Advertisement

ಎನ್‌ಎಂಪಿಟಿಯಲ್ಲಿ  150ರಷ್ಟು ಮೀನುಗಾರಿಕಾ ಬೋಟು

10:33 AM Aug 18, 2018 | Team Udayavani |

ಮಹಾನಗರ: ಭಾರೀ ಗಾಳಿ- ಮಳೆಯಿಂದ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಹಳೆಬಂದರಿಗೆ ಆಗಮಿಸಲು ಸಾಧ್ಯವಾಗದ ಸುಮಾರು 150ರಷ್ಟು ಮೀನುಗಾರಿಕಾ ಬೋಟುಗಳು ಎನ್‌ಎಂಪಿಟಿ ಬಂದರಿನಲ್ಲಿ ಲಂಗರು ಹಾಕಿದ್ದು, ಶುಕ್ರವಾರವೂ ಹಳೆಬಂದರಿಗೆ ಬರಲು ಸಾಧ್ಯವಾಗಲಿಲ್ಲ.

Advertisement

ಎನ್‌ಎಂಪಿಟಿಯಲ್ಲಿ ನಿಂತಿರುವ ಬೋಟುಗಳಲ್ಲಿರುವ ಮೀನುಗಾರರಿಗೆ ನವಮಂಗಳೂರು ಬಂದರಿನ ಮೂಲಕ ಹೊರಭಾಗಕ್ಕೆ ಬರಲು ಅನುಮತಿ ಇಲ್ಲದ ಕಾರಣ ಮೀನುಗಾರರು ಬೋಟುನಲ್ಲಿಯೇ ಉಳಿದುಕೊಳ್ಳುವಂತಾಗಿದೆ. ಮೀನುಗಾರಿಕಾ ರಜೆ ಮುಗಿಸಿ ಆಗಸ್ಟ್‌ ಮೊದಲ ವಾರದಲ್ಲಿ ಸುಮಾರು 500ರಷ್ಟು ಬೋಟುಗಳು ಮೀನುಗಾರಿಕೆಗೆ ತೆರಳಿದ್ದವು. ಈ ಪೈಕಿ ಸುಮಾರು 350ರಷ್ಟು ಬೋಟುಗಳು ಈಗಾಗಲೇ ಹಳೆಬಂದರಿಗೆ ಆಗಮಿಸಿವೆ. ಉಳಿದ ಬೋಟುಗಳಿಗೆ ಸಮುದ್ರ ಪ್ರಕ್ಷುಬ್ಧಗೊಂಡು ಆತಂಕ ಎದುರಾಗಿದ್ದು, ಅಳಿವೆಬಾಗಿಲಿನಿಂದ ಹಳೆಬಂದರಿಗೆ ಆಗಮಿಸಲು ಸಾಧ್ಯವಾಗಿರಲಿಲ್ಲ.

ಅಳಿವೆಬಾಗಿಲಿನ ಮೂಲಕ ಹಳೆಬಂದರಿಗೆ ಆಗಮಿಸುವಲ್ಲಿ ಸಮು ದ್ರದ ಆಳ ಅತ್ಯಂತ ಕಡಿಮೆ ಇರುವುದರಿಂದ (ಸುಮಾರು 3 ಮೀಟರ್‌) ಬೋಟುಗಳ ಸಮತೋಲನ ತಪ್ಪುತ್ತವೆ. ಭಾರೀ ಗಾಳಿ- ಮಳೆಯಿಂದ ನೇತ್ರಾವತಿ- ಫಲ್ಗುಣಿ ನದಿ ನೀರು ಅಳಿವೆ ಬಾಗಿಲಿನ ಮೂಲಕ ಸಮುದ್ರ ಸೇರುವ ಭಾಗದಲ್ಲಿ ಅಲೆ ಜೋರಾಗಿದ್ದು, ಬೋಟುಗಳ ಪ್ರವೇಶಕ್ಕೆ ಅನುಕೂಲಕರವಾಗಿಲ್ಲ.

ಹಾಗಾಗಿ ಸಮುದ್ರ ಮಧ್ಯೆ ಆತಂಕಕ್ಕೆ ತುತ್ತಾದ ಮೀನುಗಾರಿಕಾ ದೋಣಿಗಳು ದಡಕ್ಕೆ ಬರಲು ಸಾಧ್ಯವಾಗದ ಕಾರಣ ರಕ್ಷಣೆ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆಯ ಮೂಲಕ ಎನ್‌ಎಂಪಿಟಿಗೆ ಮನವಿ ಸಲ್ಲಿಸಿ ಮೀನುಗಾರಿಕಾ ಬೋಟುಗಳ ನಿಲುಗಡೆಗೆ ಅವಕಾಶ ಕೇಳಲಾಯಿತು. ಇದರಂತೆ ಗುರುವಾರ ಬೋಟುಗಳು ಎನ್‌ಎಂಪಿಟಿಯಲ್ಲಿ (14 ಮೀಟರ್‌ ಆಳ) ಆಶ್ರಯ ಪಡೆದಿವೆ ಎಂದು ಇಲಾಖೆಯ ಉಪನಿರ್ದೇಶಕ ಮಹೇಶ್‌ ಕುಮಾರ್‌ ತಿಳಿಸಿದ್ದಾರೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆಯಿಂದ ಸೂಚನೆ ಬಂದಿರುವುದರಿಂದ ಯಾರೂ ಮೀನುಗಾರಿಕೆ ನಡೆಸುತ್ತಿಲ್ಲ. 

ಎನ್‌ಎಂಪಿಟಿಗೆ ಎಂಟ್ರಿ ಇಲ್ಲ !
ವಾಣಿಜ್ಯ ವಹಿವಾಟು ಹಾಗೂ ಭದ್ರತೆ ದೃಷ್ಟಿಯಿಂದ ಮೀನುಗಾರಿಕಾ ಬೋಟುಗಳಿಗೆ ಎನ್‌ ಎಂಪಿಟಿಗೆ ಪ್ರವೇಶ ನೀಡುತ್ತಿರಲಿಲ್ಲ. ಆದರೆ, ತುರ್ತು ಸಂದರ್ಭದಲ್ಲಿ ಮಾತ್ರ ಅನುಮತಿ ಮೇರೆಗೆ ಎನ್‌ಎಂಪಿಟಿ ಪ್ರವೇಶಕ್ಕೆ ಅವಕಾಶವಿದೆ. ಸುಮಾರು 20 ವರ್ಷಗಳಲ್ಲಿ ಬೆರಳೆಣಿಕೆ ಬೋಟುಗಳು ಮಾತ್ರ ಎನ್‌ಎಂಪಿಟಿಯಲ್ಲಿ ತುರ್ತು ಕಾಲದಲ್ಲಿ ಆಶ್ರಯ ಪಡೆದಿತ್ತು. ಆದರೆ ಬೃಹತ್‌ ಪ್ರಮಾಣದಲ್ಲಿ ಬೋಟುಗಳು ಎನ್‌ಎಂಪಿಟಿಗೆ ಬಂದಿರುವುದು ಇದೇ ಮೊದಲು. ಸಮುದ್ರ ಸಹಜಸ್ಥಿತಿಗೆ ಬಂದ ಅನಂತರ ಬೋಟುಗಳು ಮತ್ತೆ ಹಳೆಬಂದರಿಗೆ ಆಗಮಿಸುವ ನಿರೀಕ್ಷೆ ಇದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next