ಕೊಳ್ಳೇಗಾಲ: ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯು ಹೊಸ ಹೊಸ ಬಸ್‌ಗಳನ್ನು ಬಿಡಲಾಗಿದೆ. ಚಾಮರಾಜನಗರ ವಿಭಾಗದ ಸಾರಿಗೆ ಸಂಸ್ಥೆ 15 ಕೋಟಿ ರೂ. ಲಾಭ ಗಳಿಸಿದೆ. ಅಪಘಾತದಲ್ಲಿ ನೊಂದವರಿಗೆ 4 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಚಾಮರಾಜನಗರ ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ರಸ್ತೆ ಸಾರಿಗೆ ಬಸ್ ಘಟಕದಲ್ಲಿ ರಸ್ತೆ ಸಾರಿಗೆ ಸಂಸ್ಥೆಯಿಂದ ಆಯೋಜಿಸಿದ್ದ ಬದುಕಿ- ಬದುಕಿಸಿ ರಸ್ತೆ ಸುರಕ್ಷತೆ ಜೀವದ ರಕ್ಷೆ ಎಂಬ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಾಲಕರು ನಿಷ್ಠೆ ಹಾಗೂ ಪ್ರಮಾಣಿಕತೆಯಿಂದ ಬಸ್ ಚಾಲನೆ ಮಾಡಿ, ಸಾರಿಗೆ ಸಂಸ್ಥೆಗೆ ಆದಾಯ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಕುಟುಂಬವನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಹೋಗಿ ಆರ್ಥಿಕವಾಗಿ ಸದೃಢಗಾಗಬೇಕು ಎಂದು ತಿಳಿಸಿದರು.
ವಾಹನ ಚಾಲನೆಯಲ್ಲಿ ಎಚ್ಚರವಿರಲಿ: ಸಾರಿಗೆ ಇಲಾಖೆಯ ಟಿ.ಎಂ.ಬಾಲಕೃಷ್ಣ ನೇತೃತ್ವದಲ್ಲಿ ಸಾರಿಗೆ ಇಲಾಖೆಯ ಕಲಾವಿದರಿಂದ ನಾಟಕ ಪ್ರದರ್ಶನ ನಡೆಯಿತು. ಡಿಪೋನಲ್ಲಿ ಬಸ್ ರಿಪೇರಿ ಮಾಡುವ ಸಮಯದಲ್ಲಿ ಗೊಂದಲ ಇಲ್ಲದೆ ನಿಶ್ಚಬ್ಧದಿಂದ ಕೆಲಸ ಮಾಡಬೇಕು. ಸಣ್ಣದೊಂದು ನೆಟ್ ಹಾಕದಿದ್ದರೂ ಬಸ್ ಅಪಘಾತವಾಗುತ್ತದೆ. ಬಸ್ ಚಾಲನೆ ಮಾಡುವಾಗ ಚಾಲಕರು ಮೊಬೈಲ್ ಬಳಕೆ ಮಾಡಿದರೆ ಅಪಘಾತವಾಗಿ ಸಾವುನೋವು ಉಂಟಾಗುತ್ತದೆ. ಮದ್ಯಸೇವನೆ ಮಾಡಿ ಚಾಲನೆ ಮಾಡಿದರೆ ಅಪಘಾತವು ಆಗುವ ಸಾಧ್ಯತೆ ಹೆಚ್ಚಿದೆ ಎಂಬ ಸೂಚನೆಗಳನ್ನು ಪ್ರದರ್ಶನ ಮಾಡಿದರು.
ಬಸ್‌ನಲ್ಲಿ ಪ್ರಯಾಣಿಸುವಾಗ ನಿರ್ವಾಹಕರ ಜೊತೆ ಸಣ್ಣಪುಟ್ಟ ವಿಷಯಗಳಿಗೆ ಜಗಳ ತೆಗೆದು ಬಸ್ ನಿಲ್ಲಿಸಿ, ಪೊಲೀಸ್ ಠಾಣೆಗೆ ಹೋಗುವುದು. ಪ್ರಯಾಣಿಕರು ಟಿಕೆಟ್ ಪಡೆಯದೆ ಪ್ರಯಾಣಿಸುವುದು. ಬಸ್‌ನಲ್ಲೇ ಪುಂಡರು ಹುಡುಗಿಯರನ್ನು ಚುಡಾಯಿಸುವುದು. ಬಸ್ ಚಾಲಕರು ವೇಗವಾಗಿ ಚಾಲನೆ ಮಾಡಿ ಅಪಘಾತವಾದಾಗ, ಪ್ರಯಾಣಿಕರು ಮೃತಪಟ್ಟ ಸನ್ನಿವೇಶ ಹಾಗೂ ಮೃತಪಟ್ಟ ಕುಟುಂಬದವರ ದುಃಖದ ಸನ್ನಿವೇಶಗಳನ್ನು ನಾಟಕದಲ್ಲಿ ಪ್ರದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ರವೀಂದ್ರ, ರಸ್ತೆ ಸಾರಿಗೆ ವಿಭಾಗೀಯ ಆಡಳಿತಾಧಿಕಾರಿ ವಸಂತ, ತಾಂತ್ರಿಕ ವಿಭಾಗದ ಸೂರ್ಯಕಾಂತ, ಸಂಚಾರ ಅಧಿಕಾರಿ ಪರಮೇಶ್, ಕಾರ್ಮಿಕ ವಿಭಾಗದ ಅಧಿಕಾರಿ ರಶ್ಮಿ, ಘಟಕದ ವ್ಯವಸ್ಥಾಪಕಸುಬ್ರಹ್ಮಣ್ಯ, ಅಗ್ನಿಶಾಮಕ ಠಾಣಾಧಿಕಾರಿ ರಮೇಶ್, ಹೇಮಂತ್, ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿ ಹಾಜರಿದ್ದರು.