ಬೆಂಗಳೂರು: ರಾಜಧಾನಿಯ ವಾಣಿಜ್ಯ ಮಳಿಗೆಯೊಂದು ಗ್ರಾಹಕನಿಗೆ 16 ರೂ. ಬೆಲೆಯ ಕೈ ಚೀಲ ನೀಡಲು ನಿರಾಕರಿಸಲು ಹೋಗಿ ಬರೋಬ್ಬರಿ 15,000 ರೂ. ಪರಿಹಾರ ಪಾವತಿ ಮಾಡಿದ ಪ್ರಸಂಗ ನಡೆದಿದೆ.
ಗಾಂಧಿ ನಗರದ ವಾಣಿಜ್ಯ ಮಳಿಗೆಯೊಂದು ಉಚಿತವಾಗಿ ನೀಡಬೇಕಿದ್ದ ಕೈ ಚೀಲಕ್ಕೆ 16 ರೂ. ಶುಲ್ಕ ವಿಧಿಸಿರುವುದಕ್ಕೆ ಅಸಮಧಾನಗೊಂಡ ಗ್ರಾಹಕರೊಬ್ಬರು ವಾಣಿಜ್ಯ ಮಳಿಗೆಯಲ್ಲಿ ಗ್ರಾಹಕ ಸೇವೆಯಲ್ಲಿ ಕೊರತೆಯಾಗಿದೆ ಎಂದು ಬೆಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.
ದೂರುದಾರರ ಹಾಗೂ ಮಳಿಗೆದಾರರ ಪರವಾಗಿ ವಕೀಲರ ವಾದ ಪರಿಶೀಲನೆ ನಡೆಸಿದ ವ್ಯಾಜ್ಯಗಳ ಪರಿಹಾರ ಆಯೋಗವು ಯು/ಎಸ್.12 ಗ್ರಾಹಕರ ಕಾಯ್ದೆ ಅಡಿಯಲ್ಲಿ ಮಳಿಗೆಯು ದೂರುದಾರ ಕಾಂತರಾಜ್ ಅವರಿಗೆ ಕೈ ಚೀಲ ನೀಡಲು ವಿಧಿಸಿದ 16 ರೂ. ಶುಲ್ಕದ ಜತೆಗೆ ಪರಿಹಾರ ರೂಪದಲ್ಲಿ 5,000 ರೂ., ಗ್ರಾಹಕ ಸೇವೆಯಲ್ಲಿ ಕೊರತೆಗೆ ಸಂಬಂಧಿಸಿದಂತೆ 3,000 ರೂ., ದೂರುದಾರರಿಗೆ ನೋವು ಮತ್ತು ದಾವೆ ವೆಚ್ಚ 2,000 ರೂ., ಜತೆಗೆ ಗ್ರಾಹಕ ಕಾನೂನು ನೆರವಿಗೆ 5000 ರೂ. ಸೇರಿದಂತೆ ಒಟ್ಟು 15,016 ರೂ. ಮೊತ್ತವನ್ನು ಪಾವತಿಸುವಂತೆ ಆದೇಶಿಸಿದೆ.
ತೀರ್ಪು ನೀಡಿದ 45 ದಿನಗಳೊಳಗೆ ಪರಿಹಾರ ಮೊತ್ತ ಪಾವತಿಯಾಗದಿದ್ದಲ್ಲಿ ಮಳಿಗೆ ಅವರು ದೂರು ದಾಖಲಾದ ದಿನದಿಂದ ಪ್ರಾರಂಭಿಸಿ ಪರಿಹಾರ ವಿತರಿಸುವ ದಿನಕ್ಕೆ ಸರಿಯಾಗಿ ಒಟ್ಟು ಮೊತ್ತಕ್ಕೆ ಶೇ.6ರಷ್ಟು ಬಡ್ಡಿ ನೀಡಬೇಕಾಗುತ್ತದೆ ಎಂದು ತೀರ್ಪು ನೀಡಿದೆ. ದೂರುದಾರರ ಪರವಾಗಿ ವಕೀಲರಾದ ವಿ.ಶಿವಕುಮಾರ್ ವಾದ ಮಂಡಿಸಿದ್ದಾರೆ.
ಬೆಂಗಳೂರು ಗಾಂಧಿನಗರದ ನಿವಾಸಿ ಕಾಂತರಾಜ್ ವಿ. ಅವರು 2019ರ ಡಿಸೆಂಬರ್ 17ರಂದು ಗಾಂಧಿನಗರದ ವಾಣಿಜ್ಯ ಮಳಿಗೆಯೊಂದರಲ್ಲಿ ತನ್ನ ಕ್ರೆಡಿಟ್ ಕಾರ್ಡ್ ಬಳಸಿಕೊಂಡು 775 ರೂ. ಮೊತ್ತದ ದೀಪಂ ಎಣ್ಣೆ, ಪ್ಯಾರಗನ್ ಸ್ಯಾಂಡಲ್, ಇತರೆ ಸ್ಟೇಷನರಿ ವಸ್ತುಗಳನ್ನು ಖರೀದಿಸಿದ್ದರು. ಈ ವೇಳೆ ಕಾಂತರಾಜ್ ಉಚಿತವಾಗಿ ಕೈ ಚೀಲವನ್ನು ನೀಡುವಂತೆ ಮನವಿ ಮಾಡಿದ್ದರು. ಮಳಿಗೆಯವರು ಅದಕ್ಕೆ ನಿರಾಕರಿಸಿ, ಚೀಲಕ್ಕೆ 16 ರೂ. ಶುಲ್ಕ ವಿಧಿಸಿದ್ದಾರೆ. ಈ ಬಗ್ಗೆ 4ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ವಾಣಿಜ್ಯ ಮಳಿಗೆ ವಿರುದ್ಧ ಗ್ರಾಹಕ ಸೇವೆಯಲ್ಲಿ ವ್ಯತ್ಯಯ ದೂರು ದಾಖಲಿಸಲಾಗಿತ್ತು.
●ತೃಪ್ತಿ ಕುಮ್ರಗೋಡು