ಸಿನ್ಸಿನಾಟಿ/ಹೂಸ್ಟನ್: (ಅಮೆರಿಕ): ವಾರಾಂತ್ಯದ ಮೋಜಿಗಾಗಿ ನೈಟ್ ಕ್ಲಬ್ ಒಂದರಲ್ಲಿ ಕಿಕ್ಕಿರಿದು ನೆರೆದಿದ್ದ ಜನಜಂಗುಳಿ ಮೇಲೆ ಹಠಾತ್ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬ ಹತನಾಗಿ, ಕನಿಷ್ಠ 15 ಮಂದಿ ಗಾಯಗೊಂಡ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.
“”ಆದರೆ ಇದು ಉಗ್ರಗಾಮಿಗಳು ನಡೆಸಿದ ದಾಳಿ ಎಂದು ದೃಢಪಡಿಸುವ ಯಾವುದೇ ಸುಳಿವು ದೊರೆತಿಲ್ಲ ಮತ್ತು ದಾಳಿ ನಡೆಸಿದವರು ಯಾರೆಂದು ಕೂಡ ತಿಳಿದುಬಂದಿಲ್ಲ,” ಎಂದು ಸಹಾಯಕ ಪೊಲೀಸ್ ಮುಖ್ಯಸ್ಥ ಪೌಲ್ ನ್ಯೂಡಿಗೆಟ್ ಟ್ವೀಟ್ ಮಾಡಿದ್ದಾರೆ. “”ಕ್ಯಾಮ್ಯೋ ಕ್ಲಬ್ ಮೇಲೆ ಒಬ್ಬನೇ ವ್ಯಕ್ತಿ ದಾಳಿ ನಡೆಸಿರುವುದು ವರದಿಯಾಗಿದೆ. ಆದರೆ ದಾಳಿಯಲ್ಲಿ ಕನಿಷ್ಠ ಇಬ್ಬರು ದಾಳಿಕೋರರು ಶಾಮೀಲಾಗಿರುವ ಶಂಕೆಯಿದೆ,” ಎಂದು ನ್ಯೂಡಿಗೆಟ್ ಹೇಳಿದ್ದಾರೆ.
“”ಶನಿವಾರ ರಾತ್ರಿ ಕ್ಲಬ್‌ನಲ್ಲಿ ಬಹುತೇಕ ಯುವಕ, ಯುವತಿಯರೇ ಇದ್ದರು. ಈ ವೇಳೆ ನಡೆದ ದಾಳಿಗೆ ಸಂಬಂಧಿಸಿದಂತೆ ಹಲವು ಗೊಂದಲಗಳಿವೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆಯಲ್ಲಿ ಹತ್ಯೆಗೀಡಾದ ವ್ಯಕ್ತಿಯ ಗುರುತು ಪತ್ತೆ ಕಾರ್ಯ ಕೂಡ ಮುಂದುವರಿದಿದೆ. ಜನಜಂಗುಳಿ ಇದ್ದ ಕಾರಣ ಆರೋಪಿಗಳ ಪತ್ತೆಗೆ ತೊಡಕಾಗುತ್ತಿದೆ,” ಎಂದು ಕ್ಯಾ. ಕಿಮ್ ವಿಲಿಯಮಸ್Õ ಮಾಹಿತಿ ನೀಡಿದ್ದಾರೆ.49 ಮಂದಿಯನ್ನು ಬಲಿತೆಗೆದುಕೊಂಡಿದ್ದ ಹಾಗೂ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಭೀಕರ ಗುಂಡಿನ ದಾಳಿ ಎಂದೆನಿಸಿದ, ಫ್ಲೋರಿಡಾದ ಓರ್ಲಾಂಡೋದಲ್ಲಿನ ಸಲಿಂಗಿಗಳ ನೈಟ್ ಕ್ಲಬ್ ಮೇಲಿನ ದಾಳಿ ನಡೆದು ವರ್ಷ ಕಳೆಯುವ ಮುನ್ನವೇ ಮತ್ತೂಂದು ನೈಟ್ ಕ್ಲಬ್ ಮೇಲೆ ದಾಳಿ ನಡೆದಿದೆ.
ಹೀರೋಗೆ ಸನ್ಮಾನ: ಕಳೆದ ತಿಂಗಳು ಅಮೆರಿಕದ ಕನ್ಸಾಸ್‌ನಲ್ಲಿ ಮಾಜಿ ಸೈನಿಕನೊಬ್ಬನ ಗುಂಡಿಗೆ ಆಂಧ್ರಪ್ರದೇಶದ ಟೆಕಿ ಶ್ರೀನಿವಾಸ ಕುಚಿಭೋಟ್ಲ ಹತ್ಯೆಯಾದ ಸಂದರ್ಭದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಇಯಾನ್ ಗ್ರಿಲೊಟ್‌ಗೆ ಭಾರತೀಯ-ಅಮೆರಿಕನ್ ಸಮುದಾಯದ ಸದಸ್ಯರು 1 ಲಕ್ಷ ಡಾಲರ್ ಮೊತ್ತವನ್ನು ಚಂದಾ ಎತ್ತಿ ನೀಡಿದ್ದಾರೆ. ಅವರು ಹೆಚ್ಚಿನ ಗುಂಡು ಕುಚಿಭೋಟ್ಲಗೆ ತಗಲುವುದನ್ನು ತಡೆದಿದ್ದರು. ಜತೆಗೆ ಅವರನ್ನು “ಅಮೆರಿಕದ ನಿಜವಾದ ಹೀರೋ’ ಎಂದು ಹೊಗಳಿ ಸನ್ಮಾನಿಸಲಾಗಿದೆ. ಇಯಾನ್ ಕನ್ಸಾಸ್‌ನಲ್ಲಿ ಮನೆ ಕೊಳ್ಳಲು ನೆರವಾಗುವಂತೆ ಈ ದೇಣಿಗೆ ನೀಡಲಾಗಿದೆ.