Advertisement

Karnataka: ಒಂದೂವರೆ ವರ್ಷದಲ್ಲಿ 142 ಕೋಟಿ ರೂ. ಸೈಬರ್‌ ವಂಚನೆ

06:17 PM Oct 14, 2023 | Team Udayavani |

ಬೆಂಗಳೂರು: ಒಂದೂವರೆ ವರ್ಷದಲ್ಲಿ ರಾಜಧಾನಿ ಬೆಂಗಳೂರಿಗರ 141.94 ಕೋಟಿ ರೂ. ಸೈಬರ್‌ ವಂಚಕರ ಪಾಲಾಗಿರುವುದು ಆತಂಕ ಹುಟ್ಟಿಸಿದೆ.
ಪ್ರತಿ ನಿತ್ಯ ಸರಾಸರಿ 15 ಮಂದಿ ಬೆಂಗಳೂರಿಗರು ಸೈಬರ್‌ ಕಳ್ಳರ ಗಾಳಕ್ಕೆ ಸಿಲುಕಿ ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ವಂಚನೆಗೊಳಗಾದ ಸಾವಿರಾರು ಸಂತ್ರಸ್ತರು ಸೈಬರ್‌ ಕ್ರೈಂ ಠಾಣೆಗೆ ಅಲೆದು ದುಡ್ಡು ಮರಳಿ ಸಿಗುವ ನಿರೀಕ್ಷೆಯನ್ನು ಕಳೆದುಕೊಂಡಿದ್ದಾರೆ. ಬೆಂಗಳೂರೊಂದರಲ್ಲೇ 2022ರಲ್ಲಿ 76.94 ಕೋಟಿ ರೂ. ಹಾಗೂ 2023ರಲ್ಲಿ ಕಳೆದ 6 ತಿಂಗಳಿನಲ್ಲೇ 65 ಕೋಟಿ ರೂ. ಸೈಬರ್‌ ಕಳ್ಳರ ಪಾಲಾಗಿದೆ.

Advertisement

ಇತ್ತ ಎಫ್ಐಆರ್‌ ದಾಖಲಿಸಿಕೊಂಡಿರುವ ಖಾಕಿ ಕಾರ್ಯಾಚರಣೆ ನಡೆಸದೇ ಸೈಲೆಂಟ್‌ ಆಗಿದ್ದು, ಸಂತ್ರಸ್ತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಸಿಲಿಕಾನ್‌ ಸಿಟಿಯಲ್ಲಿ 2017ರಿಂದ ಈಚೆಗೆ 50,027 ಸೈಬರ್‌ ವಂಚನೆಗಳು ನಡೆದರೂ ಶಿಕ್ಷೆಯಾಗಿರುವುದು ಕೇವಲ 26 ವಂಚಕರಿಗೆ ಮಾತ್ರ.

ಏನಿದು ಪಾರ್ಟ್‌ ಟೈಂ ಜಾಬ್‌ ವಂಚನೆ?
ಬೆಂಗಳೂರಿನಲ್ಲಿ ಕಳೆದ 4 ತಿಂಗಳಿಂದ ಪಾರ್ಟ್‌ ಟೈಂ ಉದ್ಯೋಗದ ಹೆಸರಲ್ಲಿ ನಡೆಯುತ್ತಿರುವ ಸೈಬರ್‌ ವಂಚನೆ ಮಿತಿ ಮೀರಿದ್ದು, ಇದರ ಪ್ರಮಾಣ ಶೇ.75ರಷ್ಟಿದೆ ಎಂದು ಸೈಬರ್‌ ಕ್ರೈಂ ಪೊಲೀಸ್‌ ಮೂಲಗಳು ತಿಳಿಸಿವೆ. ಪಾರ್ಟ್‌ ಟೈಂ ಉದ್ಯೋಗ ಕೊಡಿಸುವ ನೆಪದಲ್ಲಿ ಸೈಬರ್‌ ಕಳ್ಳರು ಮೊಬೈಲ್‌ಗೆ ಕಳುಹಿಸುವ ಸಂದೇಶಗಳಿಗೆ ಮರುಳಾಗಿ ಪ್ರತಿಕ್ರಿಯಿಸಿದರೆ ಕೂಡಲೇ ನಿಮ್ಮನ್ನು ಅವರ ಟೆಲಿಗ್ರಾಂ ಗ್ರೂಪೊಂದಕ್ಕೆ ಸೇರಿಸುತ್ತಾರೆ.

