ಮುಂಬಯಿ: ನಗರದ ಹಿರಿಯ ಧಾರ್ಮಿಕ ಸಂಸ್ಥೆ ಶ್ರೀ ಮದ್ಭಾರತ ಮಂಡಳಿಯ 142ನೇ ವಾರ್ಷಿಕ ಮಹಾಸಭೆ ಮಾ. 21ರಂದು ಪೂರ್ವಾಹ್ನ 11ರಿಂದ ಮಂಡಳಿಯ ಅಧ್ಯಕ್ಷ ಜಗನ್ನಾಥ ಪುತ್ರನ್ ಅಧ್ಯಕ್ಷತೆಯಲ್ಲಿ ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ ಪ್ರವಚನ ಸಭಾಗೃಹದಲ್ಲಿ ಜರಗಿತು.
ಜತೆ ಕಾರ್ಯದರ್ಶಿ ಲೋಕನಾಥ್ ಪಿ. ಕಾಂಚನ್ ವಾರ್ಷಿಕ ವರದಿ ವಾಚಿಸಿದರು. ಅಧ್ಯಕ್ಷ ಜಗನ್ನಾಥ ಪಿ. ಪುತ್ರನ್ ಅವರು ಮಂಡಳಿಯ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀನಾರಾಯಣ ದೇವರನ್ನು ಪ್ರಾರ್ಥಿಸಿದರು.
ಗತ ಮಹಾಮಹಾಸಭೆಯ ಟಿಪ್ಪಣಿಯನ್ನು ಜತೆ ಕಾರ್ಯದರ್ಶಿ ಹರಿಶ್ಚಂದ್ರ ಸಿ. ಕಾಂಚನ್ ಮಂಡಿಸಿದರು. 2019-2020ನೇ ಸಾಲಿನ ವಾರ್ಷಿಕ ಆಯವ್ಯಯ ಪಟ್ಟಿಯನ್ನು ಪ್ರಧಾನ ಕೋಶಾಧಿಕಾರಿ ಕೇಶವ ಆರ್. ಪುತ್ರನ್ ಮಂಡಿಸಿದರು. 2021-2022ನೇ ಸಾಲಿಗೆ ಲೆಕ್ಕ ಪರಿಶೋಧಕರನ್ನಾಗಿ ಪಿ. ಸಿಂಗಾನಿಯ ಕಂಪೆನಿಯನ್ನು ನೇಮಿಸಲಾಯಿತು. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ ಬಗ್ಗೆ ಪ್ರಧಾನ ಕೋಶಾಧಿಕಾರಿ ಕೇಶವ ಪುತ್ರನ್ ಅವರು ಮಾಹಿತಿ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾರ್ವಜನಿಕ ಚಾರಿಟಿ ಟ್ರಸ್ಟಿಗೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಹಣದ ಬಗ್ಗೆ ಪ್ರಧಾನ ಕೋಶಾಧಿಕಾರಿ ಕೇಶವ ಪುತ್ರನ್ ವಿವರಿಸಿ, ಸಭೆಯಲ್ಲಿ ಇದರ ಬಗ್ಗೆ ಅನುಮತಿ ಪಡೆದುಕೊಂಡರು. ಈ ಸಂದರ್ಭ ಚಂದ್ರಶೇಖರ್ ಆರ್. ಸಾಲ್ಯಾನ್ ಅವರ ಪತ್ನಿ ಡಾ| ಜಯಶ್ರೀ ಸಿ. ಸಾಲ್ಯಾನ್ ತಮ್ಮ ಕುಟುಂಬದ ಪರವಾಗಿ ಮಂದಿರದ ಜೀರ್ಣೋದ್ಧಾರಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದರು. ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿ ಅವರ ಕುಟುಂಬ ಪರಿವಾರಕ್ಕೆ ದೇವರ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಲಾಯಿತು.
ಅಧ್ಯಕ್ಷ ಜಗನ್ನಾಥ ಪಿ. ಪುತ್ರನ್ ಮಾತನಾಡಿ, ಮಂದಿರದ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಮುಂಬಯಿ ಮನಪಾ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಶೀಘ್ರದಲ್ಲೇ ಅದರ ಫಲಿತಾಂಶ ಬರಬಹುದು. ಕೋವಿಡ್ ಮಹಾಮಾರಿಯಿಂದ ಈಗಲೂ ಜನಸಾಮಾನ್ಯರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಸರ್ವರು ಜಾಗ್ರತೆ ವಹಿಸಬೇಕಾದ ಅನಿವಾರ್ಯ ಇದೆ ಎಂದರು.
ಮಂದಿರದ ಮಹಿಳಾ ಭಕ್ತ ಮಂಡಳಿಯವರು ಮಂಡಳಿಗೆ ಕೊಡುಗೆಯಾಗಿ ನೀಡಿದ ಧ್ವನಿವರ್ಧಕವನ್ನು ಮಹಾಸಭೆಯಲ್ಲಿ ಮಂಡಳಿಗೆ ಹಸ್ತಾಂತರಿಸಲಾಯಿತು. ಜಗನ್ನಾಥ ಪಿ. ಪುತ್ರನ್, ಸಂಜೀವ ವಿ. ಚಂದನ್, ವಿ. ಕೆ. ಸುವರ್ಣ, ಲೋಕನಾಥ ಕಾಂಚನ್, ಹರಿಶ್ಚಂದ್ರ ಸಿ. ಕಾಂಚನ್, ಗೋವಿಂದ ಎನ್. ಪುತ್ರನ್, ಶ್ಯಾಮ ಪುತ್ರನ್, ಕೇಶವ ಪುತ್ರನ್, ಅಶೋಕ್ ಸುವರ್ಣ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಲೋಕನಾಥ ಪಿ. ಕಾಂಚನ್ ವಂದಿಸಿದರು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮಹಾಸಭೆ ನಡೆಯಿತು.