ಬೆಂಗಳೂರು: ನರಗದ ರಸ್ತೆಯಲ್ಲಿ ಗುಂಡಿಗಳಿಂದಾಗಿ ಸಂಚರಿಸುವುದೇ ಕಷ್ಟವಾಗಿದೆ ಅಂತಹ ಸಂದರ್ಭದಲ್ಲಿ 14 ರ ಬಾಲಕನೊಬ್ಬ ಕಾರ್ ಕ್ರೇಜ್‌ಗೆ ಬಿದ್ದು ಸರ್ಕಾರಿ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಅಪಘಾತಕ್ಕೆ ಕಾರಣವಾಗಿದ್ದಾನೆ.
ಸಂಪಂಗಿ ರಾಮನಗರದ 4 ನೇ ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದ್ದು, ಸಫಾಯಿ ಕರ್ಮಾಚಾರಿ ಆಯೋಗದ ಮುಖ್ಯಸ್ಥರ ಕಾರನ್ನು ಬಾಲಕ ಚಲಾಯಿಸುತ್ತಿದ್ದ. ಕಾರು ಅಡ್ಡಾದಿಡ್ಡಿಯಾಗಿ ಚಲಿಸಿ ಗೋಡೆ ಮತ್ತು 2 ಕಾರುಗಳಿಗೆ ಢಿಕ್ಕಿಯಾಗಿದೆ.
ಬಾಲಕ ಸಫಾಯಿ ಕರ್ಮಾಚಾರಿ ಆಯೋಗದ ಮುಖ್ಯಸ್ಥರ ಕಚೇರಿಯ ವಾಚ್‌ಮೆನ್ ಪುತ್ರ ಎಂದು ತಿಳಿದು ಬಂದಿದ್ದು, ತಂದೆಗೆ ತಿಳಿಯದಂತೆ ಕೀ ತೆಗೆದು ಕಾರನ್ನು ರಸ್ತೆಗೆ ಇಳಿಸಿದ್ದ ಎನ್ನಾಲಾಗಿದೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಠಪೂರ್ತಿ ಕುಡಿದ ಅಂಬುಲೆನ್ಸ್ ಚಾಲಕ
ರೋಗಿಗಳ ಜೀವ ಕಾಪಾಡಬೇಕಾಗಿದ್ದ ಅಂಬುಲೆನ್ಸ್ ಚಾಲಕನೊಬ್ಬ ಕಂಠ ಪೂರ್ತಿ ಕುಡಿದು ಚಲಾಯಿಸುತ್ತಿದ್ದುದನ್ನು ಟ್ರಾಫಿಕ್ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮಲ್ಲೇಶ್ವರಂನಿಂದ ಎಲೆಕ್ಟ್ರಾನಿಕ್ ಸಿಟಿಗೆ ತೆರಳುತ್ತಿದ್ದ ಅಂಬುಲೆನ್ಸ್ ತಡೆದು ಪರಿಶೀಲಿಸಿದಾಗ ಚಾಲಕ ಕಂಠಪೂರ್ತಿ ಕುಡಿದಿರುವುದು ಕಂಡು ಬಂದಿದೆ. ಕೂಡಲೇ ಚಾಲಕ ಪೂವಪ್ಪನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.