ಲಿಂಕ್‌ ಮೂಲಕ ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ನಿಮ್ಮನ್ನು ರಿಜಿಸ್ಟ್ರಾರ್‌ ಮಾಡಿಸುವುದಾಗಿ ಹೇಳುತ್ತಾರೆ. ಇದಕ್ಕೆ ನೀವು ಸಮ್ಮತಿಸಿದರೆ, ತಾವು ಸೂಚಿಸುವ ಖಾತೆಗೆ ಲಕ್ಷಾಂತರ ರೂ. ಜಮೆ ಮಾಡಿದರೆ ಟಾಸ್ಕ್ಗಳ ಮೂಲಕ ಹಣ ದ್ವಿಗುಣಗೊಳಿಸಬಹುದು ಎಂದು ನಂಬಿಸುತ್ತಾರೆ. ದುಡ್ಡು ಪಾವತಿಸಿದ ಕೂಡಲೇ ಕಮಿಷನ್‌ ರೂಪದಲ್ಲಿ ಸ್ವಲ್ಪ ದುಡ್ಡು ನಿಮ್ಮ ಖಾತೆಗೆ ಜಮೆಯಾಗುತ್ತದೆ. ಇದಾದ ಬಳಿಕ ಸೈಬರ್‌ ಕಳ್ಳರು ಅಸಲಿ ಆಟ ಆರಂಭಿಸುತ್ತಾರೆ. ನಿಮ್ಮ ಅಸಲು ದುಡ್ಡು ಡ್ರಾ ಮಾಡಬೇಕಾದರೆ ಇನ್ನಷ್ಟು ಹಣ ಜಮೆ ಮಾಡುವಂತೆ ಪೀಡಿಸಿ ಹಂತ-ಹಂತವಾಗಿ ಲಕ್ಷಾಂತರ ರೂ. ಲಪಟಾಯಿಸುತ್ತಾರೆ. ಇದಾದ 3-4 ದಿನಗಳ ಬಳಿಕ ಸೈಬರ್‌ ಕಳ್ಳರು ಸಂಪರ್ಕಕ್ಕೆ ಸಿಗುವುದಿಲ್ಲ.

ಬೆಂಗಳೂರೇ ಸೈಬರ್‌ ಕಳ್ಳರ ಟಾರ್ಗೆಟ್‌
ಉತ್ತರ ಭಾರತದ ರಾಜಸ್ಥಾನ, ಝಾರ್ಖಂಡ್‌, ಗುಜರಾತ್‌, ಪಶ್ಚಿಮ ಬಂಗಾಲ, ದಿಲ್ಲಿ, ಮುಂಬಯಿ, ಬಿಹಾರ ರಾಜ್ಯಗಳ ಗ್ರಾಮೀಣ ಭಾಗಗಳಲ್ಲೇ ಕುಳಿತುಕೊಂಡು ಆನ್‌ಲೈನ್‌ ಮೂಲಕ ಸೈಬರ್‌ ಕಳ್ಳರು ಬೆಂಗಳೂರಿಗರ ದುಡ್ಡು ದೋಚುವ ಸಂಗತಿ ಜಗಜ್ಜಾಹೀರಾಗಿದೆ. ದೇಶದಲ್ಲೇ ಅತ್ಯಧಿಕ ಟೆಕಿಗಳು, ಖಾಸಗಿ ಕಂಪೆನಿ ಉದ್ಯೋಗಿಗಳನ್ನು ಒಳಗೊಂಡಿರುವ ಐಟಿ-ಬಿಟಿ ಸಿಟಿಯೇ ಇವರ ಹಾಟ್‌ಸ್ಪಾಟ್‌. ಎಂಜಿನಿಯರಿಂಗ್‌, ಎಂ.ಟೆಕ್‌. ಪದವೀಧರರೇ ಈ ಸೈಬರ್‌ ಗ್ಯಾಂಗ್‌ನ ಸೂತ್ರಧಾರರು. ಪಿಯು ವ್ಯಾಸಂಗ ಮೊಟಕುಗೊಳಿಸಿದವರಿಗೆ ತರಬೇತಿ ಕೊಟ್ಟು ಈ ದಂಧೆಗೆ ವೇತನದ ಆಧಾರದಲ್ಲಿ ನೇಮಿಸಿಕೊಳ್ಳುತ್ತಾರೆ. ಸಾಫ್ಟ್ವೇರ್‌ ಎಂಜಿನಿಯರ್‌ಗಳೂ ತಮ್ಮ ಅರಿವಿಗೆ ಬಾರದೇ ಸೈಬರ್‌ ಕಳ್ಳರಿಗೆ ನೆರವಾಗುತ್ತಿದ್ದಾರೆ. ಡಾಟಾ ಅನಲೀಸಿಸ್‌ ಮಾಡಿ ಬೆಂಗಳೂರಿಗರ ಮೊಬೈಲ್‌ ನಂಬರ್‌ ಪತ್ತೆ ಹಚ್ಚಲೆಂದೇ ಸೈಬರ್‌ ಕಳ್ಳರಲ್ಲಿ ಪ್ರತ್ಯೇಕ ತಂಡವಿದೆ. ಕರೆ ಮಾಡಿ ಟ್ರ್ಯಾಪ್‌ ಮಾಡುವುದೇ ಬೇರೆ ತಂಡ ಎಂದು ಸೈಬರ್‌ ಕ್ರೈಂ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

