Advertisement

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

07:34 PM Apr 30, 2024 | keerthan |

ವಿಜಯಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ಬಳಿಕ ಜೆಡಿಎಸ್ ಪಕ್ಷದ 15 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲು ಸಿದ್ಧವಾಗಿದ್ದಾರೆ. ಬಿಜೆಪಿ ಪಕ್ಷದ ಕೆಲ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ರಾಜಕೀಯ ಬಾಂಬ್ ಸಿಡಿಸಿದ್ದಾರೆ.

Advertisement

ಮಂಗಳವಾರ ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬಳಿ ಕಾಂಗ್ರೆಸ್ ಸರ್ಕಾರ ಪತನ ಎನ್ನುತ್ತಿರುವ ಬಿಜೆಪಿ ನಾಯಕರ ಹೇಳಿಕೆಗೆ ಕಿಡಿಕಾರಿದ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ನಾಯಕರು ನಮ್ಮ ಸರ್ಕಾರ ಕೆಡವಲು 60 ಶಾಸಕರು ರಾಜೀನಾಮೆ ನೀಡಬೇಕು. ಸರ್ಕಾರ ಎಂಬುದು ಹಣಸಿಕೊಪ್ಪ, ಪುಠಾಣಿ, ಶೇಂಗಾ ಅಲ್ಲ, ಇದೆಲ್ಲ ಹುಡುಗಾಟಿಕೆಯಾ ಎಂದು ಪ್ರಶ್ನಿಸಿದ ಅವರು, ಟ್ರೇಲರ್ ರೂಪದಲ್ಲಿ ರಮೇಶ ಜಾರಕೊಹೊಳಿ ಕೇವಲ 5 ಶಾಸಕರನ್ನು ತರಲಿ ಎಂದು ಸವಾಲು ಹಾಕಿದರು.

ಪ್ರಜ್ವಲ್ ಆಶ್ಲೀಲ ವಿಡಿಯೋ ಬಿಡುಗಡೆ ಮಾಡಿದ್ದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕೈವಾಡವಿದೆ ಎಂಬ ಆರೋಪ ನಿರಾಧಾರ. ಒಬ್ಬರು, ಇಬ್ಬರಲ್ಲ ಸಾವಿರಾರು ಮಹಿಳೆಯರನ್ನು ಬಳಸಿಕೊಂಡಿದ್ದಾಗಿ ಮಾಧ್ಯಮದಲ್ಲಿ ಬಂದಿದೆ. ಇಂತದ್ದನ್ನೆಲ್ಲ ಮಾಡುವಂತೆ ಶಿವಕುಮಾರ ಹೇಳಿದ್ದಾರಾ? ಶಿವಕುಮಾರ್ ಅಥವಾ ಕಾಂಗ್ರೆಸ್ ಮಾಡು ಎಂದರೆ ನೀವು ಮಾಡುತ್ತೀರಾ ಎಂದು ವಿಪಕ್ಷಗಳ ನಾಯಕರ ಹೇಳಿಕೆ ವಿರುದ್ಧ ಹರಿಹಾಯ್ದರು.

ಲೋಕಸಭಾ ಚುನಾವಣೆ ಬಳಿಕ ದೇವೇಗೌಡರ ಜೊತೆಗೆ ದೆಹಲಿಗೆ ತೆರಳಿ ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತೇವೆ ಎಂದು ರಮೇಶ ಜಾರಕಿಹೊಳಿ ನೀಡಿರುವ ಹೇಳಿಕೆ, ಪ್ರಕರಣವನ್ನು ಮಚ್ಚಿ ಹಾಕುವ ಹುನ್ನಾರ ಎಂದರು.

Advertisement

ಮೋದಿ ಬಾಯಿ ಬಿಡಲಿ: ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಉತ್ತರ ಕೊಡಬೇಕು ಎಂದು ಆಗ್ರಹಿಸಿದ ಸಚಿವ ಪಾಟೀಲ, ಭಾಯಿಯೋ ಔರ್ ಬೆಹೆನೋ, ಐಸಾ ಹಮಾರಾ ಪ್ರಜ್ವಲ್ ರೇವಣ್ಣಾನೆ ಕಿಯಾ, ಹಮ್‍ಕೋ ಪೆಹಲೇ ಹೀ ಮಾಲೂಮ್ ಥಾ, ಫೀರ್ ಭೀ ಹಮ್ ಟಿಕೆಟ್ ದಿಯಾ ಉನಕೋ ಎಂದು ಜನತೆಗೆ ಹೇಳಲಿ ಎಂದು ಕುಟುಕಿದರು.

