ಜೋಯಿಡಾ: ತಾಲೂಕಿನಾದ್ಯಂತ ಕಳೆದ 15 ದಿನಗಳಿಂದ ಸುರಿದ ಮಳೆಗೆ ನದಿಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಹೊಲಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರೆ, ಹಲವೆಡೆ ಗಾಳಿ ಮಳೆಯಿಂದಾಗಿ ಅನಾಹುತಗಳು ಸಂಭವಿಸಿವೆ.
ಸೂಪಾ ಹಿನ್ನೀರ ಪ್ರದೇಶದಲ್ಲಿ ಸೋಮ ವಾರ 97.5 ಮಿ.ಮೀ. ಮಳೆ ದಾಖಲಾಗಿದ್ದು, ಇದು ಕಳೆದ ವರ್ಷಕಿಂತ ಹೆಚ್ಚಾಗಿದೆ. ವರ್ಷದ ಅತಿಹೆಚ್ಚು ಮಳೆ ಎಂದರೆ ತಪ್ಪಾಗಲಾರದು. ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಹಾಮಳೆಯಿಂದಾಗಿ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದೆ. ಕಳೆದ ಶನಿವಾರ 32474 ಕ್ಯೂಸೆಕ್ ಒಳಹರಿವಿದ್ದಿದ್ದು, ರವಿವಾರ 36884 ಕ್ಯೂಸೆಕ್‌ಗೆ ಏರಿದರೆ, ಸೋಮವಾರ 53197 ಕ್ಯೂಸೆಕ್‌ಗೆ ಏರುವ ಮೂಲಕ ದಿನನಿತ್ಯ ಒಳಹರಿವಿನ ಪ್ರಮಾಣ 10ರಿಂದ 15 ಸಾವಿರ ಕ್ಯೂಸೆಕ್‌ಗೆ ಹೆಚ್ಚುತ್ತಾ ಸಾಗಿದೆ. ಈಗಾಗಲೇ 550 ಮೀ. ದಾಟಿರುವ ಜಲಾಶಯ ಮಟ್ಟ ಕೇವಲ 13 ಮೀ. ಎತ್ತರ ಬಾಕಿ ಉಳಿದಿದೆ. ಇದೇರೀತಿ ಸೂಪಾ ಹಿನ್ನೀರಿನ ಭಾಗದಲ್ಲಿ ಮಳೆ ಪ್ರಮಾಣ ಏರಿಕೆಯಾದರೆ ಈ ತಿಂಗಳ ಅಂತ್ಯದಲ್ಲಿ ಸೂಪಾ ಮತ್ತೆ ತುಂಬಿ ಹರಿಯುವ ಎಲ್ಲ ಲಕ್ಷಣಗಳು ಕಾಣಲಿದೆ.
ತುಂಬಿದರೆ ದಾಖಲೆ: ಪ್ರತಿ ಹತ್ತು ವರ್ಷಕ್ಕೊಮ್ಮೆ ತುಂಬುವ ಈ ಜಲಾಶಯ 1994, 2006ರಲ್ಲಿ ಸಂಪೂರ್ಣ ತುಂಬಿಕೊಂಡು ಹೆಚ್ಚಿನ ನೀರು ಹೊರಬಿಡಲಾಗಿತ್ತು. ನಂತರ 2010ರಲ್ಲಿ ತುಂಬಿ ಕ್ರೀಸ್‌ಗೇಟ್ ಪರೀಕ್ಷಾರ್ಥ ತೆರೆದು ಹೊರಬಿಡುವ ಸಂದರ್ಭದಲ್ಲಾಗಲೆ ಮಳೆ ಕಡಿಮೆಯಾಗಿರುವುದರಿಂದ ನೀರು ಹೊರಬಿಡುವುದನ್ನು ಸ್ಥಗಿತಗೊಳಿಸಲಾ ಯಿತು. ಅದಾದನಂತರ ಕಳೆದ ವರ್ಷ 2018ರಂದು ಇದೇ ತಿಂಗಳ ಆ. 28ರಂದು ಮತ್ತೆ ತುಂಬಿದ ಸೂಪಾ ಜಲಾಶಯಕ್ಕೆ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಬಾಗಿನ ಅರ್ಪಿಸಿ ನೀರನ್ನು ಹೊರ ಬಿಡಲಾಗಿತ್ತು. ಈ ವರ್ಷ ಇಂದಿನವರೆಗೆ ಕಳೆದ ಬಾರಿಗಿಂತ ಮಳೆ ಉತ್ತಮವಾಗಿದ್ದು, ಸೂಪಾ ನೀರಿನಮಟ್ಟ ಕೂಡಾ ಕಳೆದ ಈ ಅವಧಿಗಿಂತ ಕೊಂಚ ಎತ್ತರದಲ್ಲಿದೆ. ಈ ಬಾರಿ ತುಂಬಿದ್ದರೆ ಸತತ ಎರಡನೇ ಬಾರಿಗೆ ದಾಖಲೆ ಬರೆಯಲಿದೆ.
Advertisement
ಸೂಪಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಾಸಾಗಿದ್ದು, ಸತತ ಎರಡನೇ ಬಾರಿಗೆ ತುಂಬಿ ದಾಖಲೆ ಬರೆಯುವ ಎಲ್ಲ ಲಕ್ಷಣ ಗೋಚರಿಸುತ್ತಿವೆ. ಏಷ್ಯಾ ಖಂಡದ ಅತಿ ಎತ್ತರದ ಜಲಾಶಯಗಳಲ್ಲಿ ಒಂದಾದ ಸೂಪಾ ಜಲಾಶಯ ಅ. 5ರಂದು 550 ಮೀ. ತುಂಬುವ ಮೂಲಕ 564 ಮೀ ಗರಿಷ್ಠ ಮಟ್ಟ ತಲುಪುವ ನಿರೀಕ್ಷೆ ಮೂಡಿಸಿದೆ.