Advertisement

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುವ ವಂಚಕರು
ಬೆಂಗಳೂರು ಪೊಲೀಸರು ಪಾರ್ಟ್‌ ಟೈಂ ಜಾಬ್‌ ವಂಚನೆಯ ಜಾಡು ಹಿಡಿಯುವ ನಿಟ್ಟಿನಲ್ಲಿ ಕೆಲವು ತಿಂಗಳ ಹಿಂದೆ ಕಾರ್ಯಾಚರಣೆಗೆ ಇಳಿದಾಗ ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಸೈಬರ್‌ ಕಳ್ಳರ ಟವರ್‌ ಲೊಕೇಶನ್‌ ಪತ್ತೆಯಾಗಿತ್ತು. ಪೊಲೀಸರು ಜಿಯೋ ಲೊಕೇಶನ್‌ ಮೂಲಕ ಉತ್ತರ ಭಾರತಕ್ಕೆ ತೆರಳಿ ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದರೆ ಈ ಲೊಕೇಶನ್‌ ನಮ್ಮಲ್ಲಿ ಬರುವುದಿಲ್ಲ ಎಂದು ಪಕ್ಕದ ರಾಜ್ಯಗಳತ್ತ ಬೊಟ್ಟು ಮಾಡಿ ಸಾಗಹಾಕಿದ್ದರು. ಇಲ್ಲಿನ ಪೊಲೀಸರು ತಾಂತ್ರಿಕ ತನಿಖೆ ನಡೆಸಿದಾಗ, ವಂಚಕರು ಒಂದು ರಾಜ್ಯದಲ್ಲಿ ನಕಲಿ ದಾಖಲೆ ಮೂಲಕ ಸಿಮ್‌ ಖರೀದಿಸಿ, ಮತ್ತೂಂದು ರಾಜ್ಯದಲ್ಲಿ ಕುಳಿತುಕೊಂಡು ಕೃತ್ಯ ಎಸಗುತ್ತಾರೆ. ಪೊಲೀಸರ ಕಣ್ತಪ್ಪಿಸಲೆಂದೇ ಸೈಬರ್‌ ವಂಚಕರು ಈ ಆಟವಾಡುತ್ತಾರೆ. ಅನಂತರ ಅಲ್ಲಿಂದಲೂ ಪರಾರಿಯಾಗಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಬೆಂಗಳೂರಿನ ಸೈಬರ್‌ ಕ್ರೈಂ ಪ್ರಕರಣಗಳ ಅಂಕಿ-ಅಂಶಗಳು
ವರ್ಷ      ಕೇಸ್‌             ಇತ್ಯರ್ಥ
2017         2,742             895
2018         5252             1,393
2019         10,553          2,602
2020        8892            3,308
2021         6422            2145
2022        9940            1536
2023(ಆ)   6426          19

ಬೆಂಗಳೂರಿನಲ್ಲಿ ಸೈಬರ್‌ ಅಪರಾಧಕ್ಕೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಎಲ್ಲ ಪೊಲೀಸ್‌ ಠಾಣೆಗಳಲ್ಲೂ ದೂರು ನೀಡಲು ಅವಕಾಶ ಒದಗಿಸಲಾಗಿದೆ. ವಂಚನೆಗೊಳಗಾದ ಗಂಟೆಯೊಳಗೆ 1930ಗೆ ಕರೆ ಮಾಡಿ ಮಾಹಿತಿ ನೀಡಿದರೆ ವಂಚನೆಗೊಳಗಾದವರ ದುಡ್ಡನ್ನು ಫ್ರೀಜ್‌ ಮಾಡಬಹುದು. ಟಾಸ್ಕ್ ಮೂಲಕ ಹಣ ದ್ವಿಗುಣಗೊಳಿಸುವ ಸೈಬರ್‌ ವಂಚನೆ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕು.
-ಬಿ.ದಯಾನಂದ್‌, ಬೆಂಗಳೂರು ಪೊಲೀಸ್‌ ಆಯುಕ್ತ.

 

Advertisement

Udayavani is now on Telegram. Click here to join our channel and stay updated with the latest news.

Next