Advertisement
ಘಟನೆಗೆ ಸಂಬಂಧಿಸಿ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಉಡುಪಿ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಆರೋಪಿಗಳಿಗೆ ಚಿಕಿತ್ಸೆ ನೀಡಿದ್ದು, ಪೊಲೀಸರಿಗೆ ಈ ಕುರಿತು ಮಾಹಿತಿ ನೀಡದ ಕಾರಣಕ್ಕೆ ಕಾಪು ತಾಲೂಕಿನ ಪಡುಬಿದ್ರಿಯ ಖಾಸಗಿ ಆಸ್ಪತ್ರೆಯೊಂದರ ವಿರುದ್ಧವೂ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Related Articles
ಗ್ಯಾಂಗ್‌ವಾರ್‌ಗೆ ಸಂಬಂಧಿಸಿ ಈಗಾಗಲೇ ಒಂದು ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಸೆರೆ ಹಿಡಿದು ತನಿಖೆ ನಡೆಸಿದ ಬಳಿಕ ಇದಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಕೊಲೆ ಯತ್ನದ ಸಂಚುಮೊಹಮ್ಮದ್ ಸಕ್ಲೈನ್‌ನನ್ನು ಕೊಲ್ಲುವ ಉದ್ದೇಶದಿಂದಲೇ ಕೃತ್ಯ ನಡೆಸಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ. ಹೂಡೆಯ ಮೊಹಮ್ಮದ್ ಸಕ್ಲೈನ್ ತನ್ನ ಸ್ನೇಹಿತರಾದ ಮೊಹಮ್ಮದ್ ಆಶೀಕ್, ತೌಫಿಕ್, ಅರ್ಷದ್ ಜತೆಗೂಡಿ ಇಸಾಕ್‌ನ ಸ್ವಿಫ್ಟ್ ಕಾರಿನಲ್ಲಿ ಮತ್ತು ಉಳಿದ ಸ್ನೇಹಿತರಾದ ಶಾಹಿದ್ ಹಾಗೂ ರಾಕೀಬ್ ಬೈಕ್‌ನಲ್ಲಿ ಮಣಿಪಾಲದಿಂದ ಕಾಪು ಕಡೆಗೆ ಹೋಗುತ್ತಿ¨ªಾಗ ಮೇ 18ರ ತಡರಾತ್ರಿ ಶಾರದಾ ಕಲ್ಯಾಣ ಮಂಟಪದ ಬಳಿ ಅವರ ಹಿಂದಿನಿಂದ ಗ್ರೇ ಬಣ್ಣದ ಕಾರಿನಲ್ಲಿ ಬಂದ ಆರೋಪಿಗಳಾದ ಮೊಹಮ್ಮದ್ ಶರೀಫ್, ಆಲ್ಪಾಜ್, ಮಜೀದ್ ಅವರು ಅಡ್ಡ ಹಾಕಿ ನಿಲ್ಲಿಸಿ ಕೃತ್ಯ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮೊಹಮ್ಮದ್ ಶರೀಫ್ ತಲವಾರು, ದೊಣ್ಣೆಯನ್ನು