ಕಲಘಟಗಿ: ತಾಲೂಕಿನಲ್ಲಿಯೇ ಅತೀ ಹಳೆಯದಾದ 150 ವರ್ಷಗಳ ಇತಿಹಾಸ ಹೊಂದಿರುವ ಗಳಗಿಹುಲಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಕೇಂದ್ರ ಶಾಲಾ ಕಟ್ಟಡದ ಗೋಡೆಗಳು ನಿರಂತರ ಮಳೆಯಿಂದಾಗಿ ಬೀಳುವ ಆತಂಕ ಕಾಡುತ್ತಿದೆ.
ಗ್ರಾಮದಲ್ಲಿ ಇಂದಿನ ಹಾಗೂ ಹಿಂದಿನ ಎರಡು ತಲೆಮಾರುಗಳಿಗೂ ವಿದ್ಯಾರ್ಜನೆಯನ್ನು ನೀಡಿದ ಖ್ಯಾತಿ ಈ ಶಾಲೆಗಿದೆ. ಗ್ರಾಮದಲ್ಲಿ ಕಲಿತ ಪ್ರತಿಯೊಬ್ಬರೂ 1869ರಲ್ಲಿ ಆರಂಭಗೊಂಡ ಈ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ. ಒಂದುವರೆ ಶತಮಾನದ ಇತಿಹಾಸ ಹೊಂದಿರುವ ಶಾಲೆಯ ಕಟ್ಟಡ ಬೀಳದಂತೆ ಉಳಿಸಿಕೊಳ್ಳಬೇಕಾಗಿರುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ.
ಧಾರಾಕಾರ ಮಳೆಯಿಂದಾಗಿ ಶಾಲೆಗಳಿಗೆಲ್ಲ ರಜೆ ಘೋಷಿಸಲಾಗಿತ್ತು. ಮಂಗಳವಾರದಿಂದ ಮತ್ತೆ ಶಾಲೆ ಆರಂಭಗೊಳ್ಳಲಿದೆ. ಶಾಲಾ ಆವರಣ ಸಂಪೂರ್ಣ ಜಲಾವೃತಗೊಂಡಿತ್ತು. ಕಟ್ಟಡದ ಮೇಲ್ಛಾವಣಿಯ ಹಂಚುಗಳು ಒಡೆದು ನೀರು ಸೋರಿರುವುದರಿಂದ ವರ್ಗದ ಕೋಣೆಗಳಲ್ಲೆಲ್ಲ ನೀರು ತುಂಬಿ ಹೋಗಿದೆ. ಗೋಡೆಗಳ ಮೇಲೆ ನೀರು ಸೋರಿರುವುದರಿಂದ ಗೋಡೆಗಳು ಬೀಳಬಹುದೆಂಬ ಭಯ ಆವರಿಸಿದೆ. ಶಾಲೆ ಆರಂಭಗೊಂಡ ಮೇಲೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಶಿಕ್ಷಣ, ಕಂದಾಯ ಹಾಗೂ ತಾಪಂ ಅಧಿಕಾರಿಗಳು ಕಟ್ಟಡದ ಪರಿಶೀಲನೆ ನಡೆಸುವ ಅಗತ್ಯತೆ ಇದೆ.