ಬೆಂಗಳೂರು: ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ 10ನೇ ಬಸವ ಕೃಷಿ ಸಂಕ್ರಾಂತಿ ಹಾಗೂ ಉತ್ತರ ಕರ್ನಾಟಕದ ಸಮಗ್ರ ನೀರಾವರಿ ಒತ್ತಾಯಿಸಿ ಜ.14ರಂದು ಧರ್ಮಕ್ಷೇತ್ರ ಕೂಡಲಸಂಗಮ ದಲ್ಲಿ ಬೃಹತ್ ರೈತ ಸಂವಾದ ಆಯೋಜಿ ಸಲಾಗಿದೆ ಎಂದು ಪೀಠದ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಸಮಗ್ರ ನೀರಾವರಿ ಯೋಜನೆ ರೂಪಿಸಲು ಸರ್ಕಾರ ಮನಸ್ಸು ಮಾಡಬೇಕಿದೆ. ತೆಲಂಗಾಣ ಮಾದರಿಯಲ್ಲಿ ಉತ್ತರ ಕರ್ನಾಟಕ ಸಮಗ್ರ ನೀರಾವರಿ ಯೋಜನೆಯನ್ನು ಸರ್ಕಾರ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಜ.14ರಂದು ನಡೆಯುವ ಬಸವ ಕೃಷಿ ಸಂಕ್ರಾಂತಿ ವೇದಿಕೆ ಮೂಲಕ ಸಿಎಂ ಯಡಿಯೂರಪ್ಪನವರಿಗೆ ಹಕ್ಕೊತ್ತಾಯ ಮಾಡಲಾಗುವುದು ಎಂದರು.
2020ನೇ ಸಾಲಿನ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಯನ್ನು ವಿಶ್ವದ ಅತೀ ದೊಡ್ಡ ಕಾಳೇಶ್ವರ ಏತ ನೀರಾವರಿ ಯೋಜನೆ ಹರಿಕಾರ, ಮಿಷನ್ ಭಗೀರಥ ಕುಡಿಯುವ ನೀರು ಯೋಜನೆ ರೂವಾರಿ ಹಾಗೂ ತೆಲಂಗಾಣ ಸರ್ಕಾರದ ಜಲ ಸಂಪನ್ಮೂಲ ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರಕಾಶ್‌ರಾವ್ ವೀರಮಲ್ಲ ಅವರಿಗೆ ನೀಡಲಾಗುತ್ತಿದೆ. ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಹಲವು ಪ್ರಮುಖರನ್ನು ಗುರುತಿಸಿ 2012ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಉಪಮುಖ್ಯಮಂತ್ರಿ ಎಂ.ಗೋವಿಂದ ಕಾರಜೋಳ ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಎಂ.ಬಿ. ಪಾಟೀಲ್, ಮುರಗೇಶ್ ನಿರಾಣಿ, ಶಿವಾನಂದ ಪಾಟೀಲ್, ಬಸವನಗೌಡ ಪಾಟೀಲ್, ಮಾಜಿ ಸಚಿವ ವಿನಯ್ ಕುಲಕರ್ಣಿ, ಬಾಬಾಗೌಡ ಪಾಟೀಲ್ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಮೀಸಲಾತಿ ಹೋರಾಟದ ನಾಯಕ ಎಂ.ಚಿಕ್ಕನಗೌಡರ್, ಜಾಗತಿಕ ಬಸವ ಶಾಂತಿ ಸಂಸ್ಥೆ ಅಧ್ಯಕ್ಷ ಶಶಿಧರ್ ಹೆಬ್ಟಾಳ ಇದ್ದರು.
ಶೇ.16 ಮೀಸಲಾತಿ ಹಕ್ಕೊತ್ತಾಯ: ಮಹಾರಾಷ್ಟ್ರದಲ್ಲಿ ಮರಾಠ ಸಮಾಜಕ್ಕೆ ಉದ್ಯೋಗದಲ್ಲಿ ಶೇ.16 ಮೀಸಲಾತಿ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಲಿಂಗಾಯತ ಸಮಾಜ ಜನಸಂಖ್ಯೆಯಲ್ಲಿ, ರಾಜಕೀಯವಾಗಿ ಮುಂದಿದ್ದರೂ ಆರ್ಥಿಕವಾಗಿ ಹಿಂದುಳಿದಿದೆ. ಹೀಗಾಗಿ, ಸಮಸ್ತ ಲಿಂಗಾಯತ ಸಮುದಾಯಕ್ಕೆ ಶೇ.16 ಉದ್ಯೋಗದಲ್ಲಿ ಮೀಸಲಾತಿ ಜಾರಿ ಮಾಡಬೇಕೆಂಬ ಹಕ್ಕೊತ್ತಾಯ ಸಲ್ಲಿಸಲು ಸಿದ್ಧತೆ ನಡೆದಿದೆ.