ಹಿಡಿದುಕೊಂಡು ಮೊಹಮ್ಮದ್ ಸಕ್ಲೈನ್‌ನನ್ನು ಕೊಲ್ಲುವ ಉದ್ದೇಶದಿಂದ ಹಲ್ಲೆ ನಡೆಸಿದ್ದ. ಈ ವೇಳೆ ತಪ್ಪಿಸಲು ಹೋದಾಗ ಮೊಹಮ್ಮದ್ ಸಕ್ಲೈನ್‌ನ ಕಾಲಿಗೆ ತಾಗಿ ಗಾಯವಾಗಿದೆ. ಮೊಹಮ್ಮದ್ ಸಕ್ಲೈನ್ ಅವರ ಸ್ನೇಹಿತರಿಗೂ ಆರೋಪಿಗಳು ಬೈದು ಕೈಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ಬಂದ ಕಾರಿನಲ್ಲಿ ಪರಾರಿಯಾಗಿದ್ದಾರೆ. ಪ್ರತಿದೂರು
ಕಾಪುವಿನ ಮೊಹಮ್ಮದ್ ಶರೀಫ್ ಹಾಗೂ ಆರೋಪಿ ಮೊಹಮ್ಮದ್ ಆಶೀಕ್ ಸ್ನೇಹಿತರಾಗಿದ್ದು, ಆರೋಪಿ ಆಶೀಕ್ ಜೈಲಿನಲ್ಲಿದ್ದಾಗ ಶರೀಫ್ ಸಹಾಯ ಮಾಡಿದ್ದು ಆರೋಪಿಯು 2 ತಿಂಗಳ ಹಿಂದೆ ಜೈಲಿನಿಂದ ಊರಿಗೆ ಬಂದಿದ್ದ. ಈ ನಡುವೆ ಆಶೀಕ್‌ನನ್ನು ಮಂಗಳೂರು ಪೊಲೀಸರು ಹುಡುಕುತ್ತಿದ್ದ ಸಮಯ ಶರೀಫ್ನ ಸ್ನೇಹಿತ ಆರೋಪಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ವಿಚಾರದಲ್ಲಿ ಅವರೊಳಗೆ ಜಗಳ ಉಂಟಾಗಿ ದ್ವೇಷ ಬೆಳೆದಿತ್ತು. ಶರೀಫ್ಗೆ
ಆರೋಪಿಯು ಮಣಿಪಾಲದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಇದನ್ನು ಪೊಲೀಸರಿಗೆ ತಿಳಿಸುವ ಉದ್ದೇಶದಿಂದ ಮೇ 18ರಂದು ಶರೀಫ್ ಸ್ವಿಫ್ಟ್ ಕಾರಿನಲ್ಲಿ ಅಲ್ಪಾಜ್ ಮತ್ತು ಅಬ್ದುಲ್ ಮಜೀದ್‌ನೊಂದಿಗೆ ಸೇರಿ ಕಾಪುವಿನಿಂದ ಮಣಿಪಾಲಕ್ಕೆ ಬಂದಿದ್ದ. ಇಂದ್ರಾಳಿಯಲ್ಲಿ ಇಸಾಕ್ ಶರೀಫ್ನ ಕಾರು ನೋಡಿ ಅವರನ್ನು ಕೊಲ್ಲುವ ಉದ್ದೇಶದಿಂದ ತನ್ನ ಕಾರನ್ನು ಅವರ ಕಾರಿಗೆ ಢಿಕ್ಕಿ ಹೊಡೆಸಿದ್ದ. ಅನಂತರ ಕಾರಿನಲ್ಲಿದ್ದ ಉಳಿದ ಆರೋಪಿಗಳಾದ ಆಶೀಕ್, ಶಾಹಿದ್, ಸಿಯಾಜ್, ರಾಕೀಬ್ ಹಾಗೂ ಸಕ್ಲೈನ್ ತಲವಾರುಗಳನ್ನು ಹಿಡಿದುಕೊಂಡು ಬಂದು ಶರೀಫ್ ಹಾಗೂ ಅವನ ಸ್ನೇಹಿತರಿಗೆ ಬೀಸಿದ್ದು ಈ ವೇಳೆ ಅವರೆಲ್ಲ ತಪ್ಪಿಸಿಕೊಂಡು ಕಾರಿನಲ್ಲಿ ಉಡುಪಿಯತ್ತ ಹೋದಾಗ ಆರೋಪಿತರು ಕಾರನ್ನು ಹಿಂಬಾಲಿಸಿಕೊಂಡು ಬಂದು ಪುನಃ ಮೊಹಮ್ಮದ್ ಶರೀಫ್ ಅವರ ಕಾರಿಗೆ ಢಿಕ್ಕಿ ಹೊಡೆದು ಕೊಲ್ಲಲು ಪ್ರಯತ್ನಿಸಿದ್ದಾರೆ. ಈ ವೇಳೆ ಶರೀಫ್ ತನ್ನನ್ನು ರಕ್ಷಿಸಿಕೊಳ್ಳಲು ಕಾರನ್ನು ತಡೆಯಲು ಹೋದಾಗ ಇಸಾಕ್, ಶರೀಫ್ ಗೆ ಕಾರನ್ನು ಢಿಕ್ಕಿ ಹೊಡೆಸಿ ಕೆಳಕ್ಕೆ ಬೀಳಿಸಿದ್ದಾನೆ. ಆ ವೇಳೆ ಶರೀಫ್ನಿಗೆ ಸಕ್ಲೈನ್ ತಲವಾರಿನಿಂದ ಹೊಡೆದಿದ್ದಾನೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ. ವೀಡಿಯೋ ಆಧಾರದ ಮೇಲೆ ದೂರು
ಘಟನೆಯ ದೃಶ್ಯಾವಳಿಗಳು ವೈರಲ್ ಆಗುತ್ತಿದ್ದಂತೆ ಉಡುಪಿ ನಗರ ಠಾಣೆಯ ನಿರೀಕ್ಷಕ ಶ್ರೀಧರ ವಸಂತ ಸತಾರೆ ಅವರು ಸಿಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಸಾರ್ವ ಜನಿಕರಿಂದ ಮಾಹಿತಿ ಪಡೆದುಕೊಂಡು ಅದರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಮಾರಕ ಆಯುಧದ ಮೂಲಕ ಹಲ್ಲೆ, ಗುಂಪು ಹಲ್ಲೆ, ಕೈಯಲ್ಲಿ ಹೊಡೆದಾಟ, ರಕ್ತ ಬರುವಂತೆ ಹೊಡೆದಿರುವುದು, ಮಾರಣಾಂತಿಕ ಹಲ್ಲೆ, 5ಕ್ಕಿಂತ ಅಧಿಕ ಮಂದಿ ಗುಂಪು ಹಲ್ಲೆ, ಅಡ್ಡಗಟ್ಟಿ ಹಲ್ಲೆ ಸಹಿತ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಹೆದ್ದಾರಿಯಲ್ಲಿ ಭೀತಿ ಹುಟ್ಟಿಸಿದ್ದರು…
ಘಟನೆಯಲ್ಲಿ ಭಾಗಿಯಾದ ಆರೋಪಿಗಳೆಲ್ಲರೂ ಮೇ 18ರ ರಾತ್ರಿ 11.30ರ ಬಳಿಕ ಉಡುಪಿ ಹಾಗೂ ಮಣಿಪಾಲ ರಸ್ತೆಯಲ್ಲಿ ಯರ್ರಾಬಿರ್ರಿ ವಾಹನ ಚಲಾಯಿಸಿಕೊಂಡು ಇತರ ವಾಹನಗಳ ಚಾಲಕರಲ್ಲಿ ಭೀತಿ ಹುಟ್ಟಿಸಿದ್ದರು.