ವಿಷಯ ಗೊತ್ತಿದ್ದರೂ ಶಾ ಟಿಕೆಟ್ ಕೊಟ್ಟರೆ: ಪ್ರಜ್ವಲ್ ಪ್ರಕರಣದ ವಿಚಾರ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಮೊದಲೇ ಗೊತ್ತಿತ್ತಂತೆ, ಹೀಗಿದ್ದರೂ ಪ್ರಜ್ವಲ್‍ಗೆ ಮೈತ್ರಿ ಪಕ್ಷದಿಂದ ಟಿಕೆಟ್ ಕೊಟ್ಟಿದ್ದು ಅಪರಾಧ ಅಲ್ಲವೇ ಎಂದು ಪ್ರಶ್ನಿಸಿದ ಪಾಟೀಲ್, ಮಹಿಳೆಯರು ಬಗ್ಗೆ ಗೌರವ ಇದೆ ಎಂದು ದೊಡ್ಡ ದೊಡ್ಡ ಮಾತನ್ನಾಡುತ್ತಾರೆ ಎಂದು ಕುಟುಕಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿರುದ್ಧ ಹರಿಹಾಯ್ದ ಪಾಟೀಲ್, ಪ್ರಜ್ವಲ್ ಪ್ರಕರಣಕ್ಕೂ, ರಾಜ್ಯದ ಕಾನೂನು ಸುವ್ಯವಸ್ಥೆಗೂ ಏನು ಸಂಬಂಧವಿದೆ ಎಂದು ಪ್ರಶ್ನಿಸಿದರು.

ಎಸ್‍ಐಟಿ ತನಿಖೆ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣವನ್ನು ನಮ್ಮ ಸರ್ಕಾರ ಎಸ್‍ಐಟಿ ತನಿಖೆಗೆ ವಹಿಸಿದೆ. ತನಿಖೆ ಮುಗಿಯುವವರೆಗೂ ಮಾಧ್ಯಮಗಳಲ್ಲಿ ಮಾತನಾಡುವುದಿಲ್ಲ. ಫಾಸ್ಟ್ ಟ್ರ್ಯಾಕ್ ನಲ್ಲಿ ವಿಚಾರಣೆ ನಡೆಸಿ ಇದಕ್ಕೆ ಅಂತ್ಯ ಹಾಡಬೇಕು ಎಂದರು.

ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ. ಇದರಲ್ಲಿ ನನ್ನ ಮಗ ಇದ್ದರೂ ಸರಿ, ಬೇರೆಯವರ ಮಕ್ಕಳಿದ್ದರೂ ಸರಿ ಮಾಫಿ ಇಲ್ಲ. ತಪ್ಪು ಮಾಡಿದವರು ಎಷ್ಟೇ ದೊಡ್ಡವರಿದ್ದರೂ ಕಠಿಣ ಶಿಕ್ಷೆಯಾಗಬೇಕು ಎಂದರು.

ನೇಹಾ ಪ್ರಕರಣದಲ್ಲಿ ರಾಜಕೀಯ: ಹುಬ್ಬಳ್ಳಿ ನೇಹಾ ಪ್ರಕರಣದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ದ ರಾಜಕೀಯ ಮಾಡಲು ಮುಂದಾಗಿದ್ದರು. ಹಿಂದೂ-ಮುಸ್ಲೀಂ ಕೋಮು ಗಲಭೆ ಹಚ್ಚಲು ಪ್ರಯತ್ನಿಸಿದರು. ನೇಹಾ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಹೇಳಿದ್ದೇವೆ. ಪ್ರಜ್ವಲ್ ರೇವಣ್ಣ ಆಶ್ಲೀಲ ವಿಡಿಯೋ ವಿಚಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next