ಜಿಲ್ಲೆಯಲ್ಲಿ 73.2 ಮಿಮೀ ಮಳೆ: ಸೋಮವಾರ ಬೆಳಗ್ಗೆ 8ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟೂ 805 ಮಿಮೀ ಮಳೆಯಾಗಿದ್ದು, ಸರಾಸರಿ 73.2 ಮಿಮೀ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 609 ಮಿಮೀ ಇದ್ದು, ಇದುವರೆಗೆ ಸರಾಸರಿ 176.1 ಮಿಮೀ ಮಳೆ ದಾಖಲಾಗಿದೆ. ಈ ಅವಧಿಯಲ್ಲಿ ಅಂಕೋಲಾದಲ್ಲಿ 70.4 ಮಿ.ಮೀ, ಭಟ್ಕಳ 33.8, ಹಳಿಯಾಳ 49.4, ಹೊನ್ನಾವರ 69.1, ಕಾರವಾರ 76.7, ಕುಮಟಾ 28.6, ಮುಂಡಗೋಡ 30.8, ಸಿದ್ದಾಪುರ 125.2, ಶಿರಸಿ 135, ಜೋಯಿಡಾ 77.6, ಯಲ್ಲಾಪುರ 108.4 ಮಿ.ಮೀ ಮಳೆಯಾಗಿದೆ.
ಸೂಪಾ ಜಲಾಶಯದ ಹಿನ್ನೀರ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದೇ ರೀತಿ ಮಳೆಯಾದರೆ ಈ ತಿಂಗಳ ಕೊನೆಯವರೆಗೆ ಸೂಪಾ ಮತ್ತೆ ತುಂಬಿ ತುಳುಕುವ ನಿರೀಕ್ಷೆಯಿದೆ. ಹೀಗಾಗಿ ರಾಜ್ಯಕ್ಕೆ ಬೆಳಕು ನೀಡುವ ಶಕ್ತಿ ಹೆಚ್ಚಲಿ, ಸತತ ಎರಡನೇ ಬಾರಿಗೆ ತುಂಬಿ ತುಳುಕುವ ಮೂಲಕ ದಾಖಲೆ ಬರೆಯುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. • ಲಿಂಗಣ್ಣನವರ, ಮುಖ್ಯ ಅಭಿಯಂತರ ಕೆಪಿಸಿ ಗಣೇಶಗುಡಿ
ಕಾನೇರಿ ಭರ್ತಿಗೆ ಕ್ಷಣಗಣನೆ:
ಸೂಪಾ ಜಲಾಶಯದ ಹಿನ್ನೀರಿನ ಜಲಮೂಲವಾದ ಕುಂಡಲ್ ಬಳಿಯ ಕಾನೇರಿ ಜಲಾಶಯ ಈಗಾಗಲೇ 610 ಅಡಿ ತುಂಬಿದ್ದು (ಗರಿಷ್ಠ ಮಟ್ಟ 615 ಅಡಿ) ಇದರ ಹರಿವಿನ ಪ್ರಮಾಣ ಕೂಡಾ ಏರಿಕೆಯಾಗಿದೆ. ಕಳೆದ ಜ. 8ರಂದು ಕಾನೇರಿ ಕೇಳಸ್ಥರದ ಗ್ರಾಮಗಳಿಗೆ ಮೊದಲ ಮುನ್ನೆಚ್ಚರಿಕೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿ ಬೊಮ್ಮನಳ್ಳಿ, ಕೊಡಸಳೀ ಡ್ಯಾಮ್ ಕೂಡಾ ಭರ್ತಿಯಾಗಿದ್ದು, ಇನ್ನು ಸೂಪಾ ತುಂಬುವ ನಿರೀಕ್ಷೆ ಜನರಲ್ಲಿ ಮನೆ ಮಾಡಿದೆ.
ತುಂಬಿ ಹರಿದ ಉಪನದಿಗಳು:
ಸೂಪಾ ಜಲಮೂಲದ ಕಾಳಿಯ ಉಪನದಿಗಳಾದ ಪಾಂಡ್ರಿ,ನಾಗಿ, ನಾಸಿ, ಕಾನೇರಿ ಈ ಪಂಚ ನದಿಗಳು ಈಗಾಗಲೇ ಬಿದ್ದ ಮಳೆಗೆ ಉಕ್ಕಿ ಹರಿಯುತ್ತಿದೆ. ಜಲಾಶಯದ ಮೇಲ್ಭಾಗ ರಾಮನಗರ, ಲೋಂಡಾ, ಖಾನಾಪುರಗಳಲ್ಲಿ ಈ ಬಾರಿ ಮಳೆ ರಭಸದಿಂದ ಸುರಿಯುತ್ತಿದ್ದು, ಪಾಂಡ್ರಿ ನದಿ ತುಂಬಿ ಹರಿಯುತ್ತಿದೆ. ಕುಂಡಲ್, ಡಿಗ್ಗಿ ಸುತ್ತಲ ಭಾಗದಲ್ಲಿ ಮಳೆ ರಭಸ ಪಡೆದಿದ್ದು, ಕಾಳಿ ಹಾಗೂ ಉಪನದಿಗಳು ಕೂಡಾ ವೇಗ ಪಡೆದುಕೊಂಡಿದೆ. ಇದೇ ರೀತಿ ತಿಂಗಳುಗಳ ಕಾಲ ನಿರಂತರ ಮಳೆ ಸುರಿದರೆ ಸೂಪಾ ತುಂಬುವ ಎಲ್ಲ ಲಕ್ಷಣಗಳು ಗೋಚರಿಸಲಿವೆ.