ತಂಡವೊಂದು ಮತ್ತೂಂದು ತಂಡವನ್ನು ಹುಡುಕುವ ವೇಳೆ ವೇಗವಾಗಿ ವಾಹನ ಓಡಿಸಿ ಓವರ್‌ಟೇಕ್ ಮಾಡಿ ಕ್ಷಣಾರ್ಧದಲ್ಲಿ ನಿಂತು ಅನಂತರ ಬಂದ ದಾರಿಯಲ್ಲಿಯೇ ವಾಪಸು ಧಾವಿಸಿದ ವೇಳೆ ಎರಡು-ಮೂರು ವಾಹನಗಳ ಚಾಲಕರು ಅಪಾಯಕ್ಕೆ ಸಿಲುಕಿದ್ದರು. ತಡರಾತ್ರಿ ಯಾಗಿದ್ದರಿಂದ ಏನೂ ಮಾಡಲಾಗದೆ ನಾವು ಸುಮ್ಮನೆ ಹೋಗುವಂತಾಯಿತು ಎಂದು ಚಾಲಕರೇ “ಉದಯವಾಣಿ’ಗೆ ಕರೆ ಮಾಡಿ ದೂರು ಹೇಳಿಕೊಂಡಿದ್ದಾರೆ. ವಾಹನಗಳನ್ನು ಚೇಸ್ ಮಾಡುವುದು, ಯೂಟರ್ನ್ ಹೊಡೆದು ಬರುವುದು ಸಹಿತ ಇವರ ಉಪಟಳ ವೀಡಿಯೋ ಘಟನೆಗೂ ಕೆಲವು ಗಂಟೆಗಳ ಮೊದಲೇ ನಡೆಯುತ್ತಿತ್ತು. ಇಂದ್ರಾಳಿ ರೈಲ್ವೇ ನಿಲ್ದಾಣದವರೆಗೂ ಆರೋಪಿಗಳು ತೆರಳಿ ಮತ್ತೆ ವಾಪಸು ಬಂದಿದ್ದರು ಎನ್ನಲಾಗಿದೆ. ಮತ್ತೆ ಸಕ್ರಿಯವಾಯಿತೇ ಗ್ಯಾಂಗ್?
ಉಡುಪಿ: ಜಿಲ್ಲೆ ಸಹಿತ ಹೊರಜಿಲ್ಲೆಗಳಲ್ಲಿಯೂ ನೆಟ್‌ವರ್ಕ್ ಹೊಂದಿರುವ ಟೀಂ ಗರುಡದ ಉದ್ದೇಶವೇ ಸುಲಭದಲ್ಲಿ ಹಣ ಗಳಿಸಿ ಐಶಾರಾಮದ ಜೀವನ ನಡೆಸುವುದು. ಬಹುತೇಕ ಯುವಕರ ತಂಡವನ್ನೇ ಹೊಂದಿರುವ ಈ ಗ್ಯಾಂಗ್ ಗಾಂಜಾ, ಮಾದಕ ವಸ್ತುಗಳ ಪೂರೈಕೆ, ದರೋಡೆ, ಹಲ್ಲೆ, ಕಳ್ಳತನ ಪ್ರಕರಣಗಳಲ್ಲಿ ಸಕ್ರಿಯವಾಗಿದೆ. 2022ರಲ್ಲಿ ಬ್ರಹ್ಮಾವರದ ಹಂದಾಡಿ ಗ್ರಾಮದಲ್ಲಿ ದನಕಳವು ಪ್ರಕರಣ, ಬೆಂಗಳೂರಿನ ಕೊತ್ತನೂರು, ಮಂಗಳೂರಿನ ಕಂಕನಾಡಿ, ಚಿಕ್ಕಮಗಳೂರಿನ ಗೋಣಿಬೀಡು, ದಾವಣಗೆರೆಯ ಆರ್‌ಎಂಸಿ ಯಾರ್ಡ್, ಕೋಟ ಪೊಲೀಸ್ ಠಾಣೆ, ಸಾಸ್ತಾನ, ಸಾಲಿಗ್ರಾಮ, ಗಂಗೊಳ್ಳಿ, ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಡಿ ಟೀಂ ಗರುಡಾ ತಂಡದ ಸದಸ್ಯರನ್ನು ಬಂಧಿಸಿ ಶಿಕ್ಷೆ ವಿಧಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಉಡುಪಿಯಲ್ಲಿ ನಡೆದ ಸರಣಿ
