Advertisement

14 ನಿರಾಶ್ರಿತರಿಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

09:33 PM Aug 15, 2019 | Team Udayavani |

ಕೊಳ್ಳೇಗಾಲ: ಕಾವೇರಿ ಪ್ರವಾಹಕ್ಕೆ ಸಿಲುಕಿ ತಾಲೂಕು ಆಡಳಿತ ತೆರೆದಿರುವ ಪುನರ್‌ವಸತಿ ಕೇಂದ್ರದಲ್ಲಿ 14 ಗ್ರಾಮಸ್ಥರಿಗೆ ಅನಾರೋಗ್ಯ ನಿಮಿತ್ತ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದಾರೆ.

Advertisement

ಇತ್ತೀಚಿಗೆ ಹನೂರು ಸಮೀಪ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯ ವಿಷ ಪ್ರಸಾದ ಸೇವನೆಯಿಂದ ಹಲವರು ಮೃತಪಟ್ಟು, ಕೆಲವರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆಯ ಮಾದರಿಯಲ್ಲಿ ಪುನರ್‌ ವಸತಿ ಕೇಂದ್ರದಲ್ಲಿರುವ ಗ್ರಾಮಸ್ಥರಿಗೆ ಅನಾರೋಗ್ಯ ಉಂಟಾಗಿರುವುದೇ ಎಂದು ಭಯಭೀತಗೊಂಡು ಶಾಸಕ ಎನ್‌.ಮಹೇಶ್‌ ದಿಢೀರನೇ ಆಸ್ಪತ್ರೆಗೆ ಭೇಟಿ ನೀಡಿ ದಾಖಲಾಗಿರುವ ರೋಗಿಗಳ ಆರೋಗ್ಯ ವಿಚಾರಣೆ ಮಾಡಿದರು.

ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿದ ಪರಿಣಾಮ ತಾಲೂಕಿನ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೆ ಸೇರಿದಂತೆ ವಿವಿಧ ಗ್ರಾಮಸ್ಥರಿಗೆ ತಾಲೂಕು ಆಡಳಿತ ವರ್ಗಿಕೃತ ಹಾಸ್ಟೆಲ್‌, ಮಹದೇಶ್ವರ ಕಲ್ಯಾಣ ಮಂಟಪ, ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯ, ಮುಳ್ಳೂರು ಸರ್ಕಾರಿ ಶಾಲೆಗಳಲ್ಲಿ ಪುನರ್‌ ವಸತಿ ಕೇಂದ್ರವನ್ನು ತೆರೆಯಲಾಗಿತ್ತು.

ಹಳೇ ಅಣಗಳ್ಳಿ ಗ್ರಾಮಸ್ಥರಿಗಾಗಿ ತೆರೆದಿರುವ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯದಲ್ಲಿರುವ ಸುಮಾರು 14 ಜನರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲರನ್ನು ಪ್ರತ್ಯೇಕ ಕೊಠಡಿಗಳಲ್ಲಿ ದಾಖಲು ಮಾಡಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕಿತ್ಸೆ ಪಡೆದು ತೆರಳಿದರು: ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎನ್‌.ಮಹೇಶ್‌ ಮಾತನಾಡಿ, 14 ಜನರಿಗೆ ಸಕ್ಕರೆ ಕಾಯಿಲೆ, ರಕ್ತದ ಒತ್ತಡ, ಜ್ವರ, ನೆಗಡಿ, ಮೈಕೈಬಾರ ಇನ್ನಿತರ ಕಾಯಿಲೆಯಿಂದಾಗಿ ಅನಾರೋಗ್ಯ ಉಂಟಾಗುತ್ತಿದ್ದಂತೆ ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 14 ಜನರ ಪೈಕಿ 6 ಮಹಿಳೆಯರು, 5 ಪುರುಷರು ತಪಾಸಣೆಯ ಬಳಿಕ ಹೊರ ರೋಗಿಗಳಾಗಿ ಮೂವರು ಚಿಕಿತ್ಸೆ ಪಡೆದು, ಪುನರ್‌ ವಸತಿ ಕೇಂದ್ರಕ್ಕೆ ತೆರಳಿದ್ದಾರೆಂದು ಹೇಳಿದರು.

