ಚಿಂಚೋಳಿ: ಸೇಡಂ ವಿಧಾನಸಭೆ ಮತಕ್ಷೇತ್ರದಲ್ಲಿ ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ರಾಜ್ಯ ಮುಜರಾಯಿ ಇಲಾಖೆಯಿಂದ 15ಕೋಟಿ ರೂ. ಮಂಜೂರಿಗೊಳಿಸಿ ಅಭಿವೃದ್ಧಿಗೊಳಿಸಲಾಗುತ್ತಿದೆ. ದೇವಸ್ಥಾನಗಳಿಗೆ ಮೂಲಸೌಕರ್ಯಗಳನ್ನು ನೀಡಲಾಗಿದೆ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು.
ಸುಲೇಪೇಟ ಗ್ರಾಮದ ಪರಮ ಪೂಜ್ಯ ಬ್ರಹ್ಮಲೀನ ಗುರುನಾಥ ಮಹಾ ಸ್ವಾಮಿಗಳ 6ನೇ ಆರಾಧನೆ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರಧಾನಮಂತ್ರಿ ಇಡೀ ದೇಶದಲ್ಲಿರುವ ಪ್ರತಿಯೊಂದು ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸಲು ಕೋಟ್ಯಂತರ ರೂ. ಮಂಜೂರು ಮಾಡಿದ್ದರಿಂದ ಮಠ, ಮಂದಿರಗಳು ದುರಸ್ತಿ ಕಾರ್ಯ ನಡೆಯುತ್ತಿವೆ. ಸುಲೇಪೇಟಗ್ರಾಮದ ವೀರಭದ್ರೇಶ್ವರ ದೇವಾಲಯಕ್ಕೆ 25ಲಕ್ಷ ರೂ., ಏಕದಂಡಗಿ ಮಠಕ್ಕೆ 25ಲಕ್ಷ ರೂ., ಹನುಮಾನ ದೇವಾಲಯಕ್ಕೆ 5ಲಕ್ಷ ರೂ. ಮಂಜೂರಿಗೊಳಿಸಲಾಗಿದೆ. ಸೇಡಂ ವಿಧಾನಸಭೆ ಮತಕ್ಷೇತ್ರದಲ್ಲಿ 160ಹಳ್ಳಿಗಳಲ್ಲಿ ಹಳೆಯ ದೇವಸ್ಥಾನಗಳ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಸೇಡಂ ಮತಕ್ಷೇತ್ರಕ್ಕೆ ಒಟ್ಟು 900ಕೋಟಿ ರೂ. ಗಳನ್ನು ಅಭಿವೃದ್ಧಿಗಾಗಿ ಖರ್ಚು ಮಾಡಲಾಗುತ್ತಿದೆ. ಕಾಗಿಣಾ ನದಿಯಿಂದ ಏತನೀರಾವರಿ ಯೋಜನೆಗಾಗಿ 639ಕೋಟಿ ರೂ.ನೀಡಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ತಾಲೂಕಿನಲ್ಲಿ 84ಹಳ್ಳಿಗಳಲ್ಲಿ 54ಕೆರೆ ತುಂಬಿಸುವ ಕಾರ್ಯಕ್ಕೆ 592ಕೋಟಿ ರೂ. ಅನುದಾನ ಮಂಜೂರಿಗೊಳಿಸಲಾಗಿದೆ. ಸುಲೇಪೇಟ ಗ್ರಾಮದಲ್ಲಿ ಬಸವೇಶ್ವರ ಮೂರ್ತಿಯನ್ನು ಅನೇಕ ದಿನಗಳಿಂದ ಬಟ್ಟೆಯಿಂದ ಸುತ್ತಿಡಲಾಗಿದೆ. ಮೂರ್ತಿಯನ್ನು ಬೇಗನೆ ಅನಾವರಣ ಮಾಡಲಾಗುವುದು. ನನ್ನ ಅಧಿಕಾರ ಅವಧಿ 9ತಿಂಗಳು ಬಾಕಿ ಇದೆ. ಕ್ಷೇತ್ರದ ಅಭಿವೃದ್ಧಿಗೊಳಿಸಿ ಮುಂದೆ ಕೂಲಿ ಕೇಳುತ್ತೇನೆ ಎಂದರು.
ಪೂಜ್ಯ ದೊಡ್ಡೇಂದ್ರ ಮಹಾಸ್ವಾಮೀಜಿ, ಪೂಜ್ಯ ಚಂದ್ರಶೇಖರ ಮಹಾ ಸ್ವಾಮೀಜಿ, ಮೋನಪ್ಪ ಪಾಂಚಾಳ, ಸಂತೋಷಿರಾಃಣಿ ಪಾಟೀಲ, ಆತೀಶ ಪವಾರ, ಮಹೇಶ ಬೆಮಳಗಿ, ಮಂಜುಳಾ ಎಕಮಾಯಿ, ದಯಾನಂದ, ರುದ್ರಮುನಿ ಬಂಡೆಪ್ಪ ಇನ್ನಿತರರು ಭಾಗವಹಿಸಿದ್ದರು.