ಕಳ್ಳತನ ಪ್ರಕರಣದಲ್ಲಿಯೂ ಈ ತಂಡ ಭಾಗಿಯಾಗಿದ್ದು, ಪೊಲೀಸರು ಸದಸ್ಯರನ್ನು ವಶಕ್ಕೆ ಪಡೆದುಕೊಂಡಿದ್ದರು. ತಂಡದೊಳಗಿನ ವೈಷಮ್ಯದ ಕಾರಣ ಕೆಲವು ಸಮಯ ನಿಷ್ಕ್ರಿಯವಾಗಿದ್ದ ಈ ಗ್ಯಾಂಗ್ ಈಗ ಮತ್ತೆ ಸಕ್ರಿಯವಾಗಿದ್ದು, ದುಷ್ಕೃತ್ಯದಲ್ಲಿ ಭಾಗಿಯಾಗಿದೆ. ಬೀಟ್ ಕರ್ತವ್ಯಕ್ಕೆ ಪೊಲೀಸರದ್ದೇ “101 ಸಮಸ್ಯೆ’
ಉಡುಪಿ: ಜಿಲ್ಲೆಯ ಎಲ್ಲ ಠಾಣೆ ವ್ಯಾಪ್ತಿಯಲ್ಲಿಯೂ ಬೀಟ್ ವ್ಯವಸ್ಥೆ ನಿಷ್ಕ್ರಿಯವಾಗಲು ಪೊಲೀಸರಿಗೆ ವಾಹನ ವ್ಯವಸ್ಥೆ ಇಲ್ಲದಿರುವುದು ಕೂಡ ಬಹುದೊಡ್ಡ ಕಾರಣವಾಗಿದೆ. ಇನ್‌ಸ್ಪೆಕ್ಟರ್‌ಗಳ ಓಡಾಟಕ್ಕೆ ಒಂದು ವಾಹನವಿದ್ದರೆ ಬೀಟ್ ಕರ್ತವ್ಯಕ್ಕೆ ತೆರಳುವವರಿಗೆ ತಮ್ಮ ಖಾಸಗಿ ವಾಹನಗಳೇ ಆಧಾರವಾಗಿದೆ. ಹೊಯ್ಸಳ ವಾಹನ ಗಸ್ತು ನಿಲ್ಲಿಸಿರುವ ಕಾರಣ ಪೊಲೀಸರು ಬೈಕ್‌ಗಳಲ್ಲಿ ತೆರಳಿದರೆ ಪುಂಡ-ಪೋಕರಿಗಳಿಗೆ ಅವರು ಪೊಲೀಸರು ಹೌದೋ ಅಲ್ಲವೋ ಎಂದೂ ತಿಳಿಯುವುದಿಲ್ಲ. ಜತೆಗೆ ಇನ್‌ಸ್ಪೆಕ್ಟರ್ ಹೊರತುಪಡಿಸಿ ಉಳಿದ ಬೀಟ್ ಸಿಬಂದಿಗೆ ಭತ್ತೆ ಕೂಡ ಸಿಗದ ಕಾರಣ ಕರೆ ಬಂದರಷ್ಟೇ ಸ್ಥಳಕ್ಕೆ ತೆರಳುವ ಘಟನೆಗಳು ನಡೆಯುತ್ತಿವೆ. ಪೊಲೀಸರಿಗೆ ಭದ್ರತೆ ಸವಾಲು
ಆರೋಪಿಗಳು ತಂಡ-ತಂಡವಾಗಿರುವಾಗ ಒಂದಿಬ್ಬರು ಪೊಲೀಸರು ಹೋದರೆ ಅವರ ಮೇಲೆಯೇ ದಾಳಿ ಮಾಡುವ ಸಾಧ್ಯತೆಗಳೂ ಇರುತ್ತವೆ. ಕೆಲವು ತಿಂಗಳುಗಳ ಹಿಂದೆ ಮಲ್ಪೆ ಠಾಣೆಯ ಮಹಿಳಾ ಪಿಎಸ್‌ಐ ಮೇಲೆಯೇ ಹಲ್ಲೆ ಹಾಗೂ ಉಡುಪಿ ನಗರ ಠಾಣೆ ಸಿಬಂದಿ ಮೇಲೂ ಹಲ್ಲೆ ನಡೆದಿತ್ತು. ಪೊಲೀಸರ ಸ್ಥಿತಿ ಹೀಗಾದರೆ ಹೇಗೆ ಎಂಬ ಪ್ರಶ್ನೆಯಾಗಿದೆ.