Advertisement

ಗ್ರಾಮ ಪಂಚಾಯತ್‌ 14ನೇ ಹಣಕಾಸು ಯೋಜನೆ ಅನುದಾನ ಹಿಮ್ಮರಳುವುದಿಲ್ಲ:ಒಂದು ವರ್ಷಕ್ಕೆ ವಿಸ್ತರಣೆ!

01:52 AM Apr 02, 2021 | Team Udayavani |

ಪುತ್ತೂರು: ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯಕ್ಕಾಗಿ 14ನೇ ಹಣಕಾಸು ಯೋಜನೆಯ ಮೂಲಕ ಗ್ರಾ.ಪಂ.ಗಳಿಗೆ ನೀಡಲಾಗಿರುವ ಅನುದಾನದಲ್ಲಿ ಆರ್ಥಿಕ ವರ್ಷಾಂತ್ಯಕ್ಕೆ ಖರ್ಚಾಗದೆ ಉಳಿದಿರುವ ಮೊತ್ತವನ್ನು ಲ್ಯಾಪ್ಸ್‌ ಮಾಡದೆ ಮುಂದಿನ ಒಂದು ವರ್ಷಕ್ಕೆ ವಿಸ್ತರಿಸಿ ಸರಕಾರ ಆದೇಶಿಸಿದೆ.

Advertisement

ಕೋವಿಡ್‌ 2ನೇ ಅಲೆ ಕಾರಣ 2022ನೇ ಆರ್ಥಿಕ ವರ್ಷಾಂತ್ಯದ ತನಕ ಈ ಮೊತ್ತವನ್ನು ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ. ಅನುದಾನವನ್ನು ಖರ್ಚಾಗದೆ ಲ್ಯಾಪ್ಸ್‌ ಆಗುವ ಆತಂಕ ಎದುರಿಸುತ್ತಿದ್ದ ಗ್ರಾ.ಪಂ.ಗಳು ಬೀಸುವ ದೊಣ್ಣೆಯಿಂದ ಪಾರಾದಂತಾಗಿವೆ.

14ನೇ ಹಣಕಾಸು ಯೋಜನೆ :

ಜನಸಂಖ್ಯೆ, ಪ್ರದೇಶ ಆಧಾರದಲ್ಲಿ ಆಯಾ ಪಂಚಾಯತ್‌ಗೆ 14ನೇ ಹಣಕಾಸಿನಡಿ ಅನುದಾನ ಜಮೆ ಆಗುತ್ತದೆ. ಆ ಮೊತ್ತವನ್ನು ನಾಗರಿಕರ ಮೂಲ ಸೇವೆಗಳನ್ನು ಉತ್ತಮಗೊಳಿಸಲು ಬಳಸಬೇಕು. ನೀರು ಸರಬರಾಜು ಹಾಗೂ ನೈರ್ಮಲ್ಯ, ಒಳಚರಂಡಿ ಮತ್ತು ಘನತ್ಯಾಜ್ಯ ನಿರ್ವಹಣೆ, ಮಳೆ ನೀರಿನ ಚರಂಡಿ, ಸಮುದಾಯ ಸ್ವತ್ತುಗಳ ನಿರ್ವಹಣೆ, ಬೀದಿ ದೀಪಗಳು, ಪಾದಚಾರಿ ಹಾಗೂ ರಸ್ತೆಗಳ ನಿರ್ವಹಣೆ, ಶ್ಮಶಾನ ನಿರ್ವಹಣೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಕನಿಷ್ಠ ಶೇ. 25ರಷ್ಟು ಅನುದಾನವನ್ನು ಉಪಯೋಗಿಸಲು ಕ್ರಿಯಾಯೋಜನೆ ರೂಪಿಸಿ ತಾ.ಪಂ.ಗೆ ಕಳುಹಿಸಿಕೊಡಬೇಕು. ಅಲ್ಲಿಂದ ಜಿ.ಪಂ.ಗೆ ಕಳುಹಿಸಿ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಲಾಗುತ್ತದೆ.

ಕೋವಿಡ್‌ ಅಡ್ಡಿ :

Advertisement

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅವಿಭಜಿತ ದ.ಕ. ಜಿಲ್ಲೆಯ ಅನುದಾನ ಬಳಕೆ ಉತ್ತಮವಾಗಿದೆ. ಈಗಾಗಲೇ 14ನೇ ಹಣಕಾಸಿನ ಆಯೋಗದ ಅವಧಿ 2019-20ನೇ ಸಾಲಿಗೆ ಮುಕ್ತಾಯಗೊಂಡು 15ನೇ ಹಣಕಾಸಿನ ಆಯೋಗದ ಅವಧಿ ಪ್ರಾರಂಭಗೊಂಡಿದೆ. ಆದರೆ ಕಳೆದ ವರ್ಷ ಕೋವಿಡ್‌ ಕಾರಣದಿಂದ ಅನುದಾನ ಪೂರ್ಣ ಬಳಕೆಯಾಗಿರಲಿಲ್ಲ. ಹೀಗಾಗಿ 2021ರ ಮಾರ್ಚ್‌ ತನಕ ವಿಸ್ತರಿಸಲಾಗಿತ್ತು. ಈ ಆರ್ಥಿಕ ವರ್ಷದೊಳಗೆ ಕೂಡ ಅನುದಾನ ಪೂರ್ತಿ ಖರ್ಚಾಗದ ಕಾರಣ ಮತ್ತೆ 2022 ಮಾರ್ಚ್‌ ತನಕ ವಿಸ್ತರಿಸಲಾಗಿದೆ.

40.5 ಕೋ.ರೂ. ಬಾಕಿ :

ದ.ಕ.ದಲ್ಲಿ 28 ಕೋ.ರೂ., ಉಡುಪಿ ಜಿಲ್ಲೆಯಲ್ಲಿ 12.5 ಕೋ.ರೂ. ಸೇರಿದಂತೆ ಒಟ್ಟು ಒಟ್ಟು 40.5 ಕೋ.ರೂ. ಖರ್ಚಾಗದೆ ಉಳಿದಿದೆ. ಕಳೆದ ಎ. 1ರಿಂದ ಈ ವರ್ಷದ ಮಾರ್ಚ್‌ 31ರೊಳಗೆ ಅನುದಾನವನ್ನು ಖರ್ಚು ಮಾಡಬೇಕಿತ್ತು. ಉಳಿದ ಮೊತ್ತ ಲ್ಯಾಪ್ಸ್‌ ಆಗಿ ಸರಕಾರದ ಬೊಕ್ಕಸಕ್ಕೆ ಮರು ಪಾವತಿಯಾಗುವುದು ನಿಯಮ.

Advertisement

Udayavani is now on Telegram. Click here to join our channel and stay updated with the latest news.

Next