ನಿರ್ಧರಿಸಲಾಗಿದೆ. ಖಾಸಗಿ ಕಂಪನಿಗಳಿಗೆ ಏಳು ವರ್ಷಗಳವರೆಗೆ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಪ್ರತಿ ವರ್ಷ 77 ಕೋಟಿ ರೂ. ವೆಚ್ಚವಾಗಲಿದ್ದು, ಬಿಎಂಟಿಸಿ ಆಂತರಿಕ ಆದಾಯದ ಮೂಲದಿಂದ ವೆಚ್ಚ ಭರಿಸಬೇಕೆಂದು ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.

ಬೆಂಗಳೂರಿಗೆ ಬೈಸಿಕಲ್‌: ಬೆಂಗಳೂರಿನಲ್ಲಿ ಬೈಸಿಕಲ್‌ ಬಳಕೆಯನ್ನ ಪ್ರೋತ್ಸಾಹಿಸಲು 80.18 ಕೋಟಿ ರೂ. ವೆಚ್ಚದಲ್ಲಿ 6 ಸಾವಿರ ಬೈಸಿಕಲ್‌ ಖರೀದಿಸಿ, ಸಾರ್ವಜನಿಕರಿಗೆ ಬಾಡಿಗೆ ನೀಡಲು ನಿರ್ಧರಿಸಲಾಗಿದೆ. ಎಂ.ಜಿ.ರಸ್ತೆ, ವಿಧಾನಸೌಧ, ಎಚ್‌ಆರ್‌ಬಿಆರ್‌ ಲೇಔಟ್‌, ಎಬಿಆರ್‌ ಲೇಔಟ್‌, ಕೋರಮಂಗಲ ಪ್ರದೇಶಗಳಲ್ಲಿ ಬೈಸಿಕಲ್‌ ಬಾಡಿಗೆ ಕೇಂದ್ರಗಳನ್ನು ತೆರೆದು ಸಾರ್ವಜನಿಕರ ಬಳಕೆಗೆ ನೀಡಲಾಗುವುದು ಎಂದು ಹೇಳಿದರು.

ಬಡವರಿಗೆ ಒಂದು ಲಕ್ಷ ಮನೆ: ನಗರದಲ್ಲಿ ಬಡವರಿಗಾಗಿ ಒಂದು ಲಕ್ಷ ಬಹುಮಹಡಿ ಮನೆಗಳ ನಿರ್ಮಾಣ ಮಾಡಲು ಸಂಪುಟ ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಒತ್ತುವರಿ ತೆರವುಗೊಳಿಸಿರುವ 4 ಸಾವಿರ ಎಕರೆ ಜಮೀನಿನಲ್ಲಿ 468 ಎಕರೆ ಜಮೀನು ಗುರುತಿಸಲಾಗಿದ್ದು, ಕೆಎಚ್‌ಬಿ, ಸ್ಲಂ ಬೋರ್ಡ್‌ ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಯೊಜನೆ ಅನುಷ್ಠಾನಗೊಳಿಸಲು 6 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದ್ದು, 500 ಕೋಟಿ ರೂಪಾಯಿ ಹುಡ್ಕೊ ಸಾಲ, 1500 ಕೋಟಿ ರೂ. ಕೇಂದ್ರ ಸರ್ಕಾರ, ಫ‌ಲಾನುಭವಿಗಳಿಂದ ತಲಾ 1 ಲಕ್ಷ ರೂಪಾಯಿ ವಂತಿಕೆ ಪಡೆದು ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. 

Advertisement

ಬೆಂಗಳೂರಿನ ಸ್ಮಾರ್ಟ್‌ ಸಿಟಿ ಯೋಜನೆ ಜಾರಿಗೆ ಎಸ್‌ಪಿವಿ (ಸ್ಪೆಷಿಯಲ್‌ ಪರ್ಪಸ್‌ ವೆಹಿಕಲ್‌) ರಚನೆ ಮಾಡಲಾಗುವುದು. ಸ್ಮಾರ್ಟ್‌ ಸಿಟಿ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಲಾ 100 ಕೋಟಿ ರೂಪಾಯಿ ನೀಡುವುದರಿಂದ ಯೋಜನೆ ಅನುಷ್ಠಾನದ ಕುರಿತು ವಿಶೇಷ ಘಟಕದ ಮೂಲಕ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದರು.

ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ಐದನೇ ಹಂತದ ಯೋಜನೆಯ ವೆಚ್ಚವನ್ನು 5050 ರಿಂದ 5550 ರೂ.ಗೆ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ. ಯೋಜನೆ ಅನುಷ್ಠಾನಕ್ಕೆ ಜೈಕಾದಿಂದ 4461 ಕೋಟಿ ರೂ. ಜಲ ಮಂಡಳಿ 444 ಹಾಗೂ ರಾಜ್ಯ ಸರ್ಕಾರ 444 ಕೋಟಿ ರೂಪಾಯಿ ಹಣ ನೀಡಲು ನಿರ್ಧರಿಸಲಾಗಿದೆ ಎಂದು ಜಯಚಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next