Advertisement

ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಿ, ವಿಶೇಷ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಅವರಿಗೆ ಪುನರ್‌ ವಸತಿ ಕೇಂದ್ರದಲ್ಲಿ ನೀಡುತ್ತಿರುವ ಆಹಾರದಿಂದ ಯಾವುದೇ ತರಹದ ತೊಂದರೆ ಎದುರಾಗಿಲ್ಲ ಎಂದು ವೈದ್ಯರು ದೃಢಪಡಿಸಿದ್ದು, ಎಲ್ಲರೂ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಪ್ರವಾಹದಿಂದ 10 ಕೋಟಿಯಷ್ಟು ನಷ್ಟ ಉಂಟಾಗಿದೆ. ರೈತರು ಬೆಳೆದ ಬೆಳೆಗೆ 7 ಕೋಟಿ, ಸೇತುವೆ 2 ಕೋಟಿ, ಮನೆ ಒಂದು ಕೋಟಿ ಎಂದು ಅಂದಾಜು ಮಾಡಲಾಗಿದೆ. ಹಣ ಬರುತ್ತಿದ್ದಂತೆ ಎಲ್ಲಾ ಕೆಲಸಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲು ಅಧಿಕಾರಿಗಳು ಸಿದ್ಧವಾಗಿದ್ಧಾರೆಂದರು.

ಈಗಾಗಲೇ ಪ್ರವಾಹ ಪೀಡಿತ ಗ್ರಾಮಗಳ ಸ್ವಚ್ಛತಾ ಕಾರ್ಯವನ್ನು ಅಧಿಕಾರಿಗಳು ತಂಡೋಪತಂಡವಾಗಿ ಮಾಡುತ್ತಿದ್ದು, ಪ್ರವಾಹದ ಹಾನಿಯನ್ನು ಸಹ ಅಂದಾಜು ವೆಚ್ಚ ಮಾಡುತ್ತಿದ್ದಾರೆ. ಗ್ರಾಮದಲ್ಲಿ ನೆಲೆಸಲು ಸೂಕ್ತವೆಂದು ಅಧಿಕಾರಿಗಳು ಮಾಹಿತಿ ನೀಡಿದ ಬಳಿಕ ಪುನರ್‌ ವಸತಿ ಕೇಂದ್ರದಲ್ಲಿರುವವರನ್ನು ಸಂಬಂಧಿಸಿದ ಗ್ರಾಮಗಳಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಪೋನ್‌ ಕದ್ದಾಲಿಕೆ: ಮೈತ್ರಿ ಸರ್ಕಾರದಲ್ಲಿ ಪೋನ್‌ ಕದ್ದಾಲಿಕೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಪೋನ್‌ ಕದ್ದಾಳಿಕೆ ಮಹಾ ಅಪರಾಧ. ಇದರ ಬಗ್ಗೆ ಸರ್ಕಾರ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕರು ಹೇಳಿದರು. ವೈದ್ಯರಾದ ಡಾ.ತ್ರೀವೇಣಿ, ಡಾ.ವೇಣುಗೋಪಾಲ್‌, ಡಾ.ಗೋಪಾಲ್‌, ನಗರಸಭಾ ಸದಸ್ಯ ನಾಸೀರ ಷರೀಫ್, ಪ್ರಕಾಶ್‌, ಮುಖಂಡರಾದ ಉಪ್ಪಾರ್‌ ಸೋಮಣ್ಣ, ಶಿವಕುಮಾರ್‌, ರಾಜೇಂದ್ರ, ಸೈಮನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next