Advertisement

Rabkavi Banhatti ಒಂದೂವರೆ ಶತಮಾನದ ಶಾಲೆಯಲ್ಲಿ 147 ವಿದ್ಯಾರ್ಥಿಗಳು..!

05:57 PM Jun 03, 2024 | Team Udayavani |

ರಬಕವಿ-ಬನಹಟ್ಟಿ : ಒಂದೂವರೆ ಶತಮಾನದ ಹೊಸ್ತಿಲಲ್ಲಿರುವ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಗೊಂಡ ಬನಹಟ್ಟಿಯ ಹೃದಯ ಭಾಗದಲ್ಲಿರುವ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ನಂ.1 ಇದೀಗ ವಿದ್ಯಾರ್ಥಿಗಳ ಕೊರತೆಯನ್ನು ಅನುಭವಿಸುತ್ತಿದೆ.

Advertisement

ಈ ಶಾಲೆಯು ಯಾವುದೋ ಕುಗ್ರಾಮದಲ್ಲಿಲ್ಲ, ಬದಲಿಗೆ ತಾಲೂಕಿನ ಬನಹಟ್ಟಿಯ ಹೃದಯ ಭಾಗದಲ್ಲಿದೆ. ಅದರಲ್ಲಿಯೂ ದಿನಂಪ್ರತಿ ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯ ಪಕ್ಕದಲ್ಲಿಯೇ ಇತರೆ ಶಾಲೆಗಳಿಗೆ ತೆರಳುತ್ತಾರೆ. ಇಷ್ಟಾದರೂ ಈ ಶಾಲೆಗೆ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಕೊರತೆ ಎದ್ದು ಕಾಣುತ್ತಿದೆ.

ಮೊದಲ ಶಾಲೆ: ರಬಕವಿ-ಬನಹಟ್ಟಿ ತಾಲೂಕಿನಲ್ಲಿಯೇ ಮೊದಲ ಶಾಲೆಯಾಗಿ ಸ್ಥಾಪನೆಗೊಂಡ ಈ ಸರ್ಕಾರಿ ಶಾಲೆಯು 1877 ರಲ್ಲಿ ನಿರ್ಮಿಸಲಾಯಿತು. ಅಂದಿನ ಮರಾಠಿಮಯ ಪ್ರದೇಶವಾಗಿದ್ದ ಕಾಲದಲ್ಲಿ 1 ರಿಂದ 7 ನೇ ತರಗತಿಯ ಕನ್ನಡ ಶಾಲೆ ಪ್ರಾರಂಭವಾಗಿದ್ದೇ ವಿಶೇಷ. ಅಲ್ಲದೇ ಇಡೀ ಪಟ್ಟಣಕ್ಕೆ ಇದೊಂದೇ ಶಾಲೆಯಾಗಿತ್ತು. ಈಗಲೂ ವಯೋವೃದ್ಧರು ಈ ಶಾಲೆಯ ಗತವೈಭವವನ್ನು ನೆನಪಿಸಿಕೊಳ್ಳುತ್ತಾರೆ. ಮೊದಲು ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ ಬೇರೆ ಬೇರೆಯಾಗಿತ್ತು. ಮಕ್ಕಳ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಇದೀಗ ಎರಡು ಶಾಲೆ ಕೂಡಿ ನಡೆಯುತ್ತಿದೆ.

ಕೋವಿಡ್ ಪರಿಣಾಮ: ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುವಲ್ಲಿ ಯಶಸ್ವಿಯಾಗಿದ್ದ ಸರ್ಕಾರಿ ಶಾಲೆಗೆ ಕೋವಿಡ್ ನಂತರದಲ್ಲಿ ಹಂತ ಹಂತವಾಗಿ 1400ವರೆಗೆ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಪ್ರಸಕ್ತ ವರ್ಷ147 ಕ್ಕೆ ಕುಸಿಯುವಂತಾಗಿದೆ.

ಸೌಕರ್ಯಗಳಿಗೆ ಕೊರತೆಯಿಲ್ಲ: ಶಿಕ್ಷಕರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಶಿಕ್ಷಣ ಇಲಾಖೆ ಮುತುವರ್ಜಿ ವಹಿಸಲಾಗಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ.

Advertisement

ಖಾಸಗಿ ಶಾಲೆ ಆರ್ಭಟ: ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮ, ಸಿಬಿಎಸ್‌ಇ ಸೇರಿದಂತೆ ಖಾಸಗಿ ಶಾಲೆಗಳ ಭರಾಟೆ ಹೆಚ್ಚಾಗಿರುವುದರಿಂದ ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವವರೇ ಹೆಚ್ಚು. 2004 ರಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದ ಈ ಸರ್ಕಾರಿ ಶಾಲೆಯಲ್ಲೀಗ 147 ಕ್ಕೆ ಇಳಿಕೆ ಕಂಡಿರುವುದೇ ವಿಚಿತ್ರ.

ಕಾಯಕಲ್ಪವಾಗಬೇಕು: ಪಟ್ಟಣದ ಮಧ್ಯಭಾಗದಲ್ಲಿರುವ ಈ ಶಾಲೆಯ ಸುತ್ತ ಕಾಂಪೌಂಡ್ ಇಲ್ಲದ ಕಾರಣ ಶಾಲಾ ರಜೆ ದಿನಗಳಲ್ಲಿ ಅನೈತಿಕ ಚಟುವಟಿಕೆಗಳಿಗೆ ಅವಕಾಶವಾಗಿದೆ. ಶಾಲಾ ಆವರಣದ ಹೊರಗಡೆ ಬೀದಿ ವ್ಯಾಪಾರಿಗಳಿಂದ ತೊಂದರೆ ಅನುಭವಿಸುವಂತಾಗಿದೆ. ಇವೆಲ್ಲದರ ಬಗ್ಗೆ ಗಮನಿಸಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಶಿಕ್ಷಕರು ಹಾಗು ಶಾಲಾ ಸುಧಾರಣಾ ಸಮಿತಿ ಹೆಚ್ಚಿನ ಗಮನ ಹರಿಸಬೇಕಿದೆ.

ಈ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದೆ. ಮನೆ ಮನೆಗೆ ತೆರಳಿ ಶಾಲೆ ಬಗ್ಗೆ ತಿಳಿಹೇಳಲಾಗಿದೆ. ಪಾಲಕರ ಸ್ವಚ್ಛೆಯಿಂದ ಮಗುವನ್ನು ಸರ್ಕಾರಿ ಶಾಲೆಗೆ ಕಳಿಸುವಂತಾಗಬೇಕು’.
-ಅಶೋಕ ಬಸನ್ನವರ, ಕ್ಷೇತ್ರ ಶಿಕ್ಷಣಾಧಿಕಾರಿ, ಜಮಖಂಡಿ.

ಮೂಲಭೂತ ಸೌಕರ್ಯ ಒದಗಿಸಿ, ಪೂರ್ಣ ಪ್ರಮಾಣದಲ್ಲಿ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಇತರೆ ಚಟುವಟಿಕೆಗಳಿಂದ ಕಾರ್ಯಪ್ರವೃತರಾಗುವಲ್ಲಿ ಕಾಳಜಿ ವಹಿಸುತ್ತೇವೆ.’
-ಎಸ್.ಪಿ. ಬುರ್ಲಿ, ಶಿಕ್ಷಣ ಸಂಯೋಜಕರು, ರಬಕವಿ ಬನಹಟ್ಟಿ.

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next