Advertisement

ಜಿಲ್ಲೆಯ 5 ಪೊಲೀಸ್‌ ಠಾಣೆಗಳಲ್ಲಿ ಸೆ.144

12:24 AM Nov 10, 2019 | mahesh |

ಕಾಸರಗೋಡು: ಅಯೋಧ್ಯೆಯ ವಿವಾದಾತ್ಮಕ ಭೂಮಿಯ ಹಕ್ಕುದಾರರ ಬಗೆಗಿನ ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾಸರಗೋಡು ಜಿಲ್ಲೆಯ ಐದು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಿ.ಆರ್‌.ಪಿ.ಸಿ. ಸೆಕ್ಷನ್‌ 144 ರನ್ವಯ ನ.11 ರ ರಾತ್ರಿ 12 ಗಂಟೆಯ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದೇ ವೇಳೆ ಡಿ.ಐ.ಜಿ. ಕೆ.ಎಸ್‌.ಸೇತು ಮಾಧವನ್‌ ಕಾಸರಗೋಡಿಗೆ ಆಗಮಿಸಿದ್ದು ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

Advertisement

ಮತೀಯ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವವರನ್ನು ಗುರುತಿಸಿ ಅವರನ್ನು ದೂರೀಕರಿಸಿ, ನಾಡಿನಲ್ಲಿ ಶಾಂತಿ, ನೆಮ್ಮದಿ ವಾತಾವರಣ ಖಾತರಿ ಪಡಿಸಲು ಎಲ್ಲಾ ವಿಭಾಗದ ಜನರು ಒಮ್ಮತದಿಂದ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ|ಡಿ.ಸಜಿತ್‌ ಬಾಬು ವಿನಂತಿಸಿದ್ದಾರೆ.

ಕಾಸರಗೋಡು, ಕುಂಬಳೆ, ಮಂಜೇಶ್ವರ, ಹೊಸದುರ್ಗ, ಚಂದೇರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಪೊಲೀಸ್‌ ಠಾಣೆಗಳ ಎಲ್ಲಾ ಸೂಕ್ಷ್ಮ ಸಂವೇದಿ ಪ್ರದೇಶಗಳಲ್ಲಿ ಮತ್ತಿತರ ಪ್ರಧಾನ ಕೇಂದ್ರಗಳಲ್ಲಿ ಪೊಲೀಸರು ನ.8 ರ ರಾತ್ರಿಯಿಂದಲೇ ಗಸ್ತು ಕಾವಲು ಆರಂಭಿಸಿದ್ದಾರೆ. ಮಂಜೇಶ್ವರ ಗಡಿ ಪ್ರದೇಶಗಳಲ್ಲಿ ಇನ್ನಷ್ಟು ಜಾಗ್ರತೆ ವಹಿಸಿದ್ದು, ಎಲ್ಲಾ ವಾಹನಗಳನ್ನು ಬಿಗಿ ತಪಾಸಣೆಗೊಳಪಡಿಸಲಾಗುತ್ತಿದೆ.

ನಿಷೇಧಾಜ್ಞೆಯ ಹಿನ್ನೆಲೆಯಲ್ಲಿ ಜನರು ಗುಂಪು ಸೇರುವುದು, ಶಸ್ತಾಸ್ತ್ರ ಕೈವಶವಿರಿಸಿಕೊಳ್ಳುವುದು, ಸಭೆ ಮತ್ತು ಮೆರವಣಿಗೆ ನಡೆಸುವುದು ಇತ್ಯಾದಿಗಳಿಗೆ ನಿಷೇಧ ಹೇರಲಾಗಿದೆ. ಆದರೆ ಜಿಲ್ಲಾ ಮತ್ತು ರಾಜ್ಯ ಶಾಲಾ ಕಲೋತ್ಸವವನ್ನು ಇದರಿಂದ ಹೊರತುಪಡಿಸಲಾಗಿದೆ. ಜಿಲ್ಲೆಯ ಕಾನೂನು ಮತ್ತು ಶಿಸ್ತುಪಾಲನೆ ಖಾತರಿಪಡಿಸಿ ಯಾವುದೇ ರೀತಿಯ ಕಾನೂನು ಭಂಗ ಚಟುವಟಿಕೆಗಳು ನಡೆಯುವುದನ್ನು ತಡೆಯಲು ಜಿಲ್ಲೆಯಾದ್ಯಂತ ಬಿಗು ಪೊಲೀಸ್‌ ಕಾವಲು ಏರ್ಪಡಿಸಲಾಗಿದೆ. ಇದರ ಹೊಣೆಗಾರಿಕೆಯನ್ನು ಡಿಐಜಿ ಕೆ.ಎಸ್‌.ಸೇತು ಮಾಧವನ್‌ ಅವರಿಗೆ ವಹಿಸಿಕೊಡಲಾಗಿದೆ. ಅವರು ನ.8 ರಂದೇ ಜಿಲ್ಲೆಗೆ ಆಗಮಿಸಿದ್ದಾರೆ. ಎರಡು ತುಕಡಿ ಪೊಲೀಸ್‌ ಪಡೆಯನ್ನು ಕರೆಸಲಾಗಿದೆ.

ಪಟಾಕಿಗಳಿಗೆ ನಿಷೇಧ
ಪಟಾಕಿ ಮತ್ತಿತರ ಸುಡುಮದ್ದುಗಳನ್ನು ಸಿಡಿಸುವುದಕ್ಕೆ ನಿಷೇಧ ಹೇರಲಾಗಿದೆ. ಮುಂದಿನ ಆದೇಶ ಲಭಿಸುವ ತನಕ ಇದು ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ತೆರದಿದ್ದ ಪಟಾಕಿ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದ್ದಾರೆ.

Advertisement

ಪೊಲೀಸ್‌ ಠಾಣೆಗಳ ಹೊಣೆಗಾರಿಕೆ ಡಿವೈಎಸ್‌ಪಿಗಳಿಗೆ
ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾದ ಜಿಲ್ಲೆಯ ಪೊಲೀಸ್‌ ಠಾಣೆಯ ಹೊಣೆಗಾರಿಕೆಯನ್ನು ಡಿವೈಎಸ್‌ಪಿಗಳಿಗೆ ವಹಿಸಿ ಕೊಡಲಾಗಿದೆ. ಇದರಂತೆ ಮಂಜೇಶ್ವರ ಠಾಣೆಯ ಹೊಣೆಗಾರಿಕೆಯನ್ನು ಡಿವೈಎಸ್‌ಪಿ ಪಿ.ಪಿ.ಸದಾನಂದನ್‌, ಕುಂಬಳೆ ಡಿವೈಎಸ್‌ಪಿ ಹಸೈನಾರ್‌, ಕಾಸರಗೋಡು ಮತ್ತು ವಿದ್ಯಾನಗರ ಠಾಣೆಗಳ ಹೊಣೆಗಾರಿಕೆಯನ್ನು ಡಿವೈಎಸ್‌ಪಿ ಜೈಸನ್‌ ಅಬ್ರಹಾಂ, ಮೇಲ್ಪರಂಬ ಡಿವೈಎಸ್‌ಪಿ ಎನ್‌.ಪಿ.ವಿನೋದ್‌, ಚಂದೇರಾ ಡಿವೈಎಸ್‌ಪಿ ಪ್ರದೀಪ್‌ ಕುಮಾರ್‌, ಬೇಕಲ ಮತ್ತು ಹೊಸದುರ್ಗ ಠಾಣೆಗಳ ಹೊಣೆಗಾರಿಕೆಗಳನ್ನು ಡಿವೈಎಸ್‌ ಟಿ.ಕೆ.ಸುಧಾಕರನ್‌ ಅವರಿಗೆ ವಹಿಸಿಕೊಡಲಾಗಿದೆ. ಜಿಲ್ಲೆಯ ಪೂರ್ಣ ಹೊಣೆಗಾರಿಕೆಯನ್ನು ಡಿಐಜಿ ಕೆ.ಎಸ್‌.ಸೇತು ಮಾಧವನ್‌ ಅವರಿಗೆ ವಹಿಸಿಕೊಡಲಾಗಿದೆ. ಅವರು ಕೆಲವು ದಿನ ಕಾಸರಗೋಡಿನಲ್ಲೇ ಉಳಿದುಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸುವರು.

ಮದ್ಯದಂಗಡಿಗಳಿಗೆ ಬೀಗ : ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮದ್ಯದಂಗಡಿಗಳನ್ನು ಶನಿವಾರದಿಂದ ಮುಚ್ಚಲಾಗಿದೆ. ಮುಂದಿನ ಸೂಚನೆ ಲಭಿಸುವ ತನಕ ಅಂಗಡಿ ತೆರೆಯದಿರುವಂತೆ ಪೊಲೀಸರು ಸೂಚಿಸಿದ್ದಾರೆ.

ಪೊಲೀಸ್‌ ಪಹರೆ
ಎಲ್ಲಾ ಬಸ್‌ ನಿಲ್ದಾಣಗಳು, ರೈಲು ನಿಲ್ದಾಣಗಳು, ಆರಾಧನಾಲಯಗಳು ಮತ್ತು ಪರಿಸರ ಪ್ರದೇಶ, ಜನನಿಬಿಡ ಕೇಂದ್ರಗಳು, ಸೂಕ್ಷ್ಮ ಸಂವೇದಿ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮಾತ್ರವಲ್ಲ ರಾತ್ರಿ ವೇಳೆ ಇಂತಹ ಪ್ರದೇಶಗಳಿಗೆ ಇನ್ನಷ್ಟು ಬಿಗಿ ಪೊಲೀಸ್‌ ಪಹರೆ ಮತ್ತು ಗಸ್ತು ತಿರುಗುವಿಕೆಯನ್ನು ಏರ್ಪಡಿಸಲಾಗಿದೆ. ಹೊಟೇಲ್‌ಗ‌ಳು, ವಸತಿಗೃಹಗಳ ಮೇಲೂ ಪೊಲೀಸರು ತೀವ್ರ ನಿಗಾಯಿರಿಸಿದ್ದಾರೆ. ಶಂಕಿತರನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಕೋಮು ವಿದ್ವೇಷ ಮೂಡಿಸುವ ರೀತಿಯಲ್ಲಿ ವಾಟ್ಸಪ್‌ ಇತ್ಯಾದಿ ಸಾಮಾಜಿಕ ಜಾಲ ತಾಣಗಳ ಮೂಲಕ ಯಾ ಇನ್ನಿತರ ಮಾರ್ಗಗಳ ಮೂಲಕ ಯಾವುದೇ ರೀತಿಯ ಪ್ರಚಾರ ನಡೆಸಿದ್ದಲ್ಲಿ ಅಂತಹವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುವುದೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಾಟ್ಸಪ್‌, ಎಸ್‌.ಎಂ.ಎಸ್‌. ಇತ್ಯಾದಿ ಎಲ್ಲಾ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ. ತಪಾಸಣೆಗಾಗಿ ಶ್ವಾನದಳ ಮತ್ತು ಬಾಂಬ್‌ ಸ್ಕ್ವಾÌಡ್‌ಗಳನ್ನು ರಂಗಕ್ಕಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next