ಬೆಂಗಳೂರು: ಮೊದಲ ಹಂತದಲ್ಲಿ ಮತದಾನ ನಡೆದ ದಕ್ಷಿಣ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿನ ಒಟ್ಟಾರೆ ಮತದಾನ ಪ್ರಮಾಣದ ಏರಿಳಿತಕ್ಕೆ ಪೂರ್ಣವಿರಾಮ ಸಿಕ್ಕಿದ್ದು, ಅಂತಿಮವಾಗಿ ಸರಾಸರಿ ಶೇ. 68.81ರಷ್ಟು ದಾಖಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಮತ ಪ್ರಮಾಣದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ.
ಈ 14 ಲೋಕಸಭಾ ಕ್ಷೇತ್ರಗಳಲ್ಲಿ 2014ರಲ್ಲಿ ಶೇ.68.68 ರಷ್ಟು ಮತದಾನ ಆಗಿತ್ತು. ಈಗ ಶೇ.68.81ರಷ್ಟು ಆಗಿದೆ. ಅದರಂತೆ ಹಿಂದಿನ ಚುನಾವಣೆಗೆ ಹೋಲಿಸಿದರೆ ಮತ ಪ್ರಮಾಣ ಶೇ.0.13ರಷ್ಟು ಏರಿಕೆ ಕಂಡಿದೆ.
ಮತದಾನ ನಡೆದ 14 ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಮತ ಪ್ರಮಾಣ ಋಣಾತ್ಮಕವಾಗಿದ್ದರೆ, ಉಳಿದ 11 ಕ್ಷೇತ್ರಗಳಲ್ಲಿ ಧನಾತ್ಮಕ ಅಂತರ ಕಂಡಿದೆ. ಕಳೆದ ಬಾರಿಯ ಮತ ಪ್ರಮಾಣಕ್ಕೆ ಹೋಲಿಸಿದರೆ ಮಂಡ್ಯದಲ್ಲಿ ಶೇ.8.76 ರಷ್ಟು ಮತ ಪ್ರಮಾಣ ಏರಿಕೆ ಕಂಡಿದ್ದರೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶೇ. 5.27ರಷ್ಟು ಕಡಿಮೆ ಮತದಾನ ಆಗಿದೆ.
ಲೋಕಸಭಾ ಚುನಾವಣೆಗೂ ವಿಧಾನಸಭೆ ಚುನಾವಣೆಗೂ ಮತದಾರರ ಆಯ್ಕೆ ಮತ್ತು ಆದ್ಯತೆಗಳು ಬೇರೆ ಆಗಿರುತ್ತವೆ. ಎರಡೂ ಚುನಾವಣೆಗಳಿಗೂ “ಓಟಿಂಗ್ ಪ್ಯಾಟರ್ನ್’ ಬದಲಾಗಿರುತ್ತದೆ ಎನ್ನುವುದಕ್ಕೂ ಇಲ್ಲಿ ಪುಷ್ಠಿ ಸಿಕ್ಕಿದೆ. ಈ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ.72.45 ಹಾಗೂ 2018ರಲ್ಲಿ ಶೇ.74.54 ಮತದಾನ ಆಗಿತ್ತು.
ಅಸೆಂಬ್ಲಿ ಕ್ಷೇತ್ರವಾರು ಮತ ಪ್ರಮಾಣ – ಗರಿಷ್ಠ, ಕನಿಷ್ಠ: ಗುರುವಾರ ಮತದಾನ ನಡೆದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸುಮಾರು 108 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಪೈಕಿ ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.86.54ರಷ್ಟು ಮತದಾನ ಆಗಿದ್ದರೆ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.43.64 ರಷ್ಟು ಮತದಾನ ಆಗಿದೆ.
ಒಟ್ಟು 108 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಶೇ.80ಕ್ಕಿಂತ ಹೆಚ್ಚು ಮತದಾನ ಆಗಿದ್ದರೆ, ಏಳು ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಕಡಿಮೆ ಮತದಾನ ನಡೆದಿದೆ. ಉಳಿದ ಕಡೆ ಶೇ. 50ರಿಂದ 79 ಮತದಾನ ದಾಖಲಾಗಿದೆ.
ಕ್ಷೇತ್ರ ಅಂತಿಮ ಮತ ಪ್ರಮಾಣ ಅಂತರ
ಉಡುಪಿ-ಚಿಕ್ಕಮಗಳೂರು ಶೇ.75.85 1.29
ಹಾಸನ ಶೇ.73.39 3.79
ದಕ್ಷಿಣ ಕನ್ನಡ ಶೇ. 77.69 0.54
ಚಿತ್ರದುರ್ಗ ಶೇ. 70.59 4.52
ತುಮಕೂರು ಶೇ.77.11 4.54
ಮಂಡ್ಯ ಶೇ.80.24 8.76
ಮೈಸೂರು ಶೇ.68.85 1.55
ಚಾಮರಾಜನಗರ ಶೇ.73.45 0.60
ಬೆಂಗಳೂರು ಗ್ರಾಂ ಶೇ.64.09 -2.36
ಬೆಂಗಳೂರು ಉತ್ತರ ಶೇ.51.26 -5.27
ಬೆಂಗಳೂರು ಕೇಂದ್ರ ಶೇ.50.84 -4.80
ಬೆಂಗಳೂರು ದಕ್ಷಿಣ ಶೇ.54.02 -1.55
ಚಿಕ್ಕಬಳ್ಳಾಪುರ ಶೇ.76.75 0.43
ಕೋಲಾರ ಶೇ.75